Advertisement

ವ್ಯಸನಮುಕ್ತಿಯಿಂದ ನವ ಸಮಾಜ ನಿರ್ಮಾಣ: ಸಚಿವ ಕೋಟ

12:09 AM Sep 15, 2019 | Sriram |

ಬೆಳ್ತಂಗಡಿ: ಮದ್ಯಮುಕ್ತರಾಗುವ ನಿರ್ಧಾರ ಸಮಾಜದ ನವನಿರ್ಮಾಣಕ್ಕೆ ಕಾರಣವಾಗಿದೆ. ಮದ್ಯವರ್ಜನ ಶಿಬಿರದ ಅವಿರತ ಶ್ರಮ ಕಂಡು ಸರಕಾರವು ಮದ್ಯ ನಿಯಂತ್ರಣ ಕುರಿತು ಪುನರ್‌ ಪರಿಶೀಲಿಸುವ ಅಗತ್ಯವಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಅಮೃತವರ್ಷಿಣಿ ಸಭಾಭವನ ದಲ್ಲಿ ನಡೆದ ವ್ಯಸನಮುಕ್ತ ಸಾಧಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾಸೋದ್ಯಮಕ್ಕೆ ಮಾರ್ಗದರ್ಶನ
ರಾಜ್ಯದಲ್ಲಿ ಪ್ರವಾಸೋದ್ಯಮ ಸ್ಥಳಗ ಳನ್ನು ಆಯ್ಕೆ ಮಾಡಲು ಇನ್ಫೋಸಿಸ್‌ನ ಸುಧಾ ಮೂರ್ತಿ ನೇತೃತ್ವದಲ್ಲಿ ಸರಕಾರ ತಂಡ ರಚಿಸಿದೆ. ಇದಕ್ಕೆ ಸಮಾಜದ ಒಳಿತಿಗಾಗಿ ನಿರಂತರ ಸೇವೆ ನೀಡುತ್ತಿ ರುವ ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರುಮಾತನಾಡಿ, ಅಭಿಮಾನ ಸ್ವಾಭಿಮಾನವಾಗಬೇಕಾದರೆ ದುಶ್ಚಟಗಳಿಂದ ಹೊರ ಬರಬೇಕು. ಕುಡುಕರು ದುಷ್ಟರಲ್ಲ, ಅವರ ಮನಸ್ಸಿಗೆ ಅಂಟಿದ ದುಶ್ಚಟ ಎಂಬ ರೋಗವನ್ನು ಹೊರದಬ್ಬಲು ಸಮಯ ಬೇಕಿರುವುದರಿಂದ ಶಿಬಿರದ ಮೂಲಕ ಪರಿವರ್ತನೆಗೆ ಒಳಪಡಿಸಲಾಗುತ್ತದೆ ಎಂದರು.

ಪ್ರೀತಿಯೆಂಬ ಔಷಧ
ದುಶ್ಚಟದಿಂದ ಹೊರಬಂದು ಸಮಾಜದಲ್ಲಿ ಸಮಯೋಚಿತ ಜೀವನ ನಡೆಸಲು ಮುಂದಾಗುವ ಪುರುಷರಿಗೆ ಮಾತೃ ಸ್ವರೂಪಿ ಮಹಿಳೆಯರು ಪ್ರೀತಿ, ಮಮಕಾರವೆಂಬ ಔಷಧ ನೀಡಿದಲ್ಲಿ ಅವರು ಸಮಾಜದಲ್ಲಿ ಮತ್ತೆ ಗೌರವ ಸ್ಥಾನಮಾನ ಪಡೆಯಲು ಸಾಧ್ಯ ಎಂದರು.

Advertisement

ನವಜೀವನ ಸದಸ್ಯರಿಗೆ ಬ್ಯಾಜ್‌ ವಿತರಿಸಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಮಹಿಳೆಯರ ಬಾಳಿಗೆ ನವಜೀವನ ರೂಪಿಸಿಕೊಟ್ಟ ಸಾಧನೆ ಜನಜಾಗೃತಿ ವೇದಿಕೆಗೆ ಸಲ್ಲುತ್ತದೆ. ವ್ಯಸನಮುಕ್ತರಾದವರು ವ್ಯಸನಿ ಸ್ನೇಹಿತರ ಪರಿವರ್ತನೆ ಮಾಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಕೆ. ರೋಹಿಣಿ, ಧ.ಗ್ರಾ. ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಮಸ್ವಾಮಿ, ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್‌, ನಿಕಟಪೂರ್ವ ಅಧ್ಯಕ್ಷರಾದ ಸತೀಶ್‌ ಹೊನ್ನವಳ್ಳಿ, ಪ್ರತಾಪ್‌ ಸಿಂಹ ನಾಯಕ್‌, ತಾಲೂಕು ಅಧ್ಯಕ್ಷೆ ಶಾರದಾ ಆರ್‌. ರೈ ಉಪಸ್ಥಿತರಿದ್ದರು.

ಅ.ಕ. ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿ ವಿವೇಕ್‌ ವಿ. ಪಾçಸ್‌ ಸ್ವಾಗತಿಸಿ, ರಾಜ್ಯಾಧ್ಯಕ್ಷ ರಾಮಸ್ವಾಮಿ ವಂದಿಸಿದರು. ವೇದಿಕೆ ಯೋಜನಾಧಿ ಕಾರಿಗಳಾದ ಪಿ. ಚೆನ್ನಪ್ಪ ಗೌಡ, ಗಣೇಶ್‌ ಪಿ. ಆಚಾರ್ಯ ನಿರೂಪಿಸಿದರು.

ಸರಕಾರಕ್ಕೆ ಮದ್ಯದಿಂದ 18 ಸಾವಿರ ಕೋಟಿ ರೂ. ಆದಾಯ ಬಂದರೆ ಎರಡು ಪಟ್ಟು ಹಣವನ್ನು ಮದ್ಯವ್ಯಸನಿಗಳನ್ನು ನಿಯಂತ್ರಿಸಲು ಪೊಲೀಸ್‌ ಹಾಗೂ ಇತರ ಇಲಾಖೆಗಳ ಮೂಲಕ ವ್ಯಯಿಸುತ್ತಿದೆ. ಸರಕಾರ ಮದ್ಯನಿಯಂತ್ರಣದ ವಿಚಾರವಾಗಿ ಪರಾಮರ್ಶಿಸುವ ತುರ್ತು ಅಗತ್ಯವಿದೆ. ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಯೋಜನೆ ರೂಪಿಸುತ್ತಿದ್ದು ವ್ಯಸನ ಮುಕ್ತರಿಗೆ ಸೂಕ್ತ ಅವಕಾಶ ನೀಡಿ ಪ್ರೋತ್ಸಾಹಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ

ಕಟ್ಟುನಿಟ್ಟಿನ ಸಾರಿಗೆ ನಿಯಮ ಸ್ವಾಗತಾರ್ಹ. ಆದರೆ ಏಕಾಏಕಿ ಅಧಿಕ ದಂಡ ವಿಧಿಸುವುದಕ್ಕಿಂತ ಮೊದಲ ಹಂತವಾಗಿ 30 ದಿನಗಳ ಕಾಲ ಮಾದರಿಯಾಗಿ ಪ್ರಯೋಗಿಸಿ ಜಾಗೃತಿ ಮೂಡಿಸುವ ಕೆಲಸವಾಗಲಿ. ಬಳಿಕ ದಂಡ ವಿಧಿಸುವ ಪ್ರಕ್ರಿಯೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು.
 - ಡಾ| ಡಿ. ವೀರೇಂದ್ರ ಹೆಗ್ಗಡೆ

ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ
ಗಣಪತಿ ನಾಯ್ಕ ಭಟ್ಕಳ ಅವರಿಗೆ ಜಾಗೃತಿ ಅಣ್ಣ, ನಾರಾಯಣ ರಾಯಪ್ಪ ರಾಮನಕಟ್ಟಿ, ಹುಕ್ಕೇರಿ, ಶೇಖರ್‌ ಶೆಟ್ಟಿ ಉಡುಪಿ, ರುದ್ರೇಶ್‌ ಬೇಲೂರು, ಬಿ.ಕೆ. ಗೋಪಾಲಕೃಷ್ಣ ಚಿಕ್ಕನಾಯಕನಹಳ್ಳಿ, ಹೇಮಣ್ಣ ಬಂಡಿಒಡ್ಡರ ಗದಗ ಅವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾನಮುಕ್ತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರಾಜ್ಯದ 40 ತಾಲೂಕುಗಳ 3,559 ವ್ಯಸನಮುಕ್ತರು ಭಾಗವಹಿಸಿದ್ದರು. ವ್ಯಸನ ಮುಕ್ತರ ಪರವಾಗಿ ಬೈಂದೂರಿನ ಶೇಖರ ಶೆಟ್ಟಿ ಮತ್ತು ನೇತ್ರಾವತಿತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಜನ ಜಾಗೃತಿ ವೇದಿಕೆಗೆ ಮದ್ಯ ವರ್ಜನ ಶಿಬಿರ ಆಯೋಜಿಸಲು 9,65,000 ರೂ. ಚೆಕ್ಕನ್ನು ವೇದಿಕೆಯ ರಾಜ್ಯಾಧ್ಯಕ್ಷ ರಾಮಸ್ವಾಮಿಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next