Advertisement
ಅಕ್ಕಮಹಾದೇವಿ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಆರ್.ಸಿ. ಪಾಟೀಲ್ ನೇತೃತ್ವದ ತಂಡ ಕೊನೆಗೂ ವಿವಿ ಕೇಂದ್ರದ ಪಿಜಿ ಸೆಂಟರ್‌ಗೆ ರಸ್ತೆ ಕಲ್ಪಿಸಲು ಮುಂದಾಗಿದೆ. ಕಂದಾಯ ಇಲಾಖೆಗೆ ಸೇರಿದ ಭೂಮಿ ಬಳಸಿಕೊಂಡು ಸರ್ಕಾರಿ ಜಮೀನಿನ ಮಾರ್ಗವಾಗಿ ವಿವಿ ಕೇಂದ್ರಕ್ಕೆ 50 ಅಡಿ ವಿಸ್ತೀರ್ಣದ ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ದಿಕ್ಕಿಲ್ಲದ ಕೇಂದ್ರಕ್ಕೆ ಕೊನೆಗೂ ಒಂದು ರಸ್ತೆ ದೊರೆಯಲಾರಂಭಿಸಿದೆ.
Related Articles
Advertisement
ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಕ್ಕೆ ನೇರವಾಗಿ ರಸ್ತೆ ಕಲ್ಪಿಸಲು ಇದೀಗ ಕೆಲಸ ಆರಂಭಿಸಲಾಗಿದೆ. ಆರ್.ಸಿ. ಪಾಟೀಲ್ ಅವರೇ ಮುಂದೆ ನಿಂತು ಕೆಲಸಕ್ಕೆ ಕೈ ಹಾಕಿದ್ದಾರೆ. ಅವರ ಪ್ರಯತ್ನಕ್ಕೆ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಕೈ ಜೋಡಿಸಿದ್ದಾರೆ. ನಗರಸಭೆಯಲ್ಲಿ ಲಭ್ಯ ಇರುವ ಜೆಸಿಬಿ, ರೋಲರ್ ಬಳಸಿಕೊಂಡು ತಮ್ಮ ಮಿತಿಯಲ್ಲೇ ರಸ್ತೆ ಸುಧಾರಿಸಲು ಹೊರಟಿದ್ದಾರೆ. ಸರ್ಕಾರದಿಂದ ಉಚಿತ ಜೆಸಿಬಿ, ರೋಲರ್ ಹೊರತುಪಡಿಸಿ, ಯಾವುದೇ ಅನುದಾನ ಇಲ್ಲವಾದರೂ ಕೆಲಸ ಪೂರ್ಣಗೊಳಿಸಲು ಮುಂದಾಗಿದ್ದು, ಗಮನ ಸೆಳೆದಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ವಿಚಾರ ಇಬ್ಬರು ಕಾಂಗ್ರೆಸ್ ನಾಯಕರ ರಾಜಕೀಯ ವೈಷಮ್ಯದ ಪ್ರತಿಫಲನ: ಬಿಜೆಪಿ
ತಾತ್ಕಾಲಿಕ ಸುಧಾರಣೆ
ವಿವಿ ಕೇಂದ್ರಕ್ಕೆ ಹೋಗಲು ಬರೋಬ್ಬರಿ 50 ಅಡಿ ವಿಸ್ತೀರ್ಣದ ರಸ್ತೆ ನಿರ್ಮಿಸುವ ಮುನ್ನ ಎರಡು ಬದಿಯಲ್ಲಿ ದೊಡ್ಡ ಚರಂಡಿಗಳನ್ನು ಅಗೆಯಲಾಗುತ್ತಿದೆ. ಎರಡು ಬದಿಯ ಮಣ್ಣನ್ನು ರಸ್ತೆಗೆ ಹಾಕಿ, ನಂತರದಲ್ಲಿ ಅದಕ್ಕೆ ಹೊರಗಿನಿಂದ ಮರಂ ಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಳಿಕ ರೋಲರ್ ಮಾಡುವುದರಿಂದ ರಸ್ತೆ ಸಂಚಾರಕ್ಕೆ ಸುಗಮವಾಗಲಿದೆ. ಜೊತೆಗೆ, ರಸ್ತೆಯೇ ಕಾಣದ ವಿವಿಗೆ ಇದೇ ಮೊದಲ ಬಾರಿಗೆ ರಸ್ತೆ ಯೋಗ ಒಲಿಯಲಿದೆ.
ಆರ್.ಸಿ. ಪಾಟೀಲ್ ಅವರೇ ರಸ್ತೆ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. ನಮ್ಮ ಕಡೆಯಿಂದ ಯಂತ್ರಗಳನ್ನು ಮಾತ್ರ ಒದಗಿಸುತ್ತಿದ್ದೇವೆ. ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. –ಮಲ್ಲಿಕಾರ್ಜುನ ಪಾಟೀಲ್, ನಗರಸಭೆ ಅಧ್ಯಕ್ಷ, ಸಿಂಧನೂರು
ನಗರಸಭೆ ಸಹಕಾರ ಮತ್ತು ನಮ್ಮ ಕೈಲಾಗುವ ಕೆಲಸಕ್ಕೆ ಮುಂದಾಗಿದ್ದು, ಅಕ್ಕಮಹಾದೇವಿ ಮಹಿಳಾ ವಿವಿ ಕೇಂದ್ರಕ್ಕೆ ರಸ್ತೆ ಕಲ್ಪಿಸಲಾಗುತ್ತಿದೆ. ಇರುವುದರಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಮಾಡಲಿದ್ದು, ಖರ್ಚು ನಿಭಾಯಿಸಲಾಗುವುದು. –ಆರ್.ಸಿ. ಪಾಟೀಲ್, ಸಿಂಡಿಕೇಟ್ ಮಾಜಿ ಸದಸ್ಯ, ಅಕ್ಕಮಹಾದೇವಿ ಮಹಿಳಾ ವಿವಿ ವಿಜಯಪುರ
-ಯಮನಪ್ಪ ಪವಾರ