Advertisement

ಕಡಬ: ಆರಕ್ಷಕರಿಗೆ ಸುಸಜ್ಜಿತ ವಸತಿಗೃಹ ಸಮುಚ್ಚಯ ಸಿದ್ಧ

05:40 AM May 26, 2018 | Karthik A |

ಕಡಬ: ಕಡಬ ಆರಕ್ಷಕ ಠಾಣೆ ಇದೀಗ ತಾಲೂಕು ಕೇಂದ್ರದಲ್ಲಿರುವ ಠಾಣೆ. ಎಲ್ಲ ಸಿಬಂದಿಗೂ ವಸತಿಗೃಹ ಬೇಕೆಂಬ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಠಾಣೆಯ ಸಮೀಪದಲ್ಲಿಯೇ ಸುಸಜ್ಜಿತ ವಸತಿಗೃಹ ಸಮುಚ್ಚಯದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿವೆ.

Advertisement

29 ಸಿಬಂದಿಗೆ ಇದ್ದುದು ಬರೇ13 ಮನೆ!


ಕಡಬ ಆರಕ್ಷಕ ಠಾಣೆಗೆ ಎಸ್‌ಐ-1, ಎಎಸ್‌ಐ-3, ಹೆಡ್‌ ಕಾನ್‌ ಸ್ಟೆಬಲ್‌-7 ಹಾಗೂ ಮಹಿಳಾ ಕಾನ್‌ ಸ್ಟೆಬಲ್‌ ಗ‌ಳು ಸಹಿತ 18 ಕಾನ್‌ ಸ್ಟೆಬಲ್‌ ಗ‌ಳು – ಹೀಗೆ ಒಟ್ಟು 29 ಹುದ್ದೆಗಳು ಮಂಜೂರುಗೊಂಡಿವೆ. ಆದರೆ 29 ಸಿಬಂದಿಗೆ ಇದುವರೆಗೆ ಲಭ್ಯವಿದ್ದುದು ಕೇವಲ 13 ಮನೆ. ಉಳಿದವರು ಬಾಡಿಗೆ ಮನೆಗಳನ್ನೇ ಆಶ್ರಯಿಸಬೇಕಾಗಿತ್ತು. ಇದೀಗ ನೂತನವಾಗಿ ನಿರ್ಮಾಣಗೊಂಡಿರುವ ವಸತಿ ಸಮುಚ್ಚಯದಲ್ಲಿ ಒಟ್ಟು 12 ಮನೆಗಳಿವೆ. ಹಳೆಯ 13 ಮನೆಗಳು ಹಾಗೂ ಹೊಸ 12 ಮನೆಗಳು ಸೇರಿ ಒಟ್ಟು 25 ಮನೆಗಳು ಈಗ ಲಭ್ಯವಿವೆ. ಅದರಿಂದಾಗಿ ಹೊಸ ಮನೆಗಳು ವಾಸಕ್ಕೆ ಸಿಕ್ಕಿದಾಗ ಸಿಬಂದಿಯ ವಸತಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.

2.66 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ


ಕಡಬ ಠಾಣೆಯ ಹೆಸರಿನಲ್ಲಿ ಒಟ್ಟು 2.5 ಎಕರೆ ಜಮೀನು ಇದೆ. ಇದೀಗ ಹೊಸದಾಗಿ ನಿರ್ಮಾಣಗೊಂಡಿರುವ ಮೂರಂತಸ್ತಿನ ವಸತಿ ಸಮುಚ್ಚಯದ ಕಟ್ಟಡ ಠಾಣೆಗೆ ಹತ್ತಿರದಲ್ಲಿ ಅದೇ ಜಮೀನಿನಲ್ಲಿ 2.66 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಕರ್ನಾಟಕ ಪೊಲೀಸ್‌ ಹೌಸಿಂಗ್‌ ಕಾರ್ಪೋರೇಶನ್‌ ಮೂಲಕ ಹೈದರಾಬಾದ್‌ ಮೂಲದ ಗುತ್ತಿಗೆದಾರ ಸಂಸ್ಥೆ ಎನ್‌.ಆರ್‌. ಕನ್‌ಸ್ಟ್ರಕ್ಷನ್ಸ್‌ ನಿರ್ಮಾಣ ಕಾಮಗಾರಿ ವಹಿಸಿಕೊಂಡು ಪೂರ್ಣಗೊಳಿಸಿದೆ. ಪ್ರತಿ ಮನೆಯಲ್ಲಿಯೂ ಹಾಲ್‌, 2 ಬೆಡ್‌ರೂಮ್‌, 2 ಟಾಯ್ಲೆಟ್‌, ಬಾತ್‌ ರೂಮ್‌ (1 ಬೆಡ್‌ರೂಮ್‌ಗೆ ಸೇರಿಕೊಂಡು), ಅಡುಗೆ ಕೋಣೆ ಹಾಗೂ ವರ್ಕ್‌ ಏರಿಯಾ ಇದೆ. 2016ರಲ್ಲಿ ಆರಂಭಗೊಂಡ ನಿರ್ಮಾಣ ಕಾಮಗಾರಿ ಇದೀಗ ಪೂರ್ಣಗೊಂಡಿದೆ.

ಹತ್ತಿರದಲ್ಲೇ ಇರುವುದು ಅನುಕೂಲ
ಹೊಸ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಸಿಬಂದಿ ಉಪಯೋಗಕ್ಕೆ ಲಭಿಸಲಿದೆ. ಠಾಣೆಯ ಹತ್ತಿರದಲ್ಲಿಯೇ ವಸತಿಗೃಹಗಳಿದ್ದರೆ ಸಿಬಂದಿಗೂ ಅನುಕೂಲ. ಹೊಸ ಮನೆಗಳು ವಾಸಕ್ಕೆ ಸಿಕ್ಕಿದಾಗ ಸಿಬಂದಿ ವಸತಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ.
– ಪ್ರಕಾಶ್‌ ದೇವಾಡಿಗ, ಕಡಬ ಎಸ್‌.ಐ.

— ನಾಗರಾಜ್‌ ಎನ್‌.ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next