Advertisement

2 ವರ್ಷಗಳ ವರೆಗೆ ಇಎಂಐ ವಿನಾಯಿತಿ; ಸಾಧಕ ಬಾಧಕಗಳೇನು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

05:49 PM Sep 23, 2020 | Karthik A |

ಮಣಿಪಾಲ: ಕೋವಿಡ್‌ -19 ನಿಂದ ನಷ್ಟಗೊಂಡ ಉದ್ಯೋಗಾಕಾಂಕ್ಷಿಗಳು ಅಥವಾ ಉದ್ಯಮಿಗಳ ಸಾಲದ ಇಎಂಐ ಅನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಆಗಸ್ಟ್‌ 31ರ ವರೆಗೆ ವಿಸ್ತರಿಸಿತ್ತು. ಇದೀಗ ಆರ್‌ಬಿಐ ಸೂಚನೆ ಕೊನೆಗೊಂಡ ಬಳಿಕ ಬ್ಯಾಂಕುಗಳು ಸಾಲವನ್ನು ಕಂತಿನ ಮೂಲಕ ಪಿಂಪಡೆಯಲು ಸೆಪ್ಟಂಬರ್‌ 1ರಿಂದ ಪ್ರಾರಂಭಿಸಿವೆ.

Advertisement

ಆದರೆ ಇನ್ನೂ ಪರಿಸ್ಥಿತಿ ಸುಧಾರಿಸದೇ ಇರುವ ಕಾರಣ ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳ ಕೋರಿಕೆಯನ್ನು ಸ್ವೀಕರಿಸಿರುವ ರಿಸರ್ವ್‌ ಬ್ಯಾಂಕ್‌ ಸಾಲವನ್ನು ಪುನಾರಚಿಸಲು ಅನುಮತಿ ನೀಡಿದೆ. ಇದು ಪ್ರತಿ ಬ್ಯಾಂಕ್‌ಗೆ ಸಾಲದ ಮರುಪಾವತಿ ಅವಧಿಯನ್ನು ಎರಡು ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ. ಈಗ ಬ್ಯಾಂಕುಗಳು ಈ ಕುರಿತಂತೆ ಕೆಲಸವನ್ನು ಪ್ರಾರಂಭಿಸಿವೆ.

ಮೊದಲನೆಯದಾಗಿ ದೇಶದ ಅತಿದೊಡ್ಡ ಸರಕಾರಿ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಪೋರ್ಟಲ್‌ ಅನ್ನು ಪ್ರಾರಂಭಿಸಿದೆ. ಈ ಮೂಲಕ ಸಾಲ ಪುನಾರಚನೆಗೆ ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ. ಇದಾಗ ಬಳಿಕ ಎಚ್‌ಡಿಎಫ್‌ಸಿ ಸಾಲ ಮರುರಚನೆಗೆ ಸಂಬಂಧಿಸಿದ ಕಾರ್ಯವಿಧಾನವನ್ನು ತನ್ನ ಪೋರ್ಟಲ್‌ನಲ್ಲಿ ಪೋಸ್ಟ್‌ ಮಾಡಿದೆ.

ಯಾವೆಲ್ಲ ಬ್ಯಾಂಕ್‌ ?
ನೀವು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಅಥವಾ ಎಚ್‌ಡಿಎಫ್‌ಸಿಯಿಂದ ಗೃಹ ಸಾಲ, ಕಾರು ಸಾಲ, ಶಿಕ್ಷಣ ಸಾಲ ಅಥವಾ ಇನ್ನಾವುದೇ ಸಾಲವನ್ನು ತೆಗೆದುಕೊಂಡಿದ್ದರೆ, ಈ ಪೋರ್ಟಲ್‌ಗ‌ಳ ಮೂಲಕ ಸಾಲ ಪುನರಚನೆಗೆ ನೀವು ಮನವಿ ಸಲ್ಲಿಸಬಹುದಾಗಿದೆ. ಇಲ್ಲಿ ಸಾಲ ಪುನಾರಚನೆ ಕುರಿತಂತೆ ಬ್ಯಾಂಕುಗಳು ನೀಡಲಾದ ನಿಯಮಗಳನ್ನು ನೀಡಲಾಗಿದೆ. ಬ್ಯಾಂಕುಗಳು ನೀಡುವ ಈ ವಿನಾಯಿತಿ ನಿಮ್ಮ ಆರ್ಥಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

  • ಯಾರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು?
  • ಸದ್ಯ ಎಸ್‌ಬಿಐ ಮತ್ತು ಎಚ್‌ಡಿಎಫ್ಸಿ ಬ್ಯಾಂಕ್‌ ಮಾತ್ರ
  • ಯಾವೆಲ್ಲ ಸಾಲಗಳು ಅನ್ವಯವಾಗುತ್ತವೆ?

ಗೃಹ ಸಾಲ ಅಥವಾ ವಾಹನ ಸಾಲವನ್ನು ಪುನಾರಚಿಸಬೇಕೆ?
ನೀವು ಸಾಲ ಪುನರಚನೆ ಪಡೆಯಲು ಬಯಸಿದರೆ ಅದು ನಿಮ್ಮ ಆರ್ಥಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಸಾಲ ಪುನಾರಚನೆಯು ಅಲ್ಪಾವಧಿಯಲ್ಲಿ ಪರಿಹಾರವನ್ನು ತೋರಿಸುತ್ತಿದೆ. ಆದರೆ ದೀರ್ಘಾವಧಿಯಲ್ಲಿ ಅದು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇಎಂಐ ಮರುಪಾವತಿ ಅವಧಿಯೂ ಹೆಚ್ಚಾಗುತ್ತದೆ. ನಗದು ಕೊರತೆಯೊಂದಿಗೆ ಹೋರಾಡುತ್ತಿರುವವರು, ಉದ್ಯೋಗ ಕಳೆದುಕೊಂಡವರು, ಆದಾಯ ತುಂಬಾ ಕಡಿಮೆ ಇರುವವರು, ಪುನಾರಚನೆ ಯೋಜನೆಯ ಸಹಾಯವಿಲ್ಲದೆ ಇಎಂಐಗಳನ್ನು ಪಾವತಿಸಬಹುದೇ ಎಂಬುದುನ್ನು ನೋಡಬೇಕು. ಅವರು ಕಂತುಗಳನ್ನು ಮರುಪಾವತಿಸಲು ಸಾಧ್ಯವಾಗುವುದಾದರೆ ಈ ಸಾಲ ಪುನಾರಚನೆ ಯೋಜನೆಯ ಮೊರೆ ಹೋಗದೇ ಇರುವುದು ಒಳ್ಳೆಯದು. ಆದರೆ ನಿಮಗೆ ಬೇರೆ ಆಯ್ಕೆಗಳೇ ಇಲ್ಲ ಎಂದಾದರೆ ಮಾತ್ರ ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಮುಖ್ಯ.

Advertisement

  •  ಸಾಲದ ಇಎಂಐ ವಿನಾಯಿತಿ ಲಾಭ ಇದೆಯೇ?
  • ಇದರ ಲಾಭ ಮತ್ತು ನಷ್ಟಗಳೇನು?
  • ವಿನಾಯಿತಿ ಪಡೆಯದೇ ಸಾಲ ಪಾವತಿ ಮಾಡವುದು ಹೇಗೆ

ಇಎಂಐ ಇಲ್ಲ ಆದರೆ ಬಡ್ಡಿ ಇದೆ
ಎಸ್‌ಬಿಐ ಸಾಲದಲ್ಲಿ ನೀವು 24 ತಿಂಗಳ ವರೆಗೆ ಮೊರಟೋರಿಯಂ ಪಡೆಯಬಹುದು. ಕೋವಿಡ್‌ -19 ಕಾರಣದಿಂದಾಗಿ ಕೆಲಸ ಕಳೆದುಕೊಂಡು ನಿಮ್ಮ ಮಾಸಿಕ ಕಂತುಗಳು ಪಾವತಿಸಲು ಸಾಧ್ಯವಾಗದೇ ಇದ್ದರೆ ಇದು ನಿಮಗೆ ತುಂಬಾ ಪ್ರಯೋಜನ ನೀಡಬಹುದಾಗಿದೆ. ಆದರೆ ಈ ಅವಧಿಯಲ್ಲಿ ನೀವು ಕಂತುಗಳನ್ನು ಪಾವತಿಸುವುದಿಲ್ಲವಾದರೂ ನಿಮ್ಮ ಸಾಲಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಮಾತ್ರವಲ್ಲದೇ ಅದನ್ನು ಅಸಲಿಗೆ ಸೇರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು.

ಅಂತೆಯೇ, ನೀವು ಬಯಸಿದರೆ ಸಾಲ ಮರುಪಾವತಿ ಅವಧಿಯನ್ನು ಎರಡು ವರ್ಷಗಳ ವರೆಗೆ ವಿಸ್ತರಿಸಬಹುದು. ಇದು ನಿಮ್ಮ ಮೇಲೆ ಇಎಂಐ ಹೊರೆಯನ್ನು ಹಗುರಗೊಳಿಸುತ್ತದೆ. ಇನ್ನು ನೀವು ಹೊಸ ಸಾಲಗಾರರಾಗಿದ್ದರೆ ಆರಂಭದಿಂದಲೇ ವಿನಾಯಿತಿ ಪಡೆಯದೇ ನಿಮ್ಮ ಮಾಸಿಕ ಮರುಪಾವತಿಯ ಗಾತ್ರವನ್ನು ಇಳಿಸಬಹುದಾಗಿದೆ. ಇದರಿಂದ ನಿಮಗೆ ಮುಂಬರುವ ದಿನಗಳಲ್ಲಿ ಹೊರೆಯಾಗುವುದನ್ನು ತಪ್ಪಿಸುತ್ತದೆ. ಆದರೆ ಇದು ಆಯಾ ಬ್ಯಾಂಕುಗಳು ಮತ್ತು ನಿಮಗೆ ಬಿಟ್ಟ ವಿಚಾರ.

ಎಚ್‌ಡಿಎಫ್‌ಸಿ ಗ್ರಾಹಕರು ಏನು ಮಾಡಬೇಕು?
ಸದ್ಯ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಎರಡನೇ ಬ್ಯಾಂಕ್‌ ಎಚ್‌ಡಿಎಫ್‌ಸಿ ತನ್ನ ಸಾಲ ಪುನಾರಚನೆ ಯೋಜನೆಯಲ್ಲಿ ಅವಧಿಯನ್ನು ಇನ್ನೂ ಘೋಷಿಸಿಲ್ಲ. ಅದರ ವಿವರವಾದ ಯೋಜನೆಗೆ ಸಂಬಂಧಪಟ್ಟ ಮಾಹಿತಿಗಳು ಕೆಲವೇ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. ಪ್ರಸ್ತುತ ಬ್ಯಾಂಕ್‌ ಹಿಂದಿ-ಇಂಗ್ಲಿಷ್‌ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಗ್ರಾಹಕರು ಸಾಮಾನ್ಯವಾಗಿ ಕೇಳಿ ಬಗೆಹರಿಸಿಕೊಳ್ಳಬಹುದಾದ ಪ್ರಶ್ನೋತ್ತರವನ್ನು ಪೋಸ್ಟ್‌ ಮಾಡಿದ್ದು, ಇದರಿಂದ ಗ್ರಾಹಕರು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಹುದು.

ಹಣ ಬಂದರೆ ಪಾವತಿಸಿ ಬಿಡಿ
ಇನ್ನು ಈ ಯೋಜನೆಯ ಲಾಭವನ್ನು ಪಡೆಯುವುದಾದರೆ ನೀವು 2 ವರ್ಷಗಳ ವರೆಗೆ ಅದನ್ನು ವಿಸ್ತರಿಸಿದ್ದರೂ ನಿಮಗೆ ಪಾವತಿಸಲು ಅನುಕೂಲವಾದರೆ ಪಾವತಿಸಬಹುದಾಗಿದೆ. ನೀವು 2 ವರ್ಷ ಕಾಯಬೇಕಾದ ಅನಿವಾರ್ಯತೆ ಇಲ್ಲ. ಕೈಯಲ್ಲಿ ಹಣ ಓಡಾಡಲು ಶುರುವಾದರೆ ನಿಯಮಿತವಾಗಿ ಪಾವತಿಸಬಹುದಾಗಿದೆ. ಇದು ಭವಿಷ್ಯದಲ್ಲಿ ನಿಮ್ಮ ಮೇಲೆ ಹೊರೆ ಕಡಿಮೆ ಮಾಡುತ್ತದೆ.

ಸಾಲವನ್ನು ಪುನಾರಚಿಸಿದ ಬಳಿಕ ಇಎಂಐ ಮೊತ್ತವು ಬದಲಾಗುತ್ತದೆಯೇ? ಎಷ್ಟು ವೆಚ್ಚವಾಗುತ್ತದೆ?
ನೀವು ಸಾಲದ ಮೇಲೆ ಇಎಂಐನ ವಿನಾಯಿತಿಯನ್ನು ತೆಗೆದುಕೊಂಡರೆ, ಈ ಅವಧಿ ಮುಗಿದ ಬಳಿಕ ನೀವು ಇಎಂಐ ಪಾವತಿಸಬೇಕಾಗುತ್ತದೆ. ಬಳಿಕ ನೀವು ವಿನಾಯಿತಿ ಪಡೆಯುವ ಅಷ್ಟು ಕಂತುಗಳಿಗೆ ಬಡ್ಡಿದರಗಳು ಅನ್ವಯವಾಗುತ್ತವೆ. ಮಾತ್ರವಲ್ಲದೇ ಆ ಮೊತ್ತವನ್ನು ಅಸಲು ಸಾಲಕ್ಕೆ ಸೇರಿಸಲಾಗುತ್ತದೆ. ಅದು ನಿಮ್ಮ ಸಾಲ ಎಷ್ಟು ಉಳಿದಿದೆ, ಎಷ್ಟು ಇಎಂಐ ಉಳಿದಿದೆ ಮತ್ತು ನೀವು ಎಷ್ಟು ಸಮಯ ನಿಷೇಧವನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಬಡ್ಡಿ ದರ ಹೇಗೆ?
ನೀವು ಸಾಲವನ್ನು ಪುನಾರಚಿಸುವುವಾದರೆ ನೀವು ವಾರ್ಷಿಕ ಶೇ. 0.35 ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಎಸ್‌ಬಿಐ ಹೇಳಿದೆ. ಅಂದರೆ ಇಂದು ಶೇ. 7ರ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತಿದ್ದು, ಪುನಾರಚನೆಯ ಲಾಭವನ್ನು ಪಡೆದುಕೊಳ್ಳುವುದಾದರೆ ನೀವು ಶೇ. 7.35ರ ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಆದರೆ ಈ ಕುರಿತಂತೆ ಎಚ್‌ಡಿಎಫ್‌ಸಿ ಏನನ್ನೂ ಹೇಳಿಲ್ಲ. ಆದರೆ ಸಂಸ್ಕರಣಾ ಶುಲ್ಕವನ್ನು ಮರುಪಡೆಯಬಹುದು ಎಂದು ಹೇಳಲಾಗುತ್ತದೆ. ಪ್ರತಿ ಬ್ಯಾಂಕ್‌ ತನ್ನದೇ ಆದ ನಿಯಮಗಳನ್ನು ರೂಪಿಸುತ್ತದೆ. ಅದಕ್ಕೆ ಅನುಗುಣವಾಗಿ ಪುನಾರಚಿಸುವ ಯೋಜನೆಯನ್ನು ನಿಮಗೆ ಬ್ಯಾಂಕ್‌ ನೀಡುತ್ತದೆ.

ಯಾರು ಅರ್ಹರು?

  • ಸಾಲ ಪುನಾರಚನೆಯ ಪ್ರಯೋಜನಕ್ಕೆ ಯಾರು ಅರ್ಹರು ಎಂಬುದನ್ನು ರಿಸರ್ವ್‌ ಬ್ಯಾಂಕ್‌ ವಿಸ್ಕೃತವಾಗಿ ತಿಳಿಸಿತ್ತು. ಅದರಂತೆ 2020ರ ಮಾರ್ಚ್‌ 31ರಲ್ಲಿ ಸಾಲ ಹೊಂದಿದ ವ್ಯಕ್ತಿ, ಸಂಸ್ಥೆ ಅಥವಾ ಕಂಪನಿಯು ಇದಕ್ಕೆ ಅರ್ಹರಾಗಿರುತ್ತಾರೆ.
  • ನೀವು ಉದ್ಯೋಗದಲ್ಲಿದ್ದರೆ ನೀವು ಫೆಬ್ರವರಿ 2020 ಮತ್ತು ಸೆಪ್ಟೆಂಬರ್‌ 2020 ರ ಪೇ-ಸ್ಲಿಪ್‌ ಅನ್ನು ಸಹ ತೋರಿಸಬೇಕಾಗಬಹುದು, ಅಲ್ಲಿ ಸಂಬಳದಲ್ಲಿ ಕಡಿತವಾಗಿರುವುದನ್ನು ದಾಖಲೆಯಾಗಿ ತೋರಿಸಬಹುದು.
  • ನೀವು ನಿಮ್ಮ ಸ್ವಂತ ವ್ಯವಹಾರವನ್ನು ಮಾಡುವುದಾದರೆ ನಿಮ್ಮ ಬ್ಯಾಂಕ್‌ ಖಾತೆಯನ್ನು ಸಲ್ಲಿಸಬೇಕಾಗುತ್ತದೆ. ಅಂದರೆ ಫೆಬ್ರವರಿ 2020ಕ್ಕೆ ಹೋಲಿಸಿದರೆ ಆಗಸ್ಟ್‌ ಅಥವಾ ಸೆಪ್ಟೆಂಬರ್‌ 2020ರ ವೇಳೆಗೆ ನಿಮ್ಮ ಆದಾಯವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತಿಳಿಸುವ ಯಾವುದೇ ದಾಖಲೆಯನ್ನು ನೀಡಬೇಕು.
  • ಜತೆಗೆ ಈ ಹಿಂದೆ ಜಾರಿಯಲ್ಲಿದ್ದ 6 ತಿಂಗಳ ಸಾಲ ನಿಷೇಧವನ್ನು ಪಡೆಯದಿದ್ದರೂ ನೀವು ಇನ್ನೂ ಸಾಲ ಪುನಾರಚನೆಗೆ ಅರ್ಹರಾಗಿರುತ್ತೀರಿ.

ಯಾವ ರೀತಿಯ ಸಾಲಗಳನ್ನು ಸೇರಿಸಲಾಗಿದೆ?
ವಸತಿ ಮತ್ತು ಶಿಕ್ಷಣ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಈ ವಿನಾಯಿತಿಗೆ ಎಸ್‌ಬಿಐ ಪ್ರಸ್ತಾವಿಸಿದೆ. ಅದೇ ಸಮಯದಲ್ಲಿ ಬಾಕಿ ಇರುವ ಕ್ರೆಡಿಟ್‌ ಕಾರ್ಡ್‌ ಸಾಲವನ್ನೂ ಪುನಾರಚನೆ ಯೋಜನೆಗೆ ಸೇರಿಸಲು ಎಚ್‌ಡಿಎಫ್ಸಿ ಸಿದ್ಧವಾಗಿದೆ. ಆದರೆ ಅವರು ಯಾವ ರೀತಿಯ ಸಾಲ ಪುನಾರಚನೆ ಸಾಧ್ಯವಿಲ್ಲ ಎಂಬುದನ್ನು ಪ್ರಶ್ನೋತ್ತರದಲ್ಲಿ ಹೇಳಿದೆ. ಇದರಲ್ಲಿ ನೌಕರರು, ಹಣಕಾಸು ಸೇವಾ ಪೂರೈಕೆದಾರರು ಕೃಷಿಗೆ ಸಂಬಂಧಿಸಿದ ಸಾಲಗಳು, ಸರಕಾರಿ ಘಟಕಗಳನ್ನು ಸೇರಿಸಲಾಗಿದೆ.

ಸಾಲದ ಅವಧಿಯನ್ನು ಎಷ್ಟು ಹೆಚ್ಚಿಸಬಹುದು?
ಸಾಲ ಪುನಾರಚನೆಯ ಅಡಿಯಲ್ಲಿ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದರೂ, ಅದು ಸಂಪೂರ್ಣವಾಗಿ ಉತ್ಪನ್ನದ ಮೇಲೆ ಅವಲಂಬಿತವಾಗಿರುತ್ತದೆ. ಗೃಹ ಸಾಲವನ್ನು ಪುನಾರಚಿಸಬೇಕಾದರೆ ಮತ್ತು ಸಾಲಗಾರನಿಗೆ 76 ವರ್ಷವಾಗಿದ್ದರೆ ಅದನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸಲಾಗುವುದಿಲ್ಲ ಎಂದು ಎಸ್‌ಬಿಐ ವಿವರಿಸಿದೆ. ಈ ಸಂದರ್ಭ ಗರಿಷ್ಠ ಅಧಿಕಾರಾವಧಿ ಎರಡು ವರ್ಷಗಳು ಅಥವಾ ಸಾಲಗಾರನ ವಯಸ್ಸು 77 ವರ್ಷಗಳು ಎಂದು ನಿಗದಿಪಡಿಸಲಾಗಿದೆ.

ಸಾಲ ಪುನಾರಚನೆಗಾಗಿ ಎಲ್ಲಿ ಸಂಪರ್ಕಿಸಬೇಕು?
ಎಸ್‌ಬಿಐ ಮತ್ತು ಎಚ್‌ಡಿಎಫ್ಸಿ ತಮ್ಮ ಪೋರ್ಟಲ್‌ಗ‌ಳಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ಅಪ್‌ಲೋಡ್‌ ಮಾಡಿವೆ. ಆದರೆ ನೀವು ಇದಕ್ಕೆ ಸಂಬಂಧಿಸಿದ ಇನ್ನಷ್ಟು ಪ್ರಶ್ನೆಗಳನ್ನು ಹೊಂದಿದ್ದರೆ ನೀವು ಬ್ಯಾಂಕಿಗೆ ಹೋಗಿ ಅಧಿಕಾರಿಯನ್ನು ಭೇಟಿ ಮಾಡುವುದು ಒಳಿತು. ಈ ಯೋಜನೆಯ ಕುರಿತಾದ ಸಾಧಕ ಭಾದಕಗಳನ್ನು ನೀವು ತಿಳಿದುಕೊಂಡು ಯೋಜನೆಗೆ ಹೆಸರು ನೋಂದಾಯಿಸುವುದು ಒಳ್ಳೆಯದು. ಇದಕ್ಕಾಗಿ ಬ್ಯಾಂಕ್‌ ಅಧಿಕಾರಿಯನ್ನು ಭೇಟಿಯಾಗಿ ನಿಯಮಗಳ ಮಾಹಿತಿ ಪಡೆಯುವುದು ಒಳ್ಳೆಯದು.

 ಕಾರ್ತಿಕ್‌ ಅಮೈ 

 

Advertisement

Udayavani is now on Telegram. Click here to join our channel and stay updated with the latest news.

Next