ಮಾಸ್ಕೋ: ರಷ್ಯಾ -ಉಕ್ರೇನ್ ನಡುವಣ ಯುದ್ಧಕ್ಕೆ ಸಾವಿರ ದಿನಗಳು ತುಂಬಿದ ಬೆನ್ನಲ್ಲೇ ದೇಶದ ಅಣ್ವಸ್ತ್ರ ನಿಯಮವನ್ನು ಬದಲಾವಣೆ ಮಾಡಲು ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅನುಮತಿ ನೀಡಿದ್ದಾರೆ. ಹೀಗಾಗಿ ಜಗತ್ತಿಗೆ ಮತ್ತೂಂದು ಅಣ್ವಸ್ತ್ರ ದಾಳಿಯ ಭೀತಿ ಎದುರಾಗಿದೆ.
ಹೊಸ ನಿಯಮ ಪ್ರಕಾರ, ಅಣ್ವಸ್ತ್ರ ರಹಿತ ರಾಷ್ಟ್ರವು ಅಣ್ವಸ್ತ್ರ ಸಹಿತ ರಾಷ್ಟ್ರದ ಬೆಂಬಲದಿಂದ ರಷ್ಯಾ ಮೇಲೆ ದಾಳಿ ಮಾಡಿದರೆ “ಜಂಟಿ ದಾಳಿ’ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ರಷ್ಯಾದ ಮೇಲೆ ಇನ್ನು ಮುಂದೆ ಉಕ್ರೇನ್ ಕೈಗೊಳ್ಳುವ ಯಾವುದೇ ದಾಳಿಗೆ ರಷ್ಯಾದ ಪ್ರತಿಕ್ರಿಯೆ ವಿಭಿನ್ನವಾಗಿರಲಿದೆ ಎನ್ನಲಾಗಿದೆ.
ಅಮೆರಿಕವು ಉಕ್ರೇನ್‌ಗೆ ತನ್ನ ಶಸ್ತ್ರಾಸ್ತ್ರಗಳನ್ನು ಬಳಸಲು ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಹಲವು ದೇಶಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿಗಳನ್ನು ಒದಗಿಸಿವೆ. ಒಂದು ವೇಳೆ ಇತರ ದೇಶಗಳು ನೀಡಿರುವ ಬಹುದೂರ ಸಾಗಬಲ್ಲ ಕ್ಷಿಪಣಿ, ಡ್ರೋನ್, ವಿಮಾನಗಳನ್ನು ಬಳಸಿ ಉಕ್ರೇನ್ ದಾಳಿ ಮಾಡಿದರೆ ಅದನ್ನು ಅಣ್ವಸ್ತ್ರ ದಾಳಿ ಎಂದು ರಷ್ಯಾ ಪರಿಗಣಿಸಲಿದೆ. ಹೀಗಾಗಿ ತನ್ನ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲು ರಷ್ಯಾ ಪ್ರತಿ ದಾಳಿ ನಡೆಸಲಿದೆ.
ತನ್ನ ಕ್ಷಿಪಣಿಗಳನ್ನು ಬಳಕೆ ಮಾಡಿಕೊಳ್ಳಲು ಉಕ್ರೇನ್‌ಗೆ ಅಮೆರಿಕ ನೀಡಿರುವ ಅನುಮತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್, ಜಗತ್ತನ್ನು ಅಣ್ವಸ್ತ್ರ ಕಾಡಬಾರದು ಎಂದೇ ರಷ್ಯಾ ಬಯಸುತ್ತಿದೆ. ಆದರೆ ಹೀಗೆ ನಡೆದುಕೊಳ್ಳಲು ಅಮೆರಿಕ ಬಿಡುತ್ತಿಲ್ಲ. ಉಕ್ರೇನ್‌ಗೆ ಬೆಂಬಲ ನೀಡುವ ಮೂಲಕ ಜಗತ್ತನ್ನು ತೊಂದರೆಗೆ ದೂಡುತ್ತಿದೆ ಎಂದು ಹೇಳಿದ್ದಾರೆ.
ಅಮೆರಿಕ ಅನುಮತಿ ಬೆನ್ನಲ್ಲೇ ರಷ್ಯಾ ಮೇಲೆ ಉಕ್ರೇನ್ ದಾಳಿ
ಮಾಸ್ಕೋ: ಅಮೆರಿಕ ನೀಡಿರುವ ಕ್ಷಿಪಣಿ ಬಳಕೆಯ ಮೇಲಿದ್ದ ನಿರ್ಬಂಧ ತೆಗೆದು ಹಾಕಿದ ಬೆನ್ನಲ್ಲೇ ರಷ್ಯಾದ ಮಿಲಿಟರಿ ನೆಲೆ ಮೇಲೆ ಮಂಗಳವಾರ ಉಕ್ರೇನ್ ದಾಳಿ ಮಾಡಿದೆ. ರಷ್ಯಾ ಕೂಡ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, 12 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕ ನೀಡಿರುವ ದೂರ ಸಾಗಬಲ್ಲ ಕ್ಷಿಪಣಿಯನ್ನು ಬ್ರ್ಯಾನ್‌ಸ್ಯಾಕ್ ಗಡಿಯಿಂದ ಉಕ್ರೇನ್ ಉಡಾಯಿಸಿದ್ದು, ಇದು ರಷ್ಯಾದ ಸೇನಾನೆಲೆಯನ್ನು ಧ್ವಂಸಗೊಳಿಸಿದೆ.