ಬೆಂಗಳೂರು: ಸಿಎಂ ಕುಮಾರಸ್ವಾಮಿ ಇಷ್ಟು ದಿನ ಪಂಚತಾರಾ ಹೋಟೆಲ್‌ನಲ್ಲಿದ್ದುಕೊಂಡು ಕಾಲಹರಣ ಮಾಡಿದರು. ಇದೀಗ ಗ್ರಾಮ ವಾಸ್ತವ್ಯ ನೆನಪಾಗಿದ್ದು, ಹೊಸ ನಾಟಕ ಶುರು ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಸಮಾಧಾನದ ಬೆಂಕಿ ಭುಗಿಲೆದ್ದ ಪರಿಣಾಮ ಸರ್ಕಾರಿ ಬಂಗಲೆಗೆ ಹೋಗುತ್ತಿದ್ದಾರೆ. ಅವರ ಶಾಲಾ ವಾಸ್ತವ್ಯಕ್ಕೆ ನಮ್ಮ ಅಭ್ಯಂತರವಿಲ್ಲ. ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿ ತಿಳಿಯದೇ ಶಾಲೆಗಳಲ್ಲಿ ವಾಸ್ತವ್ಯ ಮಾಡಲು ಹೋದರೆ ಜನ ಮೆಚ್ಚುವುದಿಲ್ಲ. ಇನ್ನಾದರೂ ಅವರ ನಿರ್ಧಾರದ ಬಗ್ಗೆ ಮರು ಪರಿಶೀಲನೆ ಮಾಡಲಿ ಎಂದು ಸಲಹೆ ನೀಡಿದರು.
ಜೂನ್ 5ರ ಬಳಿಕ ನಾನು ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ನಡೆಸಲಿದ್ದೇನೆ. ಸರ್ಕಾರವನ್ನು ಬೀಳಿಸುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಸರ್ಕಾರ ಪತನವಾದಾಗ ನೋಡೋಣ. ಪಕ್ಷದ ಯಾವ ನಾಯಕರು ಈ ಬಗ್ಗೆ ಹೇಳಿಕೆ ನೀಡದಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಲವೆಡೆ ಮುನ್ನಡೆ, ಮತ್ತೆ ಕೆಲವೆಡೆ ಹಿನ್ನಡೆಯ ಫಲಿತಾಂಶ ಬಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳು ಅಭ್ಯರ್ಥಿಗಳ ಮೇಲೆ ನಿರ್ಧರಿತವಾಗುತ್ತವೆ. ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೂ ಏನಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳುತ್ತೇನೆ. ಶಿಕಾರಿಪುರದಲ್ಲಿ ನಮಗೆ ಹಿನ್ನಡೆಯಾಗಿದೆ. ಸೋಲಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಸೊರಬ, ಸಾಗರದಲ್ಲಿ ನಿರೀಕ್ಷೆ ಮಾಡದೆ ನಮಗೆ ಗೆಲುವು ಸಿಕ್ಕಿದೆ. ಶಿರಾಳಕೊಪ್ಪದಲ್ಲಿ ಬೇರೆ ಬೇರೆ ಕಾರಣಗಳಿಗೆ ಹಿನ್ನಡೆಯಾಗಿದೆ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಮುಖ್ಯಮಂತ್ರಿಗಳಿಗೆ ಹೇಗೆ ಜ್ಞಾನೋದಯವಾಯಿತೋ ಗೊತ್ತಿಲ್ಲ. ಸದ್ಯ ತಾಜ್ ವೆಸ್ಟ್‌ಎಂಡ್ ಹೋಟೆಲ್‌ಗೆ ತೆರಿಗೆದಾರರ ಹಣ ಕಟ್ಟುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. ದಯಮಾಡಿ ಅವರು ಗ್ರಾಮ ವಾಸ್ತವ್ಯ ಮುಂದೂಡಿ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳನ್ನು ಜಿಲ್ಲೆಗಳಿಗೆ ಕಳುಹಿಸಿ ವಾಸ್ತವಾಂಶ ಅರಿಯಲಿ.
-ವಿ.ಸೋಮಣ್ಣ, ಮಾಜಿ ಸಚಿವ
ಪಾಪ ಮಾಡಿದ ಮೇಲೆ ಪಶ್ಚಾತ್ತಾಪ ಪಡಲೇಬೇಕು. ರಾಜನಂತೆ ಇದ್ದ ಕುಮಾರಸ್ವಾಮಿಯವರು ರಾಜಧರ್ಮ ಪಾಲಿಸಲಿಲ್ಲ. ಅದಕ್ಕಾಗಿ ಮಂಡ್ಯ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋತರು. ಗ್ರಾಮ ವಾಸ್ತವ್ಯ ಬಿಟ್ಟು ಕೆರೆಗಳ ಹೂಳೆತ್ತಿಸುವ ಕೆಲಸ ಮಾಡಲಿ. ಗ್ರಾಮ ವಾಸ್ತವ್ಯ ಕೇವಲ ನಾಟಕ ಕಂಪೆನಿ ಇದ್ದಂತೆ.
-ಸುರೇಶ್‌ಗೌಡ, ಬಿಜೆಪಿ ಮಾಜಿ ಶಾಸಕ