Advertisement
ಪಾಲಿಕೆಯು 10 ಕೋ.ರೂ.ಗಳ ಯೋಜನ ವೆಚ್ಚವನ್ನು ಗಮನದಲ್ಲಿರಿಸಿ ಹೊಸ ಪ್ರಸ್ತಾವನೆಯನ್ನು ಆರು ತಿಂಗಳ ಹಿಂದೆ ರಾಜ್ಯದ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಡಿಪಾರ್ಟ್‌ಮೆಂಟ್ ಗೆ (ಐಡಿಡಿ) ಕಳುಹಿಸಿತ್ತು. 5 ಕೋ.ರೂ. ವೆಚ್ಚದಲ್ಲಿ ಅಂಡರ್ ಪಾಸ್ ಹಾಗೂ ಇನ್ನುಳಿದ 5 ಕೋ.ರೂ.ಗಳಲ್ಲಿ ಅಕ್ಕ ಪಕ್ಕದ ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶವಿತ್ತು. ಆದರೆ ಈ ಪ್ರಸ್ತಾವನೆಗೆ ಜೀವ ನೀಡುವ ಕೆಲಸ ಇನ್ನೂ ಆಗಿಲ್ಲ. ಇದರ ಬೆನ್ನು ಹಿಡಿದು ಯೋಜನೆ ಕಾರ್ಯಗತ ಮಾಡುವತ್ತ ಯಾರೂ ವಿಶೇಷ ಕಾಳಜಿ ವಹಿಸಿದಂತಿಲ್ಲ. ಹೀಗಾಗಿ ಪ್ರಸ್ತಾವನೆ ಕಡತದಲ್ಲಿಯೇ ಬಾಕಿಯಾಗಿದೆ.
ಇದಕ್ಕೂ ಮೊದಲು ಇಲ್ಲಿ ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಪಾಲಿಕೆಯಿಂದ 24 ಕೋ.ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ.50:50ರಂತೆ ಪಾಲಿಕೆ ಹಾಗೂ ರೈಲ್ವೇ ಇಲಾಖೆಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ, ಇಷ್ಟು ಮೊತ್ತ ಭರಿಸಿ ಯೋಜನೆ ಮಾಡಲು ರೈಲ್ವೇಗೆ ಅವಕಾಶವಿಲ್ಲ. ಹೀಗಾಗಿ ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆಯು ಪಾಲಿಕೆಗೆ ವಾಪಸ್ ಕಳುಹಿಸಲಾಗಿತ್ತು. ಆದರೆ, 24 ಕೋ.ರೂ.ಗಳನ್ನು ಪಾಲಿಕೆಗೆ ಭರಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಪಾಲಿಕೆಯು ಪ್ರಸ್ತಾವನೆಯನ್ನು ಬದಲಿಸಲು ತೀರ್ಮಾನಿಸಿತು. ಹೀಗಾಗಿ ತೊಕ್ಕೊಟ್ಟು ಭಾಗದಿಂದ ರಾಷ್ಟ್ರೀಯ ಹೆದ್ದಾರಿಯಿಂದ ಮಹಾ ಕಾಳಿ ಪಡ್ಪುವಿಗೆ ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರೀತಿಯಲ್ಲಿ ವಿಸ್ತರಿಸಿ ಮಹಾಕಾಳಿಪಡ್ಪುವಿನಲ್ಲಿ ರೈಲ್ವೇ ಓವರ್‌ಬ್ರಿಡ್ಜ್ ಮಾಡುವ ಯೋಜನೆಯನ್ನು ಕೈ ಬಿಡಲಾಗಿದೆ. ಬದಲಾಗಿ 10 ಕೋ.ರೂ. ವೆಚ್ಚದಲ್ಲಿ ಅಂಡರ್ ಪಾಸ್ ಹಾಗೂ ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ.
Related Articles
Advertisement
6 ಲೈನ್ ರಸ್ತೆ ?ತೊಕ್ಕೊಟ್ಟಿನಿಂದ ಜಪ್ಪಿನ ಮೊಗರು- ಮಹಾಕಾಳಿಪಡ್ಪು- ಮಾರ್ಗನ್ಸ್‌ಗೇಟ್ ರಸ್ತೆಯನ್ನು ಆರು ಪಥ ಅಥವಾ ಚತುಷ್ಪಥಗೊಳಿಸುವ ನಿಟ್ಟಿನಲ್ಲಿ ಸಂಸದರು, ಜನಪ್ರತಿನಿಧಿಗಳ ಜತೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಶೇ. 50:50ರ ಅನುಪಾತದಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸ್ಮಾರ್ಟ್‌ಸಿಟಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಅನುದಾನ ದೊರೆಯದಿದ್ದಲ್ಲಿ ರಾಜ್ಯ ಸರಕಾರ ಅಥವಾ ಪಾಲಿಕೆ ವತಿಯಿಂದ ಭರಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂಬ ಸುಳಿವು ನೀಡಿದ್ದರು. ಸಚಿವರ ಈ ಹೇಳಿಕೆ ಮಹಾಕಾಳಿಪಡ್ಪು, ಮೋರ್ಗನ್ ಗೇಟ್ ಭಾಗದಿಂದ ಬರುವ ನೂರಾರು ವಾಹನ ಸವಾರರಿಗೆ ಹೊಸ ನಿರೀಕ್ಷೆಯನ್ನೂ ಮೂಡಿಸಿದೆ. ಆದರೆ, ಈ ಮಾತೂ ಕೂಡ ಕಡತದಲ್ಲಿಯೇ ಬಾಕಿಯಾಗದಿರಲಿ ಎಂಬುದು ಸ್ಥಳೀಯರ ಆಗ್ರಹ. ನಿತ್ಯ 46 ರೈಲು ಸಂಚಾರ!
ಕೇರಳ – ಮಂಗಳೂರು ಮಧ್ಯೆ ಪ್ರತಿನಿತ್ಯ ಸುಮಾರು 46ರಷ್ಟು ರೈಲುಗಳು ಸಂಚರಿಸುತ್ತವೆ. ಈ ರೈಲು ಮಹಾಕಾಳಿಪಡ್ಪು ಮೂಲಕ ಸಾಗುವ ಕಾರಣದಿಂದ ಇಲ್ಲಿ ರಸ್ತೆ ಸಂಚಾರ ಆ ಸಂದರ್ಭ ಸ್ಥಗಿತಗೊಳ್ಳುತ್ತದೆ. ನಿತ್ಯ ಸುಮಾರು 50ರಷ್ಟು ಬಾರಿ ಈ ಕಾರಣಕ್ಕಾಗಿ ರಸ್ತೆ ಬ್ಲಾಕ್ ಆಗಿ ತೊಕ್ಕೊಟ್ಟು-ಮಂಗಳೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯ ಇಲ್ಲಿ ನಿತ್ಯದ ಸಂಗತಿ. — ದಿನೇಶ್ ಇರಾ