“ಶಾನೆ ಟಾಪ್ ಆಗವಳೆ..’ – ಈ ಹಾಡೊಂದು ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಇಂಥದ್ದೊಂದು ಹಾಡು ಕಟ್ಟಿಕೊಡುವ ಮೂಲಕ ಸುದ್ದಿಯಾಗಿರೋದು ಸಂಗೀತ ನಿರ್ದೇಶಕ ಧರ್ಮವಿಶ್. ಬಹಳಷ್ಟು ಮಂದಿಗೆ ಧರ್ಮವಿಶ್ ಅವರ ಪರಿಚಯ ಇರಲಿಕ್ಕಿಲ್ಲ. ಆದರೆ, ಸಿನಿಮಾ ಮಂದಿಗಂತೂ ಧರ್ಮವಿಶ್ ಅವರು ಗೊತ್ತು. ಧರ್ಮವಿಶ್ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಸಂಗೀತ ನಿರ್ದೇಶನಕ್ಕೂ ಮುನ್ನ ಹಲವು ಸಂಗೀತ ನಿರ್ದೇಶಕರ ಬಳಿ ಪ್ರೋಗ್ರಾಮಿಂಗ್ ಮಾಡಿದ ಅನುಭವ ಇವರಿಗಿದೆ. ಕನ್ನಡ ಮಾತ್ರವಲ್ಲ ಬಾಲಿವುಡ್‌ನಲ್ಲೂ ಧರ್ಮವಿಶ್ ಅವರು ಕೆಲಸ ಮಾಡಿದ್ದಾರೆ.
“ರಾಗ್‌ದೇಶ್’,”ಗ್ಯಾಂಗ್‌ಸ್ಟರ್ 3′,”ಮಿಡ್‌ನೈಟ್ ಡೆಲ್ಲಿ’ ಮತ್ತು “22 ಯಾರ್ಡ್ಸ್’ ಸಿನಿಮಾ ಸೇರಿದಂತೆ ಇನ್ನಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತದ ಸ್ಪರ್ಶವೂ ಇದೆ. ಕನ್ನಡದಲ್ಲಿ ಶ್ರೀಮುರಳಿ ಅಭಿನಯದ “ರಥಾವರ’ ಚಿತ್ರಕ್ಕೆ ಸಂಗೀತ ಕೊಡುವ ಮೂಲಕ ಗಮನಸೆಳೆದ ಧರ್ಮವಿಶ್, ಈಗ “ಸಿಂಗ’ ಚಿತ್ರಕ್ಕೂ ಸಂಗೀತದ ಸ್ಪರ್ಶ ನೀಡಿದ್ದಾರೆ. ಆ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಚಿತ್ರದ “ಶಾನೆ ಟಾಪ್ ಆಗವಳೆ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುವ ಮೂಲಕ ಮೆಚ್ಚುಗೆ ಪಡೆಯುತ್ತಿದೆ.
ಚೇತನ್‌ಕುಮಾರ್ ಬರೆದ ಹಾಡಿಗೆ ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ. ಅಂದಹಾಗೆ, ಈ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಸದ್ಯಕ್ಕಂತೂ ಈ ಸಾಂಗ್ ಟಿಕ್ ಟಾಕ್ ಮ್ಯೂಸಿಕ್ ಆ್ಯಪ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಹಾಡನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮದೇ ಸ್ಟೈಲ್‌ನಲ್ಲಿ ಫೋಸು ಕೊಡುತ್ತಿದ್ದಾರೆ. ಈ ಹಾಡು ದಾಖಲೆ ಬರೆದಿರುವುದಲ್ಲದೆ, ಯುಟ್ಯೂಬ್‌ನಲ್ಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.
“ಸಿಂಗ’ ಚಿತ್ರದ ಮೊದಲ ಹಾಡು ಯಶಸ್ಸು ಪಡೆಯುತ್ತಿದ್ದಂತೆಯೇ, ಧರ್ಮವಿಶ್, ಅದೇ ಖುಷಿಯಲ್ಲಿ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಗೀತರಚನೆಕಾರ ಕವಿರಾಜ್ ಅವರು ಬರೆದಿರುವ “ವಾಟ್ ಎ ಬ್ಯೂಟಿಫುಲ್ ಹುಡುಗಿ…’ ಎಂಬ ಹಾಡಿಗೆ ನವೀನ್ ಸಜ್ಜು ಹಾಗೂ ನಟಿ ಮೇಘನಾ ರಾಜ್ ಧ್ವನಿಯಾಗಿದ್ದಾರೆ. ಸದ್ಯಕ್ಕೆ ಈ ಹಾಡಿಗೂ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಸಿನಿಮಾ ಬಿಡುಗಡೆ ಎದುರು ನೋಡುತ್ತಿದ್ದಾರೆ ಧರ್ಮವಿಶ್.
ಧರ್ಮವಿಶ್ ಅವರು “ರಥಾವರ’ ಚಿತ್ರದ ಬಳಿಕ ಪುನಃ ಬಾಲಿವುಡ್‌ನತ್ತ ಮುಖ ಮಾಡಿದ್ದರು. ಅಲ್ಲಿ “ಮಿಲನ್ ಟಾಕೀಸ್’, “ಮೆ ಫಿರ್ ಆವೂಂಗಾ’ ಚಿತ್ರ ಸೇರಿದಂತೆ ಕೆಲ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. “ತಾರಕಾಸುರ ಚಿತ್ರಕ್ಕೂ ಇವರದೇ ಸಂಗೀತವಿತ್ತು. ಈಗ “ಸಿಂಗ’ ಮೂಲಕ ಸದ್ದು ಮಾಡಿ, ನೀನಾಸಂ ಸತೀಶ್ ಅಭಿನಯದ “ಬ್ರಹ್ಮಚಾರಿ ಚಿತ್ರಕ್ಕೂ ಇವರದೇ ಸಂಗೀತವಿದೆ ಎಂಬುದು ವಿಶೇಷ.