Advertisement

ಪಾರ್ಕಿಂಗ್‌ ಪ್ರಾಬ್ಲಂಗೆ ಹೊಸ ಪರಿಹಾರ

01:04 AM May 13, 2019 | Team Udayavani |

ಬೆಂಗಳೂರು: ನಗರದಲ್ಲಿನ ಪಾರ್ಕಿಂಗ್‌ ಸಮಸ್ಯೆ ಸಂಚಾರ ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿದ್ದು, ಆ ಬಗ್ಗೆ ಕ್ರಮಕ್ಕೆ ಮುಂದಾಗಿರುವ ಸಂಚಾರ ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

Advertisement

ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌, ನಗರದ 44 ಸಂಚಾರ ಪೊಲೀಸ್‌ ಠಾಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ, ಕೇಂದ್ರ ಸಂಚಾರ ವಿಭಾಗಕ್ಕೆ ಮಾಹಿತಿ ರವಾನಿಸುವಂತೆ ಲಿಖೀತ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಪಾರ್ಕಿಂಗ್‌ ಸ್ಥಳಗಳನ್ನು ಹೆಚ್ಚುವರಿಯಾಗಿ ಗುರುತಿಸಿ ಸಮಸ್ಯೆಗೆ ಕಡಿವಾಣ ಹಾಕಲು ಯೋಚಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ವಾಹನಗಳ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ವಿವಿಧ ಪೌರಸಂಸ್ಥೆಗಳೊಂದಿಗೆ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಗಳಲ್ಲಿ, ನಗರ ವ್ಯಾಪ್ತಿಯಲ್ಲಿ ವಾಹನಗಳಿಗೆ ಸುರಕ್ಷಿತ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸುವುದು ಹಾಗೂ ಈ ಸಂಬಂಧ ನಗರ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗಾಗಿ ಖಾಲಿ ಇರುವ ಜಾಗಗಳನ್ನು ಗುರುತಿಸುವುದು ಸಹ ಚರ್ಚೆಯಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ, ತಮ್ಮ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ, ಅವುಗಳ ಮಾಹಿತಿಗಳನ್ನು ಏ.30ರೊಳಗೆ ಕೇಂದ್ರ ಕಚೇರಿಗೆ ಕಳುಹಿಸಲು ಸೂಚಿಸಲಾಗಿದೆ.

50 ರಿಂದ100 ಜಾಗ ಗೊತ್ತಾಗಿದೆ: ಈ ಸಂಬಂಧ ಕಳೆದ ಒಂದು ತಿಂಗಳಿಂದ ನಗರದ ವಿವಿಧ ಸಂಚಾರ ಠಾಣಾ ವ್ಯಾಪ್ತಿಯಲ್ಲಿರುವ ಸುಮಾರು 50ರಿಂದ 100 ಸರ್ಕಾರಿ ಜಮೀನುಗಳ ವಿವರ ಸಿಕ್ಕಿದೆ. ಈ ಪ್ರಕ್ರಿಯೆ ಮುಂದುವರಿಯಲಿದ್ದು, ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಸರ್ಕಾರ, ಬಿಬಿಎಂಪಿ ಹಾಗೂ ಸಂಬಂಧಿಸಿದ ಇಲಾಖೆಗೆ ರವಾನಿಸಿ, ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ಪಿ.ಹರಿಶೇಖರನ್‌ ಹೇಳಿದರು.

Advertisement

ಪ್ರಸ್ತುತ 78 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಪ್ರತಿನಿತ್ಯ 2.5 ಲಕ್ಷ ಹೊಸ ವಾಹನಗಳು ನೊಂದಣಿಯಾಗುತ್ತಿವೆ. ಪ್ರತಿ 200-300 ಮೀಟರ್‌ ಉದ್ದದ ರಸ್ತೆಗಳಲ್ಲಿ 1:4 ಅನುಪಾತದಲ್ಲಿ ವಾಹನಗಳ ನಿಲುಗಡೆ ಆಗುತ್ತಿವೆ. ಅಂತಹ ರಸ್ತೆಯನ್ನು ಅತಿಕ್ರಮಿಸುವ ವಾಹನಗಳ ಚಾಲಕರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ, ದಂಡ ವಿಧಿಸಿದರೂ ಜಾಗೃತರಾಗುವುದಿಲ್ಲ. ಪ್ರಮುಖವಾಗಿ ಓಲಾ ಮತ್ತು ಊಬರ್‌ ಕ್ಯಾಬ್‌ ಚಾಲಕರು ರಸ್ತೆ ಬದಿಯೇ ನಿಲ್ಲಿಸುವುದರಿಂದ ಇತರೆ ವಾಹನಗಳು ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದರು.

ನಿಯಮ ಉಲ್ಲಂಘನೆ ಸಾಧ್ಯತೆ: “ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಂದರ್ಭಧಲ್ಲಿ ಸಿದ್ದಪಡಿಸಿದ ನೀಲನಕ್ಷೆಯಲ್ಲೇ ಪಾರ್ಕಿಂಗ್‌ ಜಾಗವನ್ನು ತೋರಿಸಬೇಕೆಂಬ ನಿಯಮವಿದೆ. ಒಂದು ವೇಳೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸದ ಕಟ್ಟಡ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ. ಆದರೆ, ಈ ರೀತಿ ಸರ್ಕಾರಿ ಜಮೀನಿನಲ್ಲಿ ಪಾರ್ಕಿಂಗ್‌ ಮಾಡುವುದರಿಂದ ನಿಯಮ ಉಲ್ಲಂಘನೆಯಾಗುತ್ತದೆ’ ಎಂದು ಸಾರಿಗೆ ತಜ್ಞ ಪ್ರೊ ಎಂ.ಎನ್‌.ಶ್ರೀಹರಿ ಅಭಿಪ್ರಾಯವ್ಯಕ್ತಪಡಿಸಿದರು.

ಅನಧಿಕೃತ ಪಾರ್ಕಿಂಗ್‌: ಸಾರ್ವಜನಿಕರಿಗೆ ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಸಂಸ್ಥೆಗಳು ವಿಫ‌ಲವಾಗಿವೆ. ಇದನ್ನೆ ಬಂಡವಾಳವಾಗಿಸಿಕೊಂಡಿರುವ ಕೆಲ ಖಾಸಗಿಯವರು ಅನಧಿಕೃತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಸರ್ಕಾರಕ್ಕೆ ಬರಬೇಕಾದ ಆದಾಯವನ್ನು ತಮ್ಮ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಪಾಲಿಕೆಯ ಕೆಲ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿದ್ದರೂ ನಗರದಲ್ಲಿನ ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಪಾಲಿಕೆ ಸಂಪೂರ್ಣವಾಗಿ ವಿಫ‌ಲವಾಗಿದೆ.

ಭವಿಷ್ಯದಲ್ಲಿ ಪಾರ್ಕಿಂಗ್‌ ವಾರ್‌
ಸೂಕ್ತ ಸಮಯದಲ್ಲಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್‌ ವ್ಯವಸ್ಥೆಗೆ ವೈಜ್ಞಾನಿಕವಾಗಿ ಕ್ರಮಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ “ಪಾರ್ಕಿಂಗ್‌ ವಾರ್‌’ ಆಗುತ್ತದೆ. ಹೀಗಾಗಿ ನಗರದಲ್ಲಿರುವ ಸರ್ಕಾರಿ ಜಮೀನುಗಳ ಪತ್ತೆ ಕಾರ್ಯಕ್ಕೆ ಸಂಚಾರ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ, ಪಾರ್ಕಿಂಗ್‌ ವ್ಯವಸ್ಥೆ ಮನವಿ ಮಾಡುತ್ತೇವೆ.
-ಪಿ.ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂಚಾರ ವಿಭಾಗ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next