Advertisement

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಹೊಸ ತಂತ್ರಾಂಶ ಅಳವಡಿಕೆ: ಜನರಲ್ಲಿ ಗೊಂದಲ

03:52 PM Jun 17, 2023 | Team Udayavani |

ಬ್ರಹ್ಮಾವರ: ಪ್ರಕ್ರಿಯೆ ಸರಳೀಕರಣ ಮತ್ತು ಜನರ ಸಮಯ ಉಳಿತಾಯದ ದೃಷ್ಟಿಯಿಂದ ರಾಜ್ಯದ ಬಹುತೇಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ 6 ಸಬ್‌ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅಳವಡಿಕೆಯಾಗಿದೆ. ಆದರೆ ಹೊಸ ವ್ಯವಸ್ಥೆಯ ವಿಧಾನಗಳು ದಸ್ತಾವೇಜು ಬರಹಗಾರರಿಗೆ, ಸಾಮಾನ್ಯ ಜನರಿಗೆ ಇನ್ನೂ ಅರಿಯದೆ ಗೊಂದಲದ ಗೂಡಾಗಿದೆ.

Advertisement

ಮೊದಲು ಪ್ರತಿಯೊಂದು ಕೆಲಸದ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳ ಪ್ರತಿಗಳನ್ನು ಉಪನೊಂದಣಾಧಿಕಾರಿ ಕಚೇರಿಗೆ ನೀಡಲಾಗಿ ಅಲ್ಲಿ ಸಿಬಂದಿ ಅವರೇ ಕಂಪ್ಯೂಟರ್‌ನಲ್ಲಿರುವ ತಂತ್ರಾಂಶಕ್ಕೆ ದಾಖಲಿಸುತ್ತಿದ್ದರು. ಪ್ರಸ್ತುತ ಮಧ್ಯವರ್ತಿಗಳ ಹಾವಳಿ, ಲಂಚಾವತಾರ ತಪ್ಪಿಸಿ ಶೀಘ್ರ ಸೇವೆ ಪಡೆಯುವ ಉದ್ದೇಶದಿಂದ ಜನರೇ ಮಾಹಿತಿ, ಅಂಕ ಅಂಶಗಳನ್ನು ಸಿಟಿಜನ್‌ ಲಾಗ್‌ಇನ್‌ ಮೂಲಕ ಫೀಡ್‌ ಮಾಡಬೇಕಾಗಿದೆ.
ಪಾವತಿಯನ್ನೂ ಆನ್‌ಲೈನ್‌ ಮೂಲಕ ತಲುಪಿಸಬೇಕಾಗಿದೆ. ಭಾವಚಿತ್ರ ಮತ್ತು ಬೆರಳಚ್ಚು ನೀಡಲು ಮಾತ್ರವೇ ಕಚೇರಿಗೆ ಬರುವ ಮೂಲಕ ಜನಸ್ನೇಹಿಗೊಳಿಸುವ ಉದ್ದೇಶ ಹೊಂದಿದೆ. ಆದರೆ ಜನರಿಗೆ ಪ್ರಕ್ರಿಯೆಯ ಹಂತದಲ್ಲಿನ ಗೊಂದಲದಿಂದ ಕಡತಗಳು ಬಾಕಿಯಾಗಿ ಪರದಾಡುತ್ತಿದ್ದಾರೆ. ದಿನಕ್ಕೆ 30ಕ್ಕೂ ಹೆಚ್ಚು ನೋಂದಣಿ ನಡೆಯುತ್ತಿದ್ದ ಕಚೇರಿಯಲ್ಲಿ ಬೆರಳೆಣಿಕೆಯಷ್ಟೇ ನೋಂದಣಿ ನಡೆಯುತ್ತಿದೆ. ಜನರಿಂದ ತುಂಬಿತುಳುಕುತ್ತಿದ್ದ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳು ಬಿಕೋ ಎನ್ನುತ್ತಿವೆ.

ಜನಸ್ನೇಹಿ ವ್ಯವಸ್ಥೆ
ಹೊಸ ವ್ಯವಸ್ಥೆ ಅಳವಡಿಕೆಯ ಪ್ರಾರಂಭದಲ್ಲಿ ಗೊಂದಲ ಸಹಜ. ಜನರಿಗೆ ತ್ವರಿತ ಗತಿಯಲ್ಲಿ ಸೇವೆ ಹಾಗೂ ಸಮಯದ ಉಳಿತಾಯದ ಸದುದ್ದೇಶದಿಂದ ಜನಸ್ನೇಹಿಯಾದ ಕಾವೇರಿ 2.0 ತಂತ್ರಾಂಶ ಅಳವಡಿಕೆಯಾಗಿದೆ. ಸಾರ್ವಜನಿಕರಿಗೆ ಯಾವುದೇ ಸಲಹೆ, ಮಾಹಿತಿ ಬೇಕಿದ್ದರೂ ತಿಳಿಸಲಾಗುವುದು.
-ಕೀರ್ತಿ ಕುಮಾರಿ, ಹಿರಿಯ ಉಪನೊಂದಾವಣಾಧಿಕಾರಿ, ಬ್ರಹ್ಮಾವರ

ತಂತ್ರಾಂಶ ಸುಧಾರಣೆಗೊಳ್ಳಲಿ
ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ಹೊಸ ತಂತ್ರಾಂಶ ಅಳವಡಿಕೆ ಉತ್ತಮ ಕಾರ್ಯ. ಆದರೆ ಇದರಲ್ಲಿನ ಕ್ಲಿಸ್ಟತೆಯಿಂದ ಪ್ರತಿಯೊಬ್ಬರಿಗೂ ತೊಂದರೆಯಾಗಿದೆ. ಇದರಲ್ಲಿರುವ ತೊಡಕುಗಳನ್ನು ನಿವಾರಿಸಿ ಸುಧಾರಿತ ರೂಪದಲ್ಲಿ ಜಾರಿಗೆ ತರುವಂತಾಗಬೇಕು.
-ಎಸ್‌. ರಾಜೇಶ್‌ ಶೆಟ್ಟಿ ಕುಮ್ರಗೋಡು, ದಸ್ತಾವೇಜು ಬರಹಗಾರರು, ಬ್ರಹ್ಮಾವರ

ತುರ್ತು ಗಮನ ಅಗತ್ಯ
ಕಾವೇರಿ 2 ತಂತ್ರಾಂಶದ ಬಗ್ಗೆ ಬಹಳಷ್ಟು ಗೊಂದಲಗಳಿದ್ದು ಜನಸಾಮಾನ್ಯರಿಗೆ ಈ ತಂತ್ರಾಂಶ ಅರ್ಥವಾಗುವುದಿಲ್ಲ. ಹೊಸ ತಂತ್ರಾಂಶ ಅಳವಡಿಸಿದ ನಂತರ ಮೊದಲಿನ ಹಾಗೆ ನೋಂದಣಿ ಆಗುತ್ತಿಲ್ಲ. ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿ ಬೇರೆ ಬೇರೆ ಸಾಲಗಳಿಗೆ ಸಂಬಂಧಪಟ್ಟಂತೆ ಅಡಮಾನ ಮಾಡಲು ತೊಂದರೆಯಾಗುತ್ತಿದ್ದು. ವಿಶೇಷವಾಗಿ ಗೃಹ ಸಾಲ ಮತ್ತು ವಿದ್ಯಾಭ್ಯಾಸ ಸಾಲಕ್ಕೆ ಸಂಬಂಧ ಸಂಬಂಧಪಟ್ಟಂತೆ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಕಾವೇರಿ 2 ತಂತ್ರಾಂಶದ ಬಗ್ಗೆ ಸೂಕ್ತ ಮಾಹಿತಿ ಮತ್ತು ಸರಳೀಕರಣವಾಗಿ ದಸ್ತಾವೇಜು ನೋಂದಣಿ ಮಾಡಲು ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕು.
-ಎಚ್‌. ಆನಂದ ಮಡಿವಾಳ, ನ್ಯಾಯವಾದಿ, ಉಡುಪಿ.

Advertisement

ಸರಕಾರದ ಗಮನಕ್ಕೆ
ಕಾವೇರಿ 2.0 ತಂತ್ರಾಂಶದ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಈಗಾಗಲೇ ಆರಂಭವಾದ ಕಾರಣ ಕೆಲವೆಡೆ ಸಮಸ್ಯೆ ಉದ್ಭವಿಸಿದೆ. ಮುಂದಿನ ದಿನದಲ್ಲಿ ಇವೆಲ್ಲ ಸರಿಯಾಗಲಿದೆ. ತಂತ್ರಾಂಶದಲ್ಲಿ ಕೆಲವೊಂದು ಸರಳೀಕರಣ ಮಾಡಿ ಅನುಕೂಲ ಕಲ್ಪಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು.
– ಶ್ರೀಧರ್‌, ಜಿಲ್ಲಾ ನೋಂದಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next