ಸಿಂಧನೂರು: ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಯಾವುದೇ ಕಾರಣಕ್ಕೂ ರದ್ದುಪಡಿದಂತೆ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೋಂದಾಯಿತ ಕಾರ್ಮಿಕರ ಕುಟುಂಬಗಳಿಗೆ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಕುಟುಂಬವನ್ನು ರಕ್ಷಣೆ ಮಾಡುವುದರ ಜೊತೆಗೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಸರಕಾರದ ಸೌಲಭ್ಯ ಪಡೆದುಕೊಂಡು ಅವಕಾಶ ಬಂದಾಗ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಿದೆ. ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ; ಬಡವನಾಗಿ ಸಾಯುವುದು ನಿನ್ನ ತಪ್ಪು ಎಂಬ ಮಾತನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಹಣವನ್ನು ನಿಮಗೇ ತಲುಪಿಸುವ ಉದ್ದೇಶದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸದನದಲ್ಲಿ ಧ್ವನಿ ಎತ್ತಲಾಗುವುದು. ಕಾರ್ಮಿಕ ಮಂಡಳಿಯನ್ನು ಮುಂದುವರಿಸುವಂತೆ ಒತ್ತಾಯಿಸಲಾಗುವುದು ಎಂದರು.
ಕಾರ್ಮಿಕ ಮುಖಂಡ ಶೇಕ್ಷ ಖಾದ್ರಿ ಮಾತನಾಡಿ, ಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಗಳು ಗಮನ ಹರಿಸಬೇಕು. ಆದರೆ, ಕಲ್ಯಾಣ ಮಂಡಳಿ ರದ್ದುಗೊಳಿಸುವಂತೆ ಮಾರಕ ನಿರ್ಧಾರದತ್ತ ಸರಕಾರ ಹೊರಟಿರುವುದು ಕಳವಳಕಾರಿ. ಈ ಬಗ್ಗೆ ಜನಪ್ರತಿನಿಧಿಗಳು ಗಟ್ಟಿಯಾಗಿ ಪ್ರಶ್ನಿಸಬೇಕು ಎಂದು ತಮ್ಮ ಬೇಡಿಕೆ ಮಂಡಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿ ಬೋಪಾಲ್ ದೋಪಾಲ್, ಕಾರ್ಮಿಕ ಮುಖಂಡರಾದ ಮುನಿಸ್ವಾಮಿ, ಹನುಮೇಶ್ ಸೇರಿದಂತೆ ಅನೇಕರು ಇದ್ದರು.