ಪಣಂಬೂರು: ನವಮಂಗಳೂರು ಬಂದರಿಗೆ ಶುಕ್ರವಾರ ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು ಆಗಮಿಸುವುದರೊಂದಿಗೆ ಈ ಬಾರಿಯ ಕ್ರೋಸ್ ಸೀಸನ್ ಅರಂಭಗೊಂಡಿತು.
ನಾರ್ವೆಯ ಒಡೆತನದ, ಬಹಾಮಾಸ್‌ಧ್ವಜ ಹೊಂದಿದ್ದು 500 ಪ್ರಯಾಣಿಕರು ಮತ್ತು 350 ಸಿಬಂದಿಯನ್ನು ಹೊಂದಿದೆ. 173 ಮೀಟರ್ ಉದ್ದವಿರುವ ಈ ಹಡಗು ಆಗಿದ್ದು, 28,803 ಟನ್ ಭಾರ, ಮತ್ತು 7.5 ಮೀಟರ್ ಆಳವಿದೆ.
ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ ಚೆಂಡೆ ಮತ್ತು ಯಕ್ಷಗಾನ, ಭರತನಾಟ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರವಾಸಿಗರು ಈ ಕರ್ನಾಟಕದ ಕಲಾ ಪ್ರಕಾರದ ಜತೆ ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು.
ನವಮಂಗಳೂರು ಬಂದರಿನ ಅಧ್ಯಕ್ಷರು ಡಾ| ಎ.ವಿ. ರಮಣ ಅವರು ಹಡಗಿನ ಕ್ಯಾಪ್ಟನ್‌ಗೆ ಸ್ಮರಣಿಕೆ ನೀಡುವ ಮೂಲಕ ಹಡಗು ಪ್ರವಾಸೋದ್ಯಮ ಋತುವಿಗೆ ಚಾಲನೆ ನೀಡಿದರು. ಉಪಾಧ್ಯಕ್ಷರು ಮತ್ತು ಇತರ ಹಿರಿಯ ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರವಾಸಿಗರು ಕಾರ್ಕಳದ ಗೋಮ ಟೇಶ್ವರ ಪ್ರತಿಮೆ, ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್ ಮತ್ತು ಸ್ಥಳೀಯ ಮಾರುಕಟ್ಟೆಯಂತಹ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಬಳಿಕ ಹಡಗು ಕೊಚ್ಚಿ ಬಂದರಿಗೆ ಪ್ರಯಾಣಿಸಿತು.