ಚಿತ್ರದುರ್ಗ: ಪ್ರಧಾನಮಂತ್ರಿಯವರ ಶ್ರಮ್ ಯೋಗಿ ಮಾನ್ ಧನ್ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸಲಿದೆ. ಅಲ್ಲದೆ ಎಲ್ಲ ದೃಷ್ಟಿಯಿಂದಲೂ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು. ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತ ದೇಶ 42 ಕೋಟಿಯಷ್ಟು ಕಾರ್ಮಿಕರನ್ನು ಒಳಗೊಂಡಿದ್ದು, ಅದರಲ್ಲಿ 140 ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರುತಿಸಲಾಗಿದೆ. ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ಸಮಯದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಾರೆ. ಆದರೆ
ಅಸಂಘಟಿತ ಕಾರ್ಮಿಕರು 60 ವರ್ಷ ವಯಸ್ಸಾದ ಮೇಲೆ ದುಡಿಯಲು ಶಕ್ತಿ ಇರುವುದಿಲ್ಲ, ಹಾಗಾಗಿ ಈ ಯೋಜನೆಯನ್ನು ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಲಾಗಿದೆ ಎಂದರು.
ಈ ಯೋಜನೆಯ ಲಾಭ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಅನಾರೋಗ್ಯ ಸಮಯದಲ್ಲಿ ಉಚಿತ ಚಿಕಿತ್ಸೆಗೆ ಅನುಕೂಲವಾಗಲಿದೆ. ಮುಪ್ಪಿನ ಕಾಲದಲ್ಲಿ ಕನಿಷ್ಠ 3 ಸಾವಿರ ರೂ.ಗಳನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕಾರ್ಮಿಕರು ಯಾರ ಆಶ್ರಯವನ್ನೂ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾಕಾರಿ ವಿನೋತ್ ಪ್ರಿಯಾ ಮಾತನಾಡಿ, ಈ ಯೋಜನೆಯ ಲಾಭ ಪಡೆಯಬೇಕಾದರೆ 18 ರಿಂದ 40 ವರ್ಷದೊಳಗಿನ ಹಾಗೂ 15 ಸಾವಿರ ರೂ. ವಾರ್ಷಿಕ ಆದಾಯ ಹೊಂದಿರುವ ಕಾರ್ಮಿಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲಾ ಮತ್ತು ಎಲ್ಲಾ ತಾಲೂಕುಗಳಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಸುಮಾರು 3 ರಿಂದ 15 ಸಾವಿರ ರೂ. ವರೆಗೆ ಮಾಸಿಕ ಪಿಂಚಣಿಯನ್ನು ಈ ಯೋಜನೆ ಮೂಲಕ ಪಡೆದುಕೊಳ್ಳಲು ಅವಕಾಶವಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮಾ ಮಾತನಾಡಿ, ಕುಟುಂಬದಲ್ಲಿ ಎಷ್ಟೇ ಕಷ್ಟಗಳಿದ್ದರೂ ತಂದೆ-ತಾಯಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಚುನಾವಣಾ ಹಿನ್ನೆಲೆಯಲ್ಲಿ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಳ್ಳಾರಿ ವಲಯದ ಭವಿಷ್ಯ ನಿಧಿ ಅಧಿಕಾರಿ ವಿನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ-ಆಶಾ ಕಾರ್ಯಕರ್ತರು ಮತ್ತು ವಿವಿಧ ಅಸಂಘಟಿತ ಕಾರ್ಮಿಕರು ಇದ್ದರು. ಇದೇ ಸಂದರ್ಭದಲ್ಲಿ 21 ಜನ ಕಾರ್ಮಿಕರ ನೋಂದಣಿ ಮಾಡಿಸಲಾಯಿತು. ಸುಮಾ ಎನ್., ನೇತ್ರಾವತಿ, ಪ್ರದೀಪ್‌ಕುಮಾರ್ ಡಿ., ಮಂಗಳ, ಸುನೀತಾ, ಮಂಜುಳಾ ನಾಗರಾಜ್ ಅವರಿಗೆ ಪ್ರಧಾನಮಂತ್ರಿಯವರ ಶ್ರಮ್ ಯೋಗಿ ಮಾನ್ ಧನ್ ಯೋಜನೆಯ ಕಾರ್ಡ್‌ಗಳನ್ನು ವಿತರಿಸಲಾಯಿತು.
ಅಸಂಘಟಿತ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಈ ಯೋಜನೆ ಕಾರ್ಮಿಕರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ. ನೋಂದಣಿ ಮಾಡಿಸಿ ತಿಂಗಳಿಗೆ 55 ರಿಂದ 200 ರೂ.ಗಳ ವರೆಗೆ ವಯಸ್ಸಿಗನುಗುಣವಾಗಿ ವಂತಿಗೆ ಪಾವತಿಸಬೇಕು. 60 ವರ್ಷ ವಯಸ್ಸಾದ ಮೇಲೆ ಮಾಸಿಕ ಕನಿಷ್ಠ 3 ಸಾವಿರ ರೂ.ಗಳನ್ನು ಫಲಾನುಭವಿಗಳು ಪಡೆಯಬಹುದು.
ಸತ್ಯಭಾಮಾ, ಜಿಪಂ ಸಿಇಒ.