ನ್ಯೂಯಾರ್ಕ್: ಅಮೆರಿಕಾದ ಉನ್ನತ ವೈದ್ಯಕೀಯ ಆರೋಗ್ಯ ಸಂಸ್ಥೆಯಾದ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಕೋವಿಡ್ -19 ಕುರಿತ ಹೊಸ ರೋಗಲಕ್ಷಣಗಳನ್ನು ಗುರುತಿಸಿದ್ದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಸಿಡಿಸಿ ಅಧಿಕಾರಿಗಳು ಸುಧಾರಿತ ಪ್ರಯೋಗಾಲಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು COVID-19 ನ ಹೊಸ ರೋಗಲಕ್ಷಣಗಳನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಈ ವೈರಸ್ ಲಘು ಲಕ್ಷಣಗಳಿಂದ ಹಿಡಿದು ತೀವ್ರ ಅನಾರೋಗ್ಯದವರೆಗಿನ ಲಕ್ಷಣಗಳನ್ನು ಒಳಗೊಂಡಿದೆ. ಸೋಂಕಿಗೆ ತುತ್ತಾದ 2 ರಿಂದ 14 ದಿನಗಳ ನಂತರ ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ.
ಜ್ವರ, ಕೆಮ್ಮು , ಉಸಿರಾಟದ ತೊಂದರೆ ಕೋವಿಡ್ 19ನ ಲಕ್ಷಣಗಳೆಂದು ಈ ಮೊದಲು ಸಿಡಿಸಿ ತಿಳಿಸಿತ್ತು. ಉಸಿರಾಡಲು ತೊಂದರೆ, ಎದೆಯಲ್ಲಿ ನಿರಂತರ ನೋವು, ಒತ್ತಡ, ಮಾನಸಿಕ ಗೊಂದಲ, ಅಥವಾ ನಿದ್ದೆಯಿಂದ ಎದ್ದ ನಂತರ ಹೆಚ್ಚಿನ ಮಂಪರು, ತುಟಿಗಳು ಅಥವಾ ಮುಖ ನೀಲಿಗಟ್ಟುವಿಕೆ ಇವೆ ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಆರೈಕೆ ಪಡೆಯಬೇಕು ಎಂದು ಸಿಡಿಸಿ ಸಲಹೆ ನೀಡಿದೆ.
ಮೂಗು ಸೋರುವಿಕೆ ಕೋವಿಡ್ 19 ಒಂದು ಅಪರೂಪವಾದ ಲಕ್ಷಣವಾಗಿದ್ದು ಸೀನುವಿಕೆ ಸೋಂಕಿನ ಲಕ್ಷಣವಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಹೊಸ ಲಕ್ಷಣಗಳು ಇಂತಿವೆ: ಶೀತ, ಪುನರಾವರ್ತಿತ ಶೀತ, ಸ್ನಾಯು ಸೆಳೆತ, ತಲೆನೋವು, ರುಚಿ ಅಥವಾ ವಾಸನೆಯು ಗೊತ್ತಾಗದಿರುವಿಕೆ.
ಗಮನಾರ್ಹ ಸಂಗತಿಯೆಂದರೇ ಸೋಂಕಿನ ಈ ಲಕ್ಷಣಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ FAQ ವೆಬ್‌ಪುಟದಲ್ಲಿ ಪಟ್ಟಿ ಮಾಡಲಾಗಿಲ್ಲ. WHO ವೆಬ್‌ಪುಟದಲ್ಲಿ, COVID-19 ನ ಲಕ್ಷಣಗಳನ್ನು ಜ್ವರ, ಒಣ ಕೆಮ್ಮು, ದಣಿವು, , ಮೂಗು ಸೋರುವಿಕೆ, ಗಂಟಲು ನೋವು ಮತ್ತು ಅತಿಸಾರ ಎಂದು ಉಲ್ಲೇಖಿಸಲಾಗಿದೆ.