Advertisement
ನೀರಾವರಿ ಯೋಜನೆಗಳಿಗೆ ಭೂಸ್ವಾಧೀನವೇ ದೊಡ್ಡ ಅಡ್ಡಿಯಾಗಿದ್ದು, ಸರ್ಕಾರಕ್ಕೆ ಹೊರೆಯಾಗುವುದರ ಜತೆಗೆ ಭೂಸ್ವಾಧೀನ ವಿಳಂಬವಾಗಿ ಯೋಜನಾ ವೆಚ್ಚವೂ ಹೆಚ್ಚುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಾಧ್ಯವಾದ ಕಡೆ ಭೂಮಿಯ ಮಾಲಿಕತ್ವವನ್ನು ರೈತರಿಗೇ ನೀಡಿ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಅದನ್ನು ಬಳಸಿಕೊಳ್ಳುವುದು ಇದರ ಉದ್ದೇಶ.
Related Articles
ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ಮತ್ತು ದೇವನಹಳ್ಳಿ ತಾಲೂಕಿನ 5427 ಎಕರೆ ಪ್ರದೇಶದಲ್ಲಿ ಬೈರಗೊಂಡಲು ಜಲಾಶಯ ನಿರ್ಮಿಸಲಾಗುತ್ತದೆ. ಈ ಯೋಜನೆಯಡಾ ಮಳೆಗಾಲದ ಮೂರು ತಿಂಗಳು ಮಾತ್ರ ನೀರನ್ನು ಬಯಲು ಸೀಮೆ ಜಿಲ್ಲೆಯ ಕೆರೆಗಳಿಗೆ ಪೂರೈಸಲಾಗುತ್ತದೆ. ಅಂದರೆ ಜಲಾಶಯದಲ್ಲಿ ಮೂರು ತಿಂಗಳು ಮಾತ್ರ ನೀರು ಇರಲಿದ್ದು, ಉಳಿದ ಒಂಬತ್ತು ತಿಂಗಳು ಖಾಲಿ ಇರುತ್ತದೆ. ಅದೇರೀತಿ ಆಲಮಟ್ಟಿ ಎಣೆಕಟ್ಟೆ ಎತ್ತರವನ್ನು 524 .256 ಮೀಟರ್‌ಗೆ ಎತ್ತರಿಸಿದ ಬಳಿಕ ಶಾಶ್ವತ ಮುಳುಗಡೆ ಪ್ರದೇಶ ಮತ್ತು ತಾತ್ಕಾಲಿಕ ಮುಳುಗಡೆ ಪ್ರದೇಶ ಎಂದು ಎರಡು ಹಂತಗಳಿರುತ್ತವೆ.
Advertisement
ತಾತ್ಕಾಲಿಕ ಮುಳುಗಡೆ ಪ್ರದೇಶದಲ್ಲಿ ಮೂರು ಅಥವಾ ನಾಲ್ಕು ತಿಂಗಳು ಮಾತ್ರ ನೀರು ನಿಲ್ಲುತ್ತದೆ. ಉಳಿದ ಅವಧಿಯಲ್ಲಿ ಭೂಮಿ ಖಾಲಿ ಇರುತ್ತದೆ. ಈ ರೀತಿ ತಾತ್ಕಾಲಿಕವಾಗಿ ಮುಳುಗಡೆಯಾಗುವ ಭೂಮಿಯಲ್ಲಿ ಒಂಬತ್ತು ತಿಂಗಳು ರೈತರು ಕೃಷಿ ಚಟುವಟಿಕೆ ಹಮ್ಮಿಕೊಳ್ಳಬಹುದು ಎಂಬುದು ಸಚಿವ ಡಿ.ಕೆ.ಶಿವಕುಮಾರ್ ಅವರ ಅಭಿಪ್ರಾಯ.
ಇಂತಹ ಭೂಮಿಯನ್ನು ರೈತರಿಂದ ಶಾಶ್ವತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು ಭೂಮಿಯ ಹಕ್ಕನ್ನು ಅವರಿಗೇ ಬಿಟ್ಟುಕೊಟ್ಟು ಮೂರು ತಿಂಗಳು ಮಾತ್ರ ಅವರಿಂದ ಭೂಮಿ ಪಡೆದು ಆ ಅವಧಿಗೆ ಬೆಳೆ ಪರಿಹಾರ ನೀಡುವುದು ಹೊಸ ನೀತಿಯ ಅಂಶ. ಇದರಿಂದ ಭೂಮಿ ರೈತರಿಗೇ ಉಳಿಯುವಂತಾಗುತ್ತದೆ. ಸರ್ಕಾರ ಭೂಸ್ವಾಧೀನಕ್ಕೆ ಮಾಡಬೇಕಾದ ಹೊರೆಯೂ ಕಡಿಮೆಯಾಗುತ್ತದೆ. ಅಲ್ಲದೆ, ಅಗತ್ಯ ಭೂಮಿಯನ್ನು ತ್ವರಿತವಾಗಿ ಬಳಸಿಕೊಂಡು ಯೋಜನೆ ಜಾರಿಗೊಳಿಸಲು ಅನುಕೂಲವಾಗುತ್ತದೆ. ನೀರಾವರಿಗೆ ಸಂಬಂಧಿಸಿದಂತೆ ಸಾಧ್ಯವಿರುವ ಎಲ್ಲಾ ಕಡೆ ಈ ನೀತಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸ್ಥಳೀಯ ರೈತರ ಅಭಿಪ್ರಾಯ ಪಡೆದು ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಹಾಗೆಂದು ರೈತರು ಇದಕ್ಕೆ ಒಪ್ಪಲೇ ಬೇಕು ಎಂದೇನಿಲ್ಲ. ಭೂಸ್ವಾಧೀನ ಮತ್ತು ತಾತ್ಕಾಲಿಕವಾಗಿ ಭೂಮಿ ಪಡೆಯುವ ಎರಡೂ ಆಯ್ಕೆಗಳನ್ನು ಅವರ ಮುಂದಿಡಲಾಗುವುದು. ರೈತರು ತಮಗೆ ಯಾವುದು ಅನುಕೂಲವೋ ಅದಕ್ಕೆ ಸಮ್ಮತಿಸಬಹುದು. ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಖಂಡಿತ ಎಂಬುದು ಮನವರಿಕೆಯಾಗುವಾಗ ರೈತರು ಭೂಮಿಯ ಹಕ್ಕು ತಮಗೆ ಬೇಕು ಎಂಬ ಭಾವನಾತ್ಮಕ ಕಾರಣಗಳಿಗಾಗಿ ಹೊಸ ನೀತಿಗೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದರು.
ಕುಡಿವ ನೀರಿನ ನಾಲೆಗಳಿಗೆ ಮೋಟರ್ ಪಂಪ್ ಹಾಕಿ ನೀರು ತೆಗೆಯುವಂತಿಲ್ಲಕುಡಿಯುವ ನೀರಿನ ಉದ್ದೇಶದಿಂದ ನೀರು ಪೂರೈಕೆಯಾಗುತ್ತಿರುವ ನಾಲೆಗಳಿಗೆ ರೈತರು ಮೋಟರ್ ಪಂಪ್ ಹಾಕಿ ನೀರು ಮೇಲೆತ್ತದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗುವುದು. ಜಲ ಸಂಪನ್ಮೂಲ ಮತ್ತು ಇಂಧನ ಇಲಾಖೆ ಸೇರಿ ಅಂತಹ ನಾಲೆಗಳ ಪಕ್ಕ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ನೋಡಿಕೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನೀರು ಹರಿಸುವ ನಾಲೆಗಳಿಗೆ ನೇರವಾಗಿ ಮೋಟರ್ ಪಂಪ್ ಹಾಕಿ ನೀರು ತೆಗೆಯಬಾರದು ಎಂಬ ನಿಯಮ ಇದ್ದರೂ ಅದು ಜಾರಿಯಾಗುತ್ತಿಲ್ಲ. ಆದರೆ, ಕುಡಿಯುವ ನೀರು ಪೂರೈಸುವ ನಾಲೆಗಳ ವಿಚಾರದಲ್ಲಿ ಈ ರೀತಿಯ ಮೃದು ಧೋರಣೆ ಸಾಧ್ಯವಿಲ್ಲ. ಹೀಗಾಗಿ ಅಂತಹ ನಾಲೆಗಳಿರುವ ಪ್ರದೇಶದಲ್ಲಿ ಮೋಟರ್ ಪಂಪ್‌ಗ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಇಂಧನ ಇಲಾಖೆ ಜತೆ ಚರ್ಚಿಸಲಾಗುವುದು. ಜತೆಗೆ ಜಲ ಸಂಪನ್ಮೂಲ ಇಲಾಖೆ ಮೂಲಕವೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಎತ್ತಿನಹೊಳೆ ಯೋಜನೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.