ಲಕ್ನೋ: ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಉತ್ತರ ಪ್ರದೇಶ ಸರ್ಕಾರ, ಸಚಿವರು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಕುಟುಂಬ ಸದಸ್ಯರು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಬೇಕೆಂಬ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ.
ಸದ್ಯದಲ್ಲಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರಣೆ ಪ್ರಕಟಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಅಷ್ಟೇ ಅಲ್ಲ, ಸಚಿವಾಲಯಗಳ ಕಾರ್ಯವೈಖರಿಯಲ್ಲಿ ಅವರ ಕುಟುಂಬಸ್ಥರು ಯಾವುದೇ ರೀತಿಯಲ್ಲೂ ಮೂಗು ತೂರಿಸುವಂತಿಲ್ಲ. ಜೊತೆಗೆ, ಉತ್ತರ ಪ್ರದೇಶದ ಎಲ್ಲಾ 18 ವಲಯಗಳಲ್ಲಿ ಸೇವೆ ಸಲ್ಲಿಸುವ ಸಚಿವರು, ತಮ್ಮ ವಲಯಗಳಿಗೆ ಹೋಗಿ ಜನರನ್ನು ಭೇಟಿ ಮಾಡಿ ಅಲ್ಲಿ ನಿರಂತರವಾಗಿ ಜನಸೇವೆ ಸಲ್ಲಿಸುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲಾ ಸಚಿವರು ಆ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು ಎಂದು ಖುದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರೇ ಸೂಚಿಸಿದ್ದಾರೆ.
ಇದನ್ನೂ ಓದಿ:CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ
ಎಸ್‌ಪಿ ಟೀಕೆ:
ಸಚಿವರ, ಅಧಿಕಾರಿಗಳ ಕುಟುಂಬಸ್ಥರು ಆಸ್ತಿ ವಿವರ ನೀಡುವ ನಿಯಮ ಜಾರಿಗೊಳಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರತಿಪಕ್ಷ ಸಮಾಜವಾದಿ ಪಾರ್ಟಿ ಟೀಕಿಸಿದೆ. “ಈ ಹಿಂದೆ, ಕೇಂದ್ರ ಸರ್ಕಾರವೂ ಸಚಿವರು ತಮ್ಮ ಆಸ್ತಿ ವಿವರವನ್ನು ಪ್ರತಿವರ್ಷ ಕಡ್ಡಾಯವಾಗಿ ಸಲ್ಲಿಸಬೇಕೆಂದು ಸೂಚಿಸಿತ್ತು. ಇದುವರೆಗೆ ಯಾವ ಸಚಿವರೂ ವಿವರ ಸಲ್ಲಿಸಿಲ್ಲ. ಹಾಗಾಗಿ, ಇಂಥ ಆದೇಶಗಳೆಲ್ಲಾ ಕೇವಲ ಬೂಟಾಟಿಕೆ, ಡ್ರಾಮಾ ಆಗಿರುತ್ತವೆ’ ಎಂದು ಹೇಳಿದೆ.