ಹೊಸದಿಲ್ಲಿ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಇತಿಹಾಸದಲ್ಲಿ ರವಿವಾರ ಹೊಸ ದಾಖಲೆ ನಿರ್ಮಾಣವಾಗಲಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಿರ್ಮಾಣಗೊಂಡಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಯವರು 1.47 ನಿಮಿಷಗಳ ವೀಡಿಯೋವನ್ನು ಟ್ವೀಟ್ ಮಾಡಿ, “ಹೊಸ ಸಂಸತ್ ಭವನ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ತರುವ ವಿಚಾರವಾಗಿದೆ’ ಎಂದು ಹೇಳಿದ್ದಾರೆ. ವೀಡಿಯೋದಲ್ಲಿ ಹೊಸ ಕಟ್ಟಡದ ಸ್ಥೂಲ ಚಿತ್ರಣ ಕಟ್ಟಿಕೊಡಲಾಗಿದೆ. ಅದನ್ನು ರಿಟ್ವೀಟ್ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಟ್ವೀಟ್ ಮಾಡು ತ್ತಿರುವಂತೆಯೇ “ಮೈ ಪಾರ್ಲಿಮೆಂಟ್ ಮೈ ಪ್ರೈಡ್” ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ರೆಂಡಿಂಗ್ ಆಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖರು ಅದನ್ನು ರಿಟ್ವೀಟ್ ಮಾಡಿದ್ದಾರೆ.
ಏನೇನು ಕಾರ್ಯಕ್ರಮಗಳು?
ಸದ್ಯ ಪ್ರಕಟವಾಗಿರುವ ಕಾರ್ಯಕ್ರಮ ಸೂಚಿಯ ಪ್ರಕಾರ ರವಿವಾರ ಬೆಳಗ್ಗೆ 7ರಿಂದ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 9ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಉಪಸಭಾಪತಿ ಹರಿವಂಶ ರಾಯ್, ಕೇಂದ್ರ ಸರಕಾರದ ಕೆಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
11.30ರ ಸುಮಾರಿಗೆ ಆಹ್ವಾನಿತರೆಲ್ಲ ಹೊಸ ಸಂಸತ್ ಭವನದಲ್ಲಿ ಇರುವ ಲೋಕಸಭೆಯಲ್ಲಿ ಆಸೀನರಾಗಲಿದ್ದಾರೆ. ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಧಾನಿ ಮೋದಿ ಹೊಸ ಸಂಸತ್ ಭವನವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಜತೆಗೆ 1947ರಲ್ಲಿ ಅಧಿಕಾರ ಹಸ್ತಾಂತರದ ದ್ಯೋತಕವಾಗಿ ನೀಡಲಾಗಿದ್ದ ರಾಜ ದಂಡವನ್ನು ಲೋಕಸಭೆಯಲ್ಲಿ ಸ್ಪೀಕರ್ ಆಸನದ ಪಕ್ಕದಲ್ಲಿಯೇ ಪ್ರಧಾನಿ ಸ್ಥಾಪಿಸಲಿದ್ದಾರೆ.