ಬಾಗಲಕೋಟೆ: ಯುವಕರೇ ಮುಂದಿನ ದೇಶದ ಪ್ರಜೆಗಳಾಗಿದ್ದು, ಜಿಲ್ಲೆಯಲ್ಲಿ ಕರ್ನಾಟಕ ಯುವನೀತಿ-2021 ಸಮರ್ಪಕ ಅನುಷ್ಠಾನ ಗೊಳಿಸುವ ಮೂಲಕ ಯುವಜನರ ವ್ಯಕ್ತಿತ್ವ ವಿಕಾಸ, ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕರ್ನಾಟಕ ಯುವನೀತಿ-2021 ರಚನೆ ಮಾಡುವ ನಿಟ್ಟಿನಲ್ಲಿ ಯುವಜನರ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವಿವಿಧ ಕ್ರೀಡಾಪಟಗಳ ಮಾಹಿತಿ ಸಂಗ್ರಹಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ತಾಲೂಕುವಾರು ಎನ್‌ಜಿಒಗಳ ಮೂಲಕ ಸಮೀಕ್ಷೆ ಕಾರ್ಯ ಕೈಗೊಳ್ಳುವ ಮೂಲಕ ಗುರುತಿಸಿ ಅವರಿಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.
ಯುವಜನರ ವ್ಯಕ್ತಿತ್ವ ವಿಕಸನ, ಸ್ವಯಂ ಉದ್ಯೋಗ ತರಬೇತಿ, ಗ್ರಾಮ ಪಂಚಾಯಿತಿ ಅನುದಾನದಲ್ಲಿ ಯುವ ಸಂಘಗಳಿಗೆ ಶೇ. 2ರಷ್ಟು ಅನುದಾನ ಮೀಸಲು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಯುವ ಸಬಲೀಕರಣ ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇದರ ಮೂಲಕ ಯುವ ಜನರಿಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಯುವ ಸಂಘಗಳಿದ್ದು, ಅವುಗಳ ಮೂಲಕ ಆರೋಗ್ಯ, ನೈರ್ಮಲ್ಯ, ವ್ಯವಸಾಯ, ನೀರಾವರಿ, ಅರಣ್ಯ, ಶಿಕ್ಷಣಿಕ, ಮಹಿಳಾ ಸಬಲೀಕರಣ, ಬಾಲಕಾರ್ಮಿಕ ಮಕ್ಕಳನ್ನು ಇತರೆ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಕ್ರಮವಹಿಸಲಾಗುವುದು. ಗ್ರಾಮೀಣ ಮಟ್ಟದಲ್ಲಿ ಪ್ರತಿ ಗ್ರಾಮಕ್ಕೆ ಯುವಕ, ಯುವತಿ ಸಂಘಗಳಿದ್ದು, ಅವುಗಳನ್ನು ಗ್ರಾಮೀಣಾಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಯುವಕರಿಗೆ ಹೆಚ್ಚಿನ ತರಬೇತಿ ಹಮ್ಮಿಕೊಳ್ಳಲು ಸ್ವಯಂ ಉದ್ಯೋಗ ತರಬೇತಿ ಹಾಗೂ ಉದ್ಯೋಗ ಮೇಳ ಆಯೋಜಿಸಲು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವೈ. ಕುಂದರಗಿ ಕರ್ನಾಟಕ ಯುವನೀತಿಯನ್ವಯ ರಚನೆಯ ರೂಪುರೇಷೆಗಳ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ಸ್ವಯಂ ಸೇವಾ ಸಂಸ್ಥೆಗಳ ಅಭಿಪ್ರಾಯ ಪಡೆಯಲಾಯಿತು. ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಸುಶ್ಮಾ ಗವಳಿ, ಕಾರ್ಯಕ್ರಮ ಹಾಗೂ ಲೆಕ್ಕಾಧಿಕಾರಿ ರಾಮರಾವ್ ಬಿರಾದಾರ, ಸೈಕ್ಲಿಂಗ್ ತರಬೇತುಗಾರ್ತಿ ಅನಿತಾ ನಿಂಬರಗಿ ಉಪಸ್ಥಿತರಿದ್ದರು.