Advertisement

ಉದ್ಯೋಗ ಭಾಗ್ಯದತ್ತ ಹೊಸಹೆಜ್ಜೆ !

03:03 PM Oct 28, 2018 | Team Udayavani |

ಹುಬ್ಬಳ್ಳಿ: ಸರಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ನೋಂದಣಿ, ಮಾಹಿತಿ ಮೂಲಕ ಮಹತ್ವದ ವೇದಿಕೆಯಾಗಿದ್ದ ಉದ್ಯೋಗ ವಿನಿಮಯ ಕಚೇರಿ ಇದೀಗ ಹಲವು ಹೊಸತನಗಳನ್ನು ಅಳವಡಿಸಿಕೊಂಡಿದೆ. ತರಬೇತಿ ಜತೆಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವಕಾಶಕ್ಕೆ ಮುಂದಾಗಿದೆ. ಕಳೆದ 10 ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 1,277 ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ.

Advertisement

ಸರಕಾರಿ ಉದ್ಯೋಗ ನೇಮಕ ಕುಸಿತದಿಂದ ಉದ್ಯೋಗ ವಿನಿಮಯ ಕಚೇರಿ ಇದ್ದೂ ಇಲ್ಲದ ಸ್ಥಿತಿಗೆ ತಲುಪಿತ್ತಾದರೂ, ಇದೀಗ ಖಾಸಗಿ ರಂಗಕ್ಕೆ ಮಾನವ ಸಂಪನ್ಮೂಲ ನೀಡುವ ಉದ್ಯೋಗ ಮೇಳ, ವೃತ್ತಿಪರ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ತರಬೇತಿ ನೀಡುತ್ತಿರುವುದರಿಂದ ಉದ್ಯೋಗ ಆಕಾಂಕ್ಷಿಗಳು ಮತ್ತೆ ಉದ್ಯೋಗ ವಿನಿಮಯ ಕಚೇರಿ ನೋಂದಣಿಗ ಆಸಕ್ತಿ ತೋರಿದ್ದಾರೆ.

ಸಕಲ ಸೌಲಭ್ಯ: ಇಲ್ಲಿನ ನವನಗರದ ಕುವೆಂಪು ರಸ್ತೆಯಲ್ಲಿರುವ ಕಚೇರಿಯಲ್ಲಿ ವಿವಿಧ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೆ ಅಗತ್ಯವಾದ ವ್ಯವಸ್ಥಿತ ತರಬೇತಿ ಹಾಗೂ ತರಗತಿ ಕೊಠಡಿಗಳು, ಕಂಪ್ಯೂಟರ್‌ ತರಬೇತಿಗೆ ಪೂಕರ ವ್ಯವಸ್ಥೆಯಿದೆ. ವೃತ್ತಿಪರ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನಾ ಸಿಬ್ಬಂದಿ ಇದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಬೇಸಿಕ್‌ ಕಂಪ್ಯೂಟರ್‌ ತರಬೇತಿಗೆ ಗ್ರಾಮೀಣ ಭಾಗದ ಹಾಗೂ ಸರಕಾರಿ ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಕಷ್ಟು ಬೇಡಿಕೆಯಿದೆ. ಕೇಂದ್ರ ಸರಕಾರದ ಎಂಸಿಸಿ ಯೋಜನೆಯಡಿ ಉದ್ಯೋಗ ಆಕಾಂಕ್ಷಿಗಳಿಗೆ ಸಾಕಷ್ಟು ನೆರವು ನೀಡಲಾಗುತ್ತಿದ್ದು, ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.

ಉದ್ಯೋಗ ಮೇಳವೇ ಆಧಾರ: ಜಿಲ್ಲೆಯಲ್ಲಿನ ಕೈಗಾರಿಕೆಗಳು, ಸಂಘ-ಸಂಸ್ಥೆಗಳು ಸೇರಿದಂತೆ ಸುಮಾರು 489 ಉದ್ಯೋಗ ನೀಡುವಂತಹ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಪ್ರಮುಖ ಕೈಗಾರಿಕೆಗಳು, ಸಂಘ-ಸಂಸ್ಥೆಗಳಿಗೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ಖಾಲಿ ಹುದ್ದೆಗಳ ಮಾಹಿತಿ ಪಡೆದು, ಮೂರು ತಿಂಗಳಿಗೊಮ್ಮೆ ಕಚೇರಿ ಆವರಣದಲ್ಲೇ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ.

ಕಡಿಮೆಯಾಗಿಲ್ಲ ಬೇಡಿಕೆ: ಬಿಇ, ಎಂಇ ಪದವೀಧರರು ಇಂದಿಗೂ ಉದ್ಯೋಗ ವಿನಿಮಯ ಕಚೇರಿಯಲ್ಲಿಯೇ ಹೆಸರು ನೋಂದಾಯಿಸುತ್ತಿದ್ದಾರೆ. ಹಿಂದೆಗಿಂತ ಇಂದು ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಐಟಿಐ, ಡಿಪ್ಲೋಮಾ ಪೂರೈಸಿದ ಸ್ಥಳೀಯ ಯುವಕರಿಗೆ ಇದೊಂದು ಉದ್ಯೋಗ ಕಲ್ಪಿಸುವ ಕೇಂದ್ರವಾಗಿದೆ. ಹೀಗಾಗಿ 3806 ಮಹಿಳೆಯರು, 8380 ಪುರುಷರು ಸೇರಿದಂತೆ ಒಟ್ಟು 12,186 ಉದ್ಯೋಗ ಆಕ್ಷಾಂಕ್ಷಿಗಳು ನೋಂದಣಿ ಮಾಡಿಸಿದ್ದಾರೆ.

Advertisement

ನೋಂದಣಿಯಿಂದ ಹಿಡಿದು ಇಲ್ಲಿ ದೊರೆಯುವ ಯಾವುದೇ ಸೇವೆಗೆ ಶುಲ್ಕವಿಲ್ಲ. ಕಾಲ ಕಾಲಕ್ಕೆ ಆಯೋಜಿಸುವ ತರಬೇತಿ, ಕಾರ್ಯಾಗಾರ, ಉದ್ಯೋಗ ಮೇಳವನ್ನು ಆಕಾಂಕ್ಷಿಗಳು ಸದುಪಯೋಗ ಪಡೆಯಬೇಕು. ಆಪೇಕ್ಷಿಸುವ ಯಾವುದೇ ಕಾಲೇಜುಗಳಿಗೆ ತೆರಳಿ ವೃತ್ತಿ ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ. ಅರ್ಹರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾರ್ಗದರ್ಶನ, ತರಬೇತಿ ಕೊಡಿಸಲಾಗುತ್ತಿದೆ.
ಸಾಧನಾ ಪೋಟೆ,
ಹಿರಿಯ ಸಹಾಯಕ ನಿರ್ದೇಶಕಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ

ಹೇಮರಡ್ಡಿ ಸೈದಾಪುರ 

Advertisement

Udayavani is now on Telegram. Click here to join our channel and stay updated with the latest news.

Next