Advertisement

ಯಶಸ್ಸು ಕಂಡೀತೇ ನೂತನ ರಣಜಿ ಪ್ರಯೋಗ?

06:15 AM Jul 20, 2018 | Team Udayavani |

ಹೊಸದಿಲ್ಲಿ: ಪ್ರಸಕ್ತ ಋತುವಿನಿಂದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ 9 ಹೊಸ ತಂಡಗಳನ್ನು ಆಡಿಸಲು ಸುಪ್ರೀಂ ಕೋರ್ಟ್‌ನಿಂದ ನಿಯೋಜಿಸಲ್ಪಟ್ಟ “ಆಡಳಿತಗಾರರ ಸಮಿತಿ’ ನಿರ್ಣಯವನ್ನು ತೆಗೆದುಕೊಂಡಿದೆ. ಈಶಾನ್ಯ ಭಾರತದ ಬಹುತೇಕ ತಂಡಗಳು ಈ ದೇಶಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡಲಿವೆ. ಇದರಿಂದ 2018-19ರಿಂದ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳಲಿರುವ ಒಟ್ಟು ತಂಡಗಳ ಸಂಖ್ಯೆ 37ಕ್ಕೆ ಏರಿದೆ. 

Advertisement

ಇದೊಂದು ಸ್ವಾಗತಾರ್ಹ ಬೆಳವಣಿಗೆಯಾದರೂ ಈ ನೂತನ ಯೋಜನೆ ಯಶಸ್ವಿಯಾದೀತೇ ಎಂಬ ಪ್ರಶ್ನೆ ಭೂತಾಕಾರದಲ್ಲಿ ಎದ್ದು ನಿಂತಿದೆ. ಈಶಾನ್ಯ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯ ಕ್ರಿಕೆಟ್‌ ಸ್ಟೇಡಿಯಂಗಳಿವೆಯೇ, ಇವುಗಳ ಸ್ಥಿತಿ ಗತಿ ಹೇಗಿದೆ, ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿವೆಯೇ, ಅಷ್ಟಕ್ಕೂ ಈ ರಾಜ್ಯಗಳಲ್ಲಿ ಕ್ರಿಕೆಟ್‌ ಎಷ್ಟರ ಮಟ್ಟಿಗೆ ಬೆಳವಣಿಗೆ ಕಂಡಿದೆ, ಕನಿಷ್ಠ ಜಿಲ್ಲಾ ಅಥವಾ ಕ್ಲಬ್‌ ಮಟ್ಟದಲ್ಲಾದರೂ ಇಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿವೆಯೇ, ಎಷ್ಟು ಮಂದಿ ತಾರಾ ಆಟಗಾರರು ಇಲ್ಲಿದ್ದಾರೆ… ಎಂಬೆಲ್ಲ ಪ್ರಶ್ನೆಗಳಿಗೆ ನಕಾರಾತ್ಮಕ ಉತ್ತರಗಳೇ ಸಿಗುತ್ತವೆ. 

ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ಈ ಬೆಳವಣಿಗೆಯಿಂದ ಮುಂದಿನ ಋತುವಿನಲ್ಲಿ ಬರೋಬ್ಬರಿ 2,017 ದೇಶಿ ಕ್ರಿಕೆಟ್‌ ಪಂದ್ಯಗಳು ನಡೆಯುತ್ತವೆ. ಇವುಗಳ ಉಸ್ತುವಾರಿ ವಹಿಸಲು ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಅಂಪಾಯರ್‌ ಮತ್ತು ರೆಫ್ರಿಗಳ ಅಭಾವ ಕಾಡಲಿದೆ ಎಂಬುದು. ಹೀಗಾಗಿ ಈ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ಸು ಕಂಡೀತು ಎಂಬುದೊಂದು ಪ್ರಶ್ನೆ.

ಈಶಾನ್ಯ ರಾಜ್ಯಗಳ ತಂಡಗಳು
ರಣಜಿಯಲ್ಲಿ ಪಾಲ್ಗೊಳ್ಳಲಿರುವ ನೂತನ ತಂಡಗಳೆಂದರೆ ಅರುಣಾಚಲ ಪ್ರದೇಶ, ಬಿಹಾರ್‌, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ, ಉತ್ತರಾಖಂಡ್‌. 

9 ತಂಡಗಳ ಸೇರ್ಪಡೆಯಿಂದ ರಣಜಿ ಟ್ರೋಫಿ ಗ್ರೂಪ್‌ಗ್ಳ ಸಂಖ್ಯೆಯನ್ನು ಮೂರರಿಂದ ನಾಲ್ಕಕ್ಕೆ ಏರಿಸಲಾಗಿದೆ. ಇದರಂತೆ ಎಲೈಟ್‌ ಎ ಮತ್ತು ಬಿ ವಿಭಾಗಗಳಲ್ಲಿ ತಲಾ 9 ತಂಡಗಳು, ಸಿ ವಿಭಾಗದಲ್ಲಿ 10 ತಂಡಗಳು ಇರಲಿವೆ. ನೂತನ ತಂಡಗಳೆಲ್ಲವನ್ನೂ ಪ್ಲೇಟ್‌ ಗ್ರೂಪ್‌ಗೆ ಸೇರಿಸಲಾಗಿದೆ.ನಾಕೌಟ್‌ ಲೆಕ್ಕಾಚಾರ ಹೀಗಿದೆ: ಎ ಮತ್ತು ಬಿ ವಿಭಾಗದಿಂದ ತಲಾ 5 ತಂಡಗಳು, ಸಿ ವಿಭಾಗದಿಂದ 2 ತಂಡಗಳು ಹಾಗೂ ಪ್ಲೇಟ್‌ ವಿಭಾಗದಿಂದ ಒಂದು ತಂಡ ಮುಂದಿನ ಸುತ್ತು ತಲುಪಲಿದೆ. 50 ಓವರ್‌ಗಳ “ವಿಜಯ್‌ ಹಜಾರೆ ಟ್ರೋಫಿ’ ಪಂದ್ಯಾವಳಿಗೂ ಇದೇ ಮಾದರಿ ಅನ್ವಯವಾಗಲಿದೆ.

Advertisement

ಮುಂದಿನ ರಣಜಿ ಋತುವಿಗೆ ಸಿ ವಿಭಾಗದ 2 ಅಗ್ರ ತಂಡಗಳು ಎ ಮತ್ತು ಬಿ ವಿಭಾಗಕ್ಕೆ ಭಡ್ತಿ ಪಡೆಯುತ್ತವೆ. ಹಾಗೆಯೇ ಎ ಮತ್ತು ಬಿ ವಿಭಾಗದಲ್ಲಿ ಕೊನೆಯ ಸ್ಥಾನ ಪಡೆದ ತಂಡಗಳು ಸಿ ವಿಭಾಗಕ್ಕೆ ಹಿಂಭಡ್ತಿ ಪಡೆಯಲಿವೆ. ಪ್ಲೇಟ್‌ ವಿಭಾಗದ ಅಗ್ರ ತಂಡ ಸಿ ವಿಭಾಗಕ್ಕೆ ಬಂದರೆ, ಸಿ ವಿಭಾಗದ ಕೊನೆಯ 2 ತಂಡಗಳು ಪ್ಲೇಟ್‌ ವಿಭಾಗಕ್ಕೆ ಇಳಿಯಲಿವೆ.

ರಣಜಿ ಆಡಲಿರುವ  ಹೊಸ ತಂಡ
ಅರುಣಾಚಲ ಪ್ರದೇಶ 
ಬಿಹಾರ 
ಮಣಿಪುರ 
ಮೇಘಾಲಯ 
ಮಿಜೋರಂ 
ನಾಗಾಲ್ಯಾಂಡ್‌ 
 ಪುದುಚೇರಿ 
ಸಿಕ್ಕಿಂ
 ಉತ್ತರಾಖಂಡ್‌ 

ಆ. 17ರಿಂದ ದೇಶಿ ಕ್ರಿಕೆಟ್‌ ಋತು
ಆಗಸ್ಟ್‌ 17ರ ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯೊಂದಿಗೆ 2018-19ನೇ ಸಾಲಿನ ದೇಶಿ ಕ್ರಿಕೆಟ್‌ ಋತು ಆರಂಭವಾಗಲಿದೆ. ಸೆ. 19ರಿಂದ ವಿಜಯ್‌ ಹಜಾರೆ ಟ್ರೋಫಿ, ನ. ಒಂದರಿಂದ ರಣಜಿ ಟ್ರೋಫಿ, ಫೆ. 11ರಿಂದ ಇರಾನಿ ಕಪ್‌, ಫೆ. 21ರಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಮೊದಲ್ಗೊಳ್ಳುತ್ತದೆ. ದೇವಧರ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ ದಿನಾಂಕವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.
 
ಡಿಸೆಂಬರ್‌ನಲ್ಲಿ ವನಿತೆಯರ ವನ್‌ ಡೇ ಲೀಗ್‌ ಹಾಗೂ ಜ. ಮೊದಲಾರ್ಧದಲ್ಲಿ ವನಿತಾ ಏಕದಿನ ಚಾಲೆಂಜರ್‌ ಟ್ರೋಫಿ ಸರಣಿ ನಡೆಯಲಿದೆ. ಫೆ. 20ರಿಂದ ವನಿತಾ ಟಿ20 ಲೀಗ್‌ ಆರಂಭವಾಗುತ್ತದೆ.

ಬಿಸಿಸಿಐ ತಾಂತ್ರಿಕ ಸಮಿತಿಅಸಮಾಧಾನ
ರಣಜಿ ತಂಡಗಳ ಸಂಖ್ಯೆಯನ್ನು 28ರಿಂದ ಏಕಾಏಕಿ 37ಕ್ಕೆ ಏರಿಕೆಯಾಗಿರುವುದಕ್ಕೆ ಬಿಸಿಸಿಐ ತಾಂತ್ರಿಕ ಸಮಿತಿಯಿಂದ ಅಸಮಾಧಾನ ವ್ಯಕ್ತವಾಗಿದೆ. ತಾಂತ್ರಿಕ ಸಮಿತಿ ಮುಖ್ಯಸ್ಥ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಅವರ ಅಭಿಪ್ರಾಯ ಕೇಳದೆ ಆಡಳಿತಾಧಿಕಾರಿಗಳು ಶಿಫಾರಸು ನಡೆಸಿದ್ದಾರೆ ಎನ್ನಲಾಗಿದ್ದು, ಇದು ವಿರೋಧಕ್ಕೆ ಕಾರಣವಾಗಿದೆ. 

ಹೆಚ್ಚಿನ ತಂಡಗಳಿಗೆ ರಣಜಿ ಅವಕಾಶ ನೀಡಿರುವುದನ್ನು ಗಂಗೂಲಿ ಸ್ವಾಗತಿಸಿದ್ದಾರೆ. ಆದರೆ ಇಂತಹ ಕ್ಲಿಷ್ಟ ನಿರ್ಧಾರವನ್ನು ತೆಗೆದುಕೊಂಡು ವೇಳಾಪಟ್ಟಿ ಪ್ರಕಟಿಸುವ ಮುನ್ನ ತಾಂತ್ರಿಕ ಸಮಿತಿ ಅಭಿಪ್ರಾಯವನ್ನು ಬಿಸಿಸಿಐ ಆಡಳಿತಾಧಿಕಾರಿಗಳು ಕೇಳಿಲ್ಲ ಎನ್ನಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಜತೆಗೆ ಒಂದೆಡೆಯಿಂದ ಕ್ರಿಕೆಟ್‌ಗೆ ಬೇಕಾದ ಸಾಮಗ್ರಿ ತಲುಪಿಸುವ ಸೂಕ್ತ ವ್ಯವಸ್ಥೆ ಕೂಡ ಇಲ್ಲ. ಈ ರಾಜ್ಯಗಳ ಆಟಗಾರರ ಪ್ರದರ್ಶನ ಹೇಗಿದೆ, ಅವರ ಆಟ ರಣಜಿ ಮಟ್ಟದಲ್ಲಿ ಇದೆಯೇ? ಎನ್ನುವಂತಹ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇಷ್ಟೆಲ್ಲ ತಾಂತ್ರಿಕ ಕೊರತೆಗಳ ನಡುವೆ ಮುಂಬರುವ ರಣಜಿ ಕ್ರಿಕೆಟ್‌ ಯಶಸ್ವಿಯಾದೀತೇ?

Advertisement

Udayavani is now on Telegram. Click here to join our channel and stay updated with the latest news.

Next