Advertisement

ನನಗೂ ಬಿಜೆಪಿ ಸೇರಲು ಆಫರ್‌ ಬಂದಿತ್ತು: ನಾಡಗೌಡ

05:53 PM May 28, 2022 | Shwetha M |

ಮುದ್ದೇಬಿಹಾಳ: ಜೆಡಿಎಸ್‌ ಪಕ್ಷದಲ್ಲಿ ವಾಕ್‌ ಸ್ವಾತಂತ್ರ್ಯ ಇಲ್ಲದ್ದರಿಂದ ಮತ್ತು ಇತ್ತೀಚಿನ ದಿನಗಳಲ್ಲಿ ಅದೊಂದು ವ್ಯವಹಾರಿಕ ಪಕ್ಷವಾಗಿ ಬದಲಾಗಿದ್ದರಿಂದ ಬೇಸತ್ತು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಆ ಪಕ್ಷ ತೊರೆದಿರಬಹುದು ಎಂದು ಮಾಜಿ ಸಚಿವ ಸಿ.ಎಸ್‌. ನಾಡಗೌಡ ವಿಶ್ಲೇಷಿಸಿದ್ದಾರೆ.

Advertisement

ಪಟ್ಟಣದ ಗಣೇಶ ನಗರದಲ್ಲಿರುವ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ ಅವರ ನಿವಾಸಕ್ಕೆ ಸೌಹಾರ್ದಯುತ ಭೇಟಿಗೆ ಆಗಮಿಸಿ ಲೋಕಾಭಿರಾಮವಾಗಿ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಅವರು, ಜೆಡಿಎಸ್‌ ಪಕ್ಷದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಇದು ಯಾರಿಗಾದರೂ ಸಹಜವಾಗಿ ಅರ್ಥವಾಗುವಂಥದ್ದು. ಚಲುವನಾರಾಯಣಸ್ವಾಮಿ, ಜಮೀರ್‌ ಅಹ್ಮದ್‌ ಆದಿಯಾಗಿ ಹಲವು ಧುರೀಣರು ಆ ಪಕ್ಷ ತೊರೆದಿರುವ ಹಿಂದೆ ಇದೇ ಕಾರಣದ ಜೊತೆಗೆ ಇನ್ನೂ ಹಲವು ಕಾರಣ ಇರಬಹುದು. ಇದೀಗ ಶಾಸಕ ಶಿವಲಿಂಗೇಗೌಡ ಅವರೂ ಪಕ್ಷ ತೊರೆಯುವ ಮಾತು ಕೇಳಿಬರತೊಡಗಿದೆ. ಇತ್ತೀಚಿನ ವರ್ಷಗಳಲ್ಲಿ ಆ ಪಕ್ಷ ವ್ಯಾಪಾರೀಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತಿರುವ ಹಿನ್ನೆಲೆ ಬೇಸತ್ತು ಹಿರಿಯರು ಪಕ್ಷ ತೊರೆಯುತ್ತಿರುವ ಮಾತು ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿದೆ ಎಂದರು.

ಇದು ಕೇವಲ ಜೆಡಿಎಸ್‌ಗೆ ಮಾತ್ರ ಸೀಮಿತವಾಗಿಲ್ಲ. ಯಾವ ಪಕ್ಷದಲ್ಲಿ ವಾಕ್‌ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಾರೋ ಆ ಪಕ್ಷದಲ್ಲಿ ಇರಲು ಅನೇಕರು ಬಯಸುವುದಿಲ್ಲ. ಇದ್ದರೂ ಅದು ನೆಪಕ್ಕೆ ಮಾತ್ರವೇ ಹೊರತು ಮನಃಪೂರ್ವಕವಾಗಿಯಂತೂ ಅಲ್ಲ ಎಂದರು.

ಹೊರಟ್ಟಿಗೆ ಮುಖ್ಯಮಂತ್ರಿ ಯೋಗ ಇತ್ತು

ಹಿಂದೆ ಯಡಿಯೂರಪ್ಪನವರಿಗೆ ಸಿಎಂ ಮಾಡೊಲ್ಲ ಎನ್ನುವ ಪುಕಾರು ಹಬ್ಬಿದಾಗ ಅವರ ಸಿಎಂ ಖುರ್ಚಿ ಅಲುಗಾಡಲು ಶುರುವಾಗಿತ್ತು. ಆಗ ಉತ್ತರ ಕರ್ನಾಟಕ ಭಾಗದ ಬಲಿಷ್ಠ ಲಿಂಗಾಯತ ಸಮುದಾಯಕ್ಕೆ ಸೇರಿದ್ದ ಹೊರಟ್ಟಿ ಅವರನ್ನು ಬಿಜೆಪಿಗೆ ಸ್ವತಃ ಯಡಿಯೂರಪ್ಪನವರೇ ಆಹ್ವಾನಿಸಿದ್ದರು. ನನಗೆ ಮುಖ್ಯಮಂತ್ರಿ ಕೊಡದಿದ್ದರೆ ನಿಮಗೆ ಕೊಡಿಸುತ್ತೇನೆ ಎಂದು ಹೊರಟ್ಟಿಯವರಿಗೆ ಹೇಳಿದ್ದರು. ಆದರೆ ಹೊರಟ್ಟಿಯವರು ತಮ್ಮ ಪಕ್ಷ ನಿಷ್ಠೆ ಕಾರಣ ಆಗ ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿರಲಿಲ್ಲ ಎಂದು ಬಾಂಬ್‌ ಸಿಡಿಸಿದರು.

Advertisement

ಕಾರಜೋಳ, ಜಿಗಜಿಣಗಿ ಕೂಡಾ ಕರೆದಿದ್ದರು

ಸಚಿವ ಗೋವಿಂದ ಕಾರಜೋಳ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರೂ ನನ್ನನ್ನು ಬಿಜೆಪಿ ಸೇರುವಂತೆ ಹಲವು ಬಾರಿ ಆಹ್ವಾನಿಸಿದ್ದರು. ಈಗಿನ ಮುದ್ದೇಬಿಹಾಳ ಬಿಜೆಪಿ ಶಾಸಕರು (ಎ.ಎಸ್‌.ಪಾಟೀಲ ನಡಹಳ್ಳಿ) ಆಗ ಕಾಂಗ್ರೆಸ್‌ನಲ್ಲಿದ್ದಾಗ ಅವರು ಬಿಜೆಪಿ ಸೇರುವ ಅಪೇಕ್ಷೆ ವ್ಯಕ್ತಪಡಿಸಿದ್ದನ್ನು ಜಿಗಜಿಣಗಿ, ಕಾರಜೋಳ ಅವರು ನನ್ನ ಬಳಿ ಹೇಳಿ ಇವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳೋಣವೇ ಎಂದು ಕೇಳಿದ್ದರು. ನಾನು ಅದಕ್ಕೆ ನೀವು ಯಾರನ್ನು ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳಲು ಸ್ವತಂತ್ರರು ಎಂದು ಹೇಳಿದ್ದೆ ಹೊರತು ಸೇರಿಸಿಕೊಳ್ಳಬೇಡಿ ಎಂದು ಹೇಳಲಿಲ್ಲ ಎಂದರು.

ವಿಧಾನಪರಿಷತ್‌ ಚುನಾವಣೆ ವಿಚಿತ್ರವಾಗಿದೆ

ಪ್ರಸ್ತುತ ನಡೆಯುತ್ತಿರುವ ವಾಯುವ್ಯ ಮತ್ತು ಪಶ್ಚಿಮ ಕ್ಷೇತ್ರಗಳ ವಿಧಾನ ಪರಿಷತ್‌ ಚುನಾವಣೆಯ ಕುರಿತು ಮಾತನಾಡಿದ ಅವರು, ಈ ಬಾರಿ ಚುನಾವಣೆ ವಿಚಿತ್ರವಾಗಿದೆ. 6-7 ಬಾರಿ ಎಂಎಲ್ಸಿಯಾಗಿರುವ ಹೊರಟ್ಟಿಯವರು ಬೇರೆಯವರಿಗೆ ಅವಕಾಶ ಕೊಡಬೇಕಿತ್ತು. ವಾಯುವ್ಯ ಕ್ಷೇತ್ರದಲ್ಲಿ ನಿರಾಣಿ ಅವರ ಪ್ರಭಾವ ಇದೆ. ನಮ್ಮ ಪಕ್ಷದಿಂದ ಹೊಸಬರನ್ನು ನಿಲ್ಲಿಸಲಾಗಿದೆ. ಪ್ರಚಾರ ಆರಂಭವಾದ ನಂತರ ಮತದಾನಕ್ಕೆ ಕೊನೆ ಎರಡು ದಿನಗಳಲ್ಲಿ ಮತ ಯಾರಿಗೆ ಹಾಕಬೇಕು ಎಂದು ಮತದಾರರು ತೀರ್ಮಾನಿಸುತ್ತಾರೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು.

ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಬೇಸರ

ರಾಜಕಾರಣದಲ್ಲಿ ಮೊದಲಿದ್ದ ಮೌಲ್ಯ ಇಲ್ಲವಾಗಿದೆ. ಜನರ ಮನಸ್ಸಲ್ಲಿ ಯಾರು ಇರುತ್ತಾರೆ ಅನ್ನೋದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಮತದಾನದ ಕೊನೇಯ ಎರಡು ದಿನಗಳೇ ಇತ್ತೀಚಿನ ಚುನಾವಣೆಗಳಲ್ಲಿ ನಿರ್ಣಾಯಕ ಎನ್ನಿಸಿಕೊಳ್ಳುತ್ತಿವೆ. ಹಣದ ಹೊಳೆಯೇ ಹರಿಯುತ್ತಿದೆ. ಮೌಲ್ಯಗಳು ಮಾಯವಾಗಿವೆ. ನಮ್ಮ ಜೊತೆಗೇ ಇರುವ ಮತದಾರ ಕೊನೇಯ ಕ್ಷಣದಲ್ಲಿ ಯಾರ ಕಡೆ ವಾಲುತ್ತಾನೆ ಎಂದು ಹೇಳುವುದು ಕಷ್ಟಕರ. ಮೊದಲೆಲ್ಲ ಗೆರೆ ಕೊರೆದಂತೆ ಇವರು ನಮ್ಮವರು, ನಮ್ಮವರಲ್ಲ ಎಂದು ಹೇಳಬಹುದಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎಂದು ಈಗಿನ ರಾಜಕೀಯ ವ್ಯವಸ್ಥೆ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಕಾಂಗ್ರೆಸ್‌ ಮುಖಂಡ ಅಯ್ಯೂಬ ಮನಿಯಾರ, ಎಚ್‌.ಆರ್‌. ಬಾಗವಾನ ಸೇರಿ ಹಲವರು ಇದ್ದರು.

ಕಾಂಗ್ರೆಸ್‌ ನಿಷ್ಠೆ ಪಕ್ಷ ತೊರೆಯಲು ಬಿಡಲಿಲ್ಲ

ನಾನು ಹಿಂದೆ ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದಾಗ ಆಗ ಕೇಂದ್ರ ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕ ಕರ್ನಾಟಕದ ಅನಂತಕುಮಾರ ಅವರ ಪರಿಚಯ ಚೆನ್ನಾಗಿತ್ತು. ಅವರು ನನ್ನ ಆತ್ಮೀಯ ಸ್ನೇಹಿತರ ಬಳಗದಲ್ಲಿ ಒಬ್ಬರಾಗಿದ್ದರು. ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನ್‌ನಲ್ಲಿ ಮಾಡುವ ದೋಸೆ ಅವರಿಗೆ ಬಹಳ ಪ್ರಿಯವಾಗಿತ್ತು. ಒಂದು ಸಾರಿ ನಾವಿಬ್ಬರೂ ಸೇರಿ ದೋಸೆ ತಿನ್ನೋಣ ಅಂತ ಹೇಳಿ ನನ್ನ ರೂಮಿಗೆ ಬಂದು ದೋಸೆ ಸವಿಯುತ್ತ ನನ್ನನ್ನು ಬಿಜೆಪಿ ಸೇರಲು ಆಹ್ವಾನಿಸಿದ್ದರು. ಮುಖ್ಯಮಂತ್ರಿ ಆಗುವ ಯೋಗ್ಯತೆ ನಿನಗಿದೆ. ನೀನು ಬಿಜೆಪಿ ಸೇರು. ನಿನಗೆ ಬೇಕಾದಷ್ಟು ಹಣ ನಾನು ಕೊಡುತ್ತೇನೆ. ಮುಖ್ಯಮಂತ್ರಿ ಆಗಲೂ ನೆರವಾಗುತ್ತೇನೆ ಎಂದೆಲ್ಲ ಹೇಳಿದ್ದರು. ಆದರೆ ನನ್ನ ಕಾಂಗ್ರೆಸ್‌ ಪಕ್ಷ ನಿಷ್ಠೆ ನನ್ನನ್ನು ಪಕ್ಷ ತೊರೆಯಲು ಬಿಡಲಿಲ್ಲ. ಅನಂತಕುಮಾರ ಅವರ ಪ್ರೀತಿಗೆ ನಾನು ಶರಣಾಗಿದ್ದರೂ ನನಗೆ ಎಲ್ಲವನ್ನೂ ಕೊಟ್ಟಿರುವ ಪಕ್ಷ ತೊರೆಯಲು ಮನಸ್ಸು ಮಾಡಲಿಲ್ಲ. ಮುಂದೆ ಗೋವಿಂದ ಕಾರಜೋಳ ಅವರನ್ನು ನನ್ನ ಮನೆಗೆ ಕಳಿಸಿ ನನಗೆ ಪಕ್ಷ ಸೇರುವಂತೆಯೂ ಅನಂತಕುಮಾರ ಪ್ರಯತ್ನ ಮಾಡಿದ್ದರು ಎಂದು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next