Advertisement

ಹೊಸ ಆರ್‌ಟಿಒ ಕಚೇರಿ ಸ್ಥಾಪಿಸುವುದಿಲ್ಲ: ಸಚಿವ ಶ್ರೀರಾಮುಲು

08:59 PM Dec 21, 2022 | Team Udayavani |

ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಹೊಸದಾಗಿ ಆರ್‌ಟಿಒ ಕಚೇರಿ ಆರಂಬಿಸುವುದಿಲ್ಲ. ಬದಲಾಗಿ ಆನ್‌ಲೈನ್‌ ಸೇವೆಗಳನ್ನು ಜಿಲ್ಲಾ ಕೇಂದ್ರದಲ್ಲಿ ನೀಡಲು ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಬಿಜೆಪಿಯ ಬಿ.ಎಂ.ಸುಕುಮಾರಶೆಟ್ಟಿಯವರು ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ಒಂದು ಆರ್‌ಟಿಒ ಕಚೇರಿ ಆರಂಭಿಸುವಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸದಾಗಿ ಆರ್‌ಟಿಒ ಕಚೇರಿ ಆರಂಭಿಸಲು ಹಲವು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಯವರ ನೇತೃತ್ವದಲ್ಲಿ ತಂಡ ರಚನೆ ಮಾಡಿ, ಅಧ್ಯಯನ ನಡೆಸಿದ್ದಾರೆ. ಜಿಲ್ಲಾ ಕೇಂದ್ರಗಳಿಗೆ ಆರ್‌ಟಿಒ ಕಚೇರಿ ನೀಡಲು ಸಾಧ್ಯವಿಲ್ಲ. ಬದಲಾಗಿ ಆನ್‌ಲೈನ್‌ ಸೇವೆಗಳನ್ನು ನೀಡಲಾಗುವುದು. ಫಿಟ್‌ನೆಸ್‌ ಸರ್ಟಿಫಿಕೇಟ್‌(ಎಫ್ಸಿ) ಮತ್ತು ಡ್ರೆçವಿಂಗ್‌ ಲೈಲೆನ್ಸ್‌ (ಡಿಎಲ್‌) ಹೊರತುಪಡಿಸಿ 30ಕ್ಕೂ ಅಧಿಕ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅಲ್ಲದೆ, ಬೈಂದೂರು, ಕುಂದಾಪುರ ಭಾಗದಲ್ಲಿ ಪ್ರತಿ ಮಂಗಳವಾರ ಸಾರಿಗೆ ಅದಾಲತ್‌ ಕೂಡ ನಡೆಸಲಾಗುತ್ತದೆ ಎಂದರು.

ಸುಕುಮಾರ ಶೆಟ್ಟಿಯವರು ಮಾತನಾಡಿ, ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ವಾಹನ ನೋಂದಣಿಯಾಗಿವೆ. ಅದರಲ್ಲಿ2 ಲಕ್ಷಕ್ಕೂ ಅಧಿಕ ವಾಹನಗಳು ಕುಂದಾಪುರ, ಬೈಂದೂರು ಭಾಗದಿಂದ ನೋಂದಣಿಯಾಗಿವೆ. ಉಡುಪಿ ಜಿಲ್ಲಾಕೇಂದ್ರದಲ್ಲಿ ಆರ್‌ಟಿಒ ಕಚೇರಿ ಇರುವುದರಿಂದ ಈ ಭಾಗದ ಸಾರ್ವಜನಿಕರು ಸಾಮಾನ್ಯ ಸೇವೆಗೂ 70 ಕಿ.ಮೀ ಅಧಿಕ ದೂರು ಸಂಚಾರ ಮಾಡಬೇಕಾಗಿದೆ. ಹೀಗಾಗಿ ಕುಂದಾಪುರ ಅಥವಾ ಬೈಂದೂರು ಭಾಗಕ್ಕೆ ಒಂದು ಆರ್‌ಟಿಒ ಕಚೇರಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಚಿವ ಶ್ರೀರಾಮುಲು ಉತ್ತರಿಸಿ, ಸರ್ಕಾರದ ಇ-ಆಡಳಿತ ಇಲಾಖೆಯ ಗ್ರಾಮ ಒನ್‌, ಜನ ಸೇವಕ ಯೋಜನೆಗಳಿಂದಲೂ ಸಾರಿಗೆ ಇಲಾಖೆಯ ಸೇವೆಯನ್ನು ಜನ ಸಾಮಾನ್ಯರಿಗೆ ತಲುಪಿಸಲಾಗುತ್ತಿದೆ.

ಹೀಗಾಗಿ ಹೊಸ ಆರ್‌ಟಿಒ ಕಚೇರಿ ಎಲ್ಲಿಯೂ ಸ್ಥಾಪಿಸುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next