ಡೊಂಬಿವಲಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ತಣ್ತೀವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗಬಹುದು. ಶಿಕ್ಷಣದಿಂದ ವಂಚಿತರಾದ ಕಡು ಬಡತನದಲ್ಲಿ ಇರುವವರನ್ನು ಹುಡುಕಿ ಜಾತಿ-ಮತ ಭೇದವಿಲ್ಲದೆ ಸಂಘದ ವತಿಯಿಂದ ಅವರಿಗೆ ಸಹಕಾರ ನೀಡಬೇಕು. ನಮ್ಮ ಸಂಘದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನಾವು ತೆಗೆದುಕೊಂಡ ನಿರ್ಧಾರಗಳನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಗುರುನಾರಾಯಣ ರಾತ್ರಿಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಟಿ. ಆರ್. ಶೆಟ್ಟಿ ನುಡಿದರು.
ಅವರು ಇತ್ತೀಚೆಗೆ ಗುರುನಾರಾಯಣ ರಾತ್ರಿಶಾಲೆಯ ಹಳೆವಿದ್ಯಾರ್ಥಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಘ ಫೋರ್ಟ್ ಪರಿಸರದಲ್ಲಿ ಶಾಲೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಅದರ ಅಭಿವೃದ್ಧಿಗೆ ದುಡಿದಿರುವುದು ಸ್ಮರಣೀ ಯವಾಗಿದೆ. ಆನಂತರ ಕೂಡಾ ಬಿಲ್ಲವರ ಅಸೋಸಿಯೇಶನ್‌ನ ಸಹಕಾರದಿಂದ ನಮ್ಮ ಕೈಲಾದ ಸೇವೆಯನ್ನು ಆ ಶಾಲೆಗೆ ನೀಡುತ್ತಾ ಬಂದಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಒಂದೇ ತಾಯಿಯ ಮಕ್ಕಳಂತೆ ಸಂಘದ ಏಳ್ಗೆಗಾಗಿ ಶ್ರಮಿಸೋಣ ಎಂದು ನುಡಿದು ಎಲ್ಲರಿಗೂ ಶುಭಹಾರೈಸಿದರು.
ಗುರುನಾರಾಯಣ ರಾತ್ರಿಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರವಿ ಎ. ಬಂಗೇರ ಅವರು ಮಾತನಾಡಿ, ಬಹು ಕಷ್ಟದಿಂದ ಈ ಸಂಘವನ್ನು ಸ್ಥಾಪಿಸಿ ಅದನ್ನು ಉತ್ತಮ ರೀತಿಯಿಂದ ನಡೆಸಿಕೊಂಡು ಈ ಮಟ್ಟಕ್ಕೆ ಬೆಳೆಸಲಾಗಿದೆ. ನಮ್ಮ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ತೆಗೆದು ಕೊಂಡ ಮಹತ್ತರ ನಿರ್ಣಯಗಳನ್ನು ನಾವು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದ್ದೇವೆ. ಎಲ್ಲಾ ಹಳೆವಿದ್ಯಾರ್ಥಿಗಳ ಸಹಕಾರಕ್ಕೆ ಕೃತಜ್ಞತೆಗಳು. ಭವಿಷ್ಯದಲ್ಲೂ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸಂಘದ ನೂತನ ಕಚೇರಿಯಲ್ಲಿ ಗಣ ಹೋಮ ಇನ್ನಿತರ ಪೂಜಾ ಕೈಂಕರ್ಯಗಳು ಜರಗಿತು. ಪೂಜೆಯ ವ್ರತವನ್ನು ಸಂಘದ ಅಧ್ಯಕ್ಷ ರವಿ ಎ. ಬಂಗೇರ ಮತ್ತು ಪುಷ್ಪಾ ಆರ್. ಬಂಗೇರ ದಂಪತಿ ನೆರವೇರಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಟಿ. ಆರ್. ಶೆಟ್ಟಿ ಅವರು ಬ್ರಹ್ಮಶ್ರೀ ನಾರಾಯಣ ಗುರುದೇವರಿಗೆ ಪ್ರಾರ್ಥನೆ ಸಲ್ಲಿಸಿ ರಿಬ್ಬನ್ ಕತ್ತರಿಸಿ ನೂತನ ಕಚೇರಿಯನ್ನು ಉದ್ಘಾಟಿಸಿದರು.
ವಾರ್ಷಿಕ ಗುರುಪೂಜೆಯನ್ನು ಪೂರ್ವಾಹ್ನ 10 ಕ್ಕೆ ಡೊಂಬಿವಲಿ ಪೂರ್ವದ ಪೂರ್ಣಿಮಾ ಸಭಾಗೃಹದಲ್ಲಿ ಪುರೋಹಿತ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯದಲ್ಲಿ ನಡೆಸಲಾಯಿತು. ಪೂಜಾ ವ್ರತವನ್ನು ಸಂಘದ ಉಪಾಧ್ಯಕ್ಷ ಶಿವರಾಮ ಎನ್. ಶೆಟ್ಟಿ ಮತ್ತು ಸರೋಜಾ ಎಸ್. ಶೆಟ್ಟಿ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ತುಳು ವೆಲ್ಫೆàರ್ ಅಸೋಸಿಯೇಶನ್ ಡೊಂಬಿವಲಿ ಇದರ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಉತ್ಸವ ಮಂಡಳಿ ಹಾಗೂ ಮುಂಬ್ರಾ ಮಿತ್ರ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಮಧ್ಯಾಹ್ನ 1.30ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿತೈಷಿಗಳು, ಮಾಜಿ ಶಿಕ್ಷಕರಾದ ಜಯಕರ ಪೂಜಾರಿ, ಎಂ. ಆರ್. ಹೊಸಕೋಟೆ, ಮಾಜಿ ಅಧ್ಯಕ್ಷ ಆರ್. ಎಸ್. ಕೋಟ್ಯಾನ್, ಕೃಷ್ಣ ಬಿ. ಪೂಜಾರಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ವಸಂತ ಎನ್. ಸುವರ್ಣ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.