ಮಂಗಳೂರು: ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ಮಹೇಂದ್ರ ಸಿಂಗ್ ಧೋನಿ ಎಂತಹ ಓಟಗಾರ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ವಿಕೆಟ್ ಗಳ ನಡುವೆ ಧೋನಿ ರಾಕೆಟ್ ನಂತೆ ಓಡುತ್ತಾರೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಧೋನಿ ಎಂಬ ಹೆಸರಿನ ಕೋಣವಿದೆ. ಅದರ ಜೊತೆಗಾರ ರಾಕೆಟ್ ಬೊಲ್ಲ. ಈ ಜೋಡಿ ಕೋಣಗಳ ರಾಕೆಟ್ ವೇಗದ ಓಟ ಇದೀಗ ಹೊಸ ದಾಖಲೆ ಬರೆದಿದೆ.
ಶನಿವಾರ ಮಂಗಳೂರಿನ ಐಕಳದಲ್ಲಿ ನಡೆದ ಕಾಂತಬಾರೆ- ಬೂದಬಾರೆ ಜೋಡುಕರೆ ಕಂಬಳಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ಅವರ ಕೋಣಗಳಾದ ಬೊಲ್ಲ ಮತ್ತು ಧೋನಿ ಹೊಸ ದಾಖಲೆಗೆ ಪಾತ್ರವಾಗಿದೆ. ಬೈಂದೂರು ವಿಶ್ವನಾಥ್ ಓಡಿಸಿದ ಈ ಕೋಣಗಳು ಕೇವಲ ‘9.14 ಸೆಕೆಂಡ್’ ನಲ್ಲಿ ನೂರು ಮೀಟರ್ ಕ್ರಮಿಸಿ ಹೊಸ ಕಂಬಳ ದಾಖಲೆ ಬರೆದಿವೆ.
2020ರಲ್ಲಿ ಇದೇ ಐಕಳ ಕಂಬಳದಲ್ಲಿ ಶ್ರೀನಿವಾಸ್ ಗೌಡ ಅವರು ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು 9.55 ಸೆಕೆಂಡ್ (ನೂರು ಮೀಟರ್ ಗೆ ಪರಿವರ್ತಿಸಿದಾಗ) ನಲ್ಲಿ ಕ್ರಮಿಸಿ ಹೊಸ ದಾಖಲೆ ಬರೆದಿದ್ದರು. ನಂತರ ಅಕ್ಕೇರಿ ಸುರೇಶ್ ಶೆಟ್ಟಿ 9.37 ಸೆಕೆಂಡ್, ಇರ್ವತ್ತೂರು ಆನಂದ 9.57 ಸೆಕೆಂಡ್ ನಲ್ಲಿ ಓಡಿಸಿ ದಾಖಲೆ ಮಾಡಿದ್ದರು.
ಇದನ್ನೂ ಓದಿ:ಮೋದಿ ಜತೆಗಿನ ಚಿತ್ರ ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲೊಂದು: ಗ್ರಿಲ್ಸ್
ಇದೀಗ ಬೈಂದೂರು ವಿಶ್ವನಾಥ್ ಅವರು ಬೊಲ್ಲ ಮತ್ತು ಧೋನಿ ಕೋಣಗಳೊಂದಿಗೆ 142.5 ಮೀಟರ್ ದೂರವನ್ನು ಕೇವಲ 11.44 ಸೆಕೆಂಡ್ ನಲ್ಲಿ ಕ್ರಮಿಸಿದ್ದಾರೆ. ಈ ವೇಗವನ್ನು 100 ಮೀಟರ್ ಗೆ ಹೋಲಿಸಿದಾಗ 9.15 ಸೆಕೆಂಡ್ ನಲ್ಲಿ ಓಟ ಪೂರೈಸಿದಂತಾಗುತ್ತದೆ. ಇದೀಗ ಹೊಸ ದಾಖಲೆಯಾಗಿದೆ.
ಕಳೆದ ಕೆಲವು ವರ್ಷಗಳಿಂದ ನೇಗಿಲು ಹಿರಿಯ ವಿಭಾಗದಲ್ಲಿ ಸಾಧನೆ ಮಾಡುತ್ತಿರುವ ಬೋಳದಗುತ್ತು ಸತೀಶ್ ಶೆಟ್ಟಿಯವರ ಕೋಣಗಳು ಕಳೆದ ಬಾರಿಯು ದಾಖಲೆ ಓಟ ಓಡಿದ್ದವು. ಆಗ ಧೋನಿಯ ಜೊತೆಗೆ ಕಾಲೆ ಎಂಬ ಕೋಣ ಸಾಥ್ ನೀಡಿತ್ತು. ಆ ಓಟ 9.37 ಸೆಕೆಂಡ್ ನಲ್ಲಿ ಬಂದಿತ್ತು.
ಸೂಪರ್ ಸ್ಟಾರ್ ‘ಚೆನ್ನ’ ನಿಗೆ ನಡೆಯಿತು ಸನ್ಮಾನ
ಕಂಬಳ ಕ್ಷೇತ್ರದಲ್ಲಿ ಅತೀ ಹೆಚ್ಚು ಪದಕ ಪಡೆದ ಕಂಬಳ ಲೋಕದ ಸೂಪರ್ ಸ್ಟರ್ ಕೋಣ ‘ಚೆನ್ನ’ ನಿಗೆ ಐಕಳ ಕಂಬಳದಲ್ಲಿ ಸನ್ಮಾನ ಮಾಡಲಾಯಿತು. ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಮಾಲಕತ್ವದ ಚೆನ್ನ ಕೋಣದ ಸಾಧನೆಗಾಗಿ ಸನ್ಮಾನಿಸಿ, ಬೆಳ್ಳಿ ಸರವನ್ನು ಹಾಕಲಾಯಿತು.