ನವದೆಹಲಿ/ಎರ್ನಾಕುಳಂ: ದತ್ತಾಂಶ ಖಾಸಗಿತನ ಕಾನೂನು ಜಾರಿಯಾಗುವವರೆಗೂ ನಮ್ಮ ಖಾಸಗಿತನ ನೀತಿಯನ್ನು ತಡೆ ಹಿಡಿಯುತ್ತೇವೆ ಎಂದು ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ವಾಟ್ಸ್‌ಆ್ಯಪ್ ತಿಳಿಸಿದೆ.
ಇದನ್ನೂ ಓದಿ:ಯಾರಾದರೂ ಹಿರಿಯರು, ಸ್ವಾಮೀಜಿಗಳು ಮಂಡ್ಯ ಗಣಿಗಾರಿಕೆ ಮಾತಿನ ಸಮರವನ್ನು ಬಗೆಹರಿಸಬೇಕು: ನಿರಾಣಿ
ಬಳಕೆದಾರರು ನಮ್ಮ ಹೊಸ ನೀತಿಗೆ ಸಮ್ಮತಿಸದಿದ್ದರೂ, ಮೆಸೇಜಿಂಗ್ ಆ್ಯಪ್‌ನ ಕಾರ್ಯಾಚರಣೆ ಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಹೊಸ ದತ್ತಾಂಶ ಸುರಕ್ಷತಾ ವಿಧೇಯಕವು ಅನುಷ್ಠಾನ ಆಗುವವರೆಗೂ ಕಾಯುತ್ತೇವೆ ಎಂದು ವಾಟ್ಸ್‌ಆ್ಯಪ್ ಹೇಳಿದೆ. ಈ ಹಿಂದೆ ಕೇಂದ್ರ ಸರ್ಕಾರವು ವಾಟ್ಸ್‌ಆ್ಯಪ್ ತನ್ನ ನೀತಿಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿತ್ತು.
ಕ್ರಮ ಕೈಗೊಳ್ಳದಂತೆ ಸೂಚನೆ: ಇನ್ನೊಂದೆಡೆ, ಹೊಸ ಐಟಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಹಲವು ನ್ಯೂಸ್‌ಚಾನೆಲ್‌ಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್‌ಕಾ ಸ್ಟರ್ಸ್ ಅಸೋಸಿಯೇಷನ್(ಎನ್‌ಬಿಎ)ನ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಕೇರಳ ಹೈಕೋರ್ಟ್ ಆದೇಶಿಸಿದೆ.
ಜತೆಗೆ, ಹೊಸ ಐಟಿ ನಿಯಮಗಳು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿನಾಕಾರಣ ನಿರ್ಬಂಧಿಸುವಂಥ ಅತಿಯಾದ ಅಧಿಕಾರವನ್ನು ಒದಗಿಸುತ್ತದೆ ಎಂದು ಎನ್‌ಬಿಎ ಕಳವಳ ವ್ಯಕ್ತಪಡಿಸಿದೆ. ಹೈಕೋರ್ಟ್‌ಗಳಲ್ಲಿ ಇದೇ ವಿಚಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೋರಿ, ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಜು.16ಕ್ಕೆ ನಡೆಯಲಿದೆ.