Advertisement

ಹೊಸ ಮರಳು ನೀತಿ ದೂರ ದೃಷ್ಟಿ ಕಾನೂನು ಅಗತ್ಯ

03:18 AM Feb 12, 2021 | Team Udayavani |

ರಾಜ್ಯದಲ್ಲಿ ಮರಳು ಸಾಗಣೆ ಒಳಗೊಂಡಂತೆ ಹೊಸ “ಗಣಿ ನೀತಿ -2021′ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇದರ ಮೂಲ ಉದ್ದೇಶ ಸುಲಭವಾಗಿ ಮರಳು ಲಭ್ಯವಾಗುವಂತೆ ನೋಡಿ ಕೊಳ್ಳುವುದು. ಗ್ರಾಮೀಣ ಭಾಗದಲ್ಲಿ ಸ್ವಯಂ ಬಳಕೆಗೆ ಮರಳು ಸಾಗಣೆ ಮಾಡುವವರ ವಿರುದ್ಧ ಎಫ್ಐಆರ್‌ ದಾಖಲಿಸಿ ತೊಂದರೆ ನೀಡುತ್ತಿರುವ ಪ್ರಕರಣಗಳನ್ನು ತಡೆಯುವುದು.

Advertisement

ಜತೆಗೆ ಅಕ್ರಮ ಆರೋಪದ ಮೇಲೆ ಬಂದ್‌ ಮಾಡಲಾಗಿರುವ ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್‌ಗಳನ್ನು ಕಾನೂನು ವ್ಯಾಪ್ತಿಯಲ್ಲಿ ದಂಡ ಹಾಕಿ ಸಕ್ರಮಗೊಳಿಸಿ ಜಲ್ಲಿ, ಕಲ್ಲು, ಮರಳು ನಿರ್ಮಾಣ ಕಾಮಗಾರಿಗಳಿಗೆ ಯಾವುದೇ ಅಡೆ ತಡೆ ಇಲ್ಲದೆ ಸಿಗುವಂತೆ ಮಾಡುವುದು.

ರಾಜ್ಯದಲ್ಲಿ ಪ್ರಸ್ತುತ ಮರಳು ನೀತಿ ಜಾರಿಯಲ್ಲಿದ್ದರೂ ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆಗಳು ಎದು ರಾಗಿವೆ. ಮರಳು ವಿಚಾರದಲ್ಲಿ ಕರಾವಳಿ ಭಾಗದ ಸಮಸ್ಯೆಯೇ ಬೇರೆ, ರಾಜ್ಯದ ಇತರ ಭಾಗಗಳ ಸಮಸ್ಯೆಯೇ ಬೇರೆ. ಹೀಗಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ರೂಪಿಸುವ ಪ್ರಸ್ತಾವವೂ ಇದೆ. ಸರಕಾರಿ ಅಥವಾ ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ, ಕಲ್ಲು, ಮರಳು ತೀರಾ ಅತ್ಯಗತ್ಯ. ಇದು ಸುಗಮವಾಗಿ ಸಿಗುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ ಸಹ. ಆದರೆ ಇದು ಒಂದೇ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಸಾರಿಗೆ, ಕಂದಾಯ, ಗೃಹ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಮತ್ತು ಪರಿಸರ.. ಹೀಗೆ ಹಲವಾರು ಇಲಾಖೆಗಳ ವ್ಯಾಪ್ತಿಗೂ ಬರುತ್ತದೆ.

ಗ್ರಾಮೀಣ ಭಾಗದಲ್ಲಿ ಮರಳು ಸಾಗಣೆಗೆ ಅತೀ ಹೆಚ್ಚು ಸಮಸ್ಯೆ ಉಂಟಾಗಿದೆ. ಸ್ವಯಂ ಬಳಕೆಗೆ ಮರಳು ತೆಗೆಯಲು ಮೊದಲು ಯಾವುದೇ ನಿರ್ಬಂಧ ಇರಲಿಲ್ಲ. ಆದರೆ ಕಳೆದ ಬಾರಿ ಜಾರಿಯಾದ ಮರಳು ನೀತಿಯಡಿ ಪರವಾನಿಗೆ ಹಾಗೂ ರಾಜಧನ ಪಾವತಿಸದೆ ಮರಳು ಸಾಗಿಸಿದರೆ ಕ್ರಮ ಕೈಗೊಳ್ಳಲಾಗುತ್ತಿದೆ.

ಇದರಿಂದ ಗ್ರಾಮೀಣ ಭಾಗದ ಬಡವರು ಎತ್ತಿನ ಬಂಡಿ, ತ್ರಿಚಕ್ರ ವಾಹನದಲ್ಲಿ ಮರಳು ತಂದು ಮನೆ ಕಟ್ಟಿಕೊಳ್ಳಲು ಸಮಸ್ಯೆಯಾಗಿದೆ. ಹೀಗಾಗಿ ನೂತನ ನೀತಿಯಲ್ಲಿ ಹರಾಜು ಹಾಕಲಾಗಿರುವ ಬ್ಲಾಕ್‌ ಹೊರತುಪಡಿಸಿ ಇತರೆಡೆ ಸ್ವಯಂ ಬಳಕೆಗೆ ಮರಳು ತೆಗೆದು ಸಾಗಣೆ ಮಾಡುವುದು ಪರವಾನಿಗೆ ಹಾಗೂ ರಾಜಧನ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾವವೂ ಇದೆ. ಒಂದು ರೀತಿಯಲ್ಲಿ ಉಚಿತವಾಗಿ ಸ್ಥಳೀಯ ಅಗತ್ಯತೆಗೆ ಮರಳು ಕೊಡುವುದು. ತೀರಾ ಎಂದರೆ ಕನಿಷ್ಠ ದರ ಪಂಚಾಯತ್‌ಗೆ ಕಟ್ಟುವಂತೆ ಮಾಡುವುದು ಪರಿಶೀಲನೆಯಲ್ಲಿದೆ.

Advertisement

ಆದರೆ ಸ್ವಯಂ ಬಳಕೆ ಹೆಸರಿನಲ್ಲಿ ಎತ್ತಿನಬಂಡಿಯಲ್ಲಿ ಸಾಗಣೆ ಮಾಡಿ ಅನಂತರ‌ ಅದನ್ನು ಟ್ರ್ಯಾಕ್ಟರ್‌, ಲಾರಿಗಳಿಗೆ ತುಂಬುವ, ಜಿಲ್ಲಾ ಗಡಿ ಮೂಲಕ ಬೇರೆಡೆ ಸಾಗಿಸುವ ಮಾರಾಟ ಮಾಡುವ ಪ್ರಕರಣಗಳೂ ಹಿಂದೆ ವರದಿಯಾಗಿವೆ. ಇದನ್ನು ತಡೆಗಟ್ಟುವುದು ಸವಾಲಿನ ಕೆಲಸ. ಸರಕಾರ ಈ ಬಗ್ಗೆ ಗಮನಹರಿಸಿ ಜನಸಾಮಾನ್ಯರು ಹಾಗೂ ಸರಕಾರಿ ಕಾಮಗಾರಿಗಳಿಗೆ ಸುಲಭವಾಗಿ ಮರಳು, ಜಲ್ಲಿ, ಕಲ್ಲು ಸಿಗುವಂತೆ ಮಾಡಬೇಕಿದೆ. ಇದಕ್ಕಾಗಿ ದೂರದೃಷ್ಟಿ ಕಾನೂನು ಅಗತ್ಯವಿದೆ. ಇತ್ತೀಚೆಗಿನ ಶಿವಮೊಗ್ಗ ಹುಣಸೋಡು ದುರಂತವನ್ನೂ ಗಮನದಲ್ಲಿಟ್ಟುಕೊಂಡು ನೀತಿ ರೂಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next