ಹೊಸ ವರ್ಷ ಶುರುವಾಗಿದೆ. ಹಾಗೆಯೇ ಹೊಸಬರ ಹೊಸತನದ ಚಿತ್ರಗಳು ಸಹ ಮೆಲ್ಲನೆ ಸೆಟ್ಟೇರುತ್ತಿವೆ. ಕಳೆದ ವರ್ಷ ಒಂದೊಂದೇ ಚಿತ್ರ ಮಾಡಿದ್ದ ಯುವ ನಟ, ನಟಿಯರಿಗೆ ಈ ವರ್ಷ ಹೊಸ ಭರವಸೆ. ಆ ಖುಷಿಯಲ್ಲೇ ತಮ್ಮ ಸಿನಿಪಯಣ ಶುರು ಮಾಡಿದ್ದಾರೆ. ಈ ಹಿಂದೆ “ಮಳ್ಳಿ’ ಮತ್ತು ಮಕ್ಕಳ ಚಿತ್ರ “ಸನ್ಮಾರ್ಗ’ ಚಿತ್ರ ನಿರ್ದೇಶಿಸಿದ್ದ ವಿಷ್ಣುಪ್ರಿಯ, ಈಗ ಹೊಸ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲು ರೆಡಿಯಾಗಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ತುಂಬಿವೆ.
ಸುನೀಲ್ ದರ್ಶನ್ ಮೊದಲ ಸಲ ನಾಯಕರಾದರೆ, ಶರಣ್ಯಗೌಡ ನಾಯಕಿ. ಈಗಾಗಲೇ ಶರಣ್ಯಗೌಡ ಬಿಡುಗಡೆಗೆ ರೆಡಿಯಾಗಿರುವ “ಗಹನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರಿಗೆ ಇದು ಎರಡನೇ ಚಿತ್ರ. ವಿಷ್ಣುಪ್ರಿಯ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ.
ಇದೊಂದು ಸೂಕ್ಷ್ಮಕಥೆವುಳ್ಳ ಚಿತ್ರ ಎಂಬುದು ನಿರ್ದೇಶಕರ ಮಾತು. “ತುಂಬಾ ಮುಗ್ಧವಾಗಿರುವ, ಸೂಕ್ಷ್ಮತೆಯಿಂದಿರುವ ಹುಡುಗಿಯೊಬ್ಬಳ ಮೇಲೆ ಪೋಲಿ ಹುಡುಗನೊಬ್ಬನ ಕಣ್ಣು ಬಿದ್ದು, ಅವನು ಆಕೆಯ ಲೈಫ್ಗೆ ಎಂಟ್ರಿಯಾಗಿ, ಅವಳ ಬದುಕಿನ ಒಂದಷ್ಟು ಏರುಪೇರಿಗೆ ಕಾರಣನಾಗುತ್ತಾನೆ. ಆ ಬಳಿಕ ಆಕೆಯ ಲೈಫ್ ಎತ್ತ ಸಾಗುತ್ತೆ, ಅವಳ ಮನಸ್ಥಿತಿಯನ್ನು ಕೆಡಿಸಿದ ಆ ಹುಡುಗ ಅವಳ ಲೈಫ್ ಸರಿಪಡಿಸುತ್ತಾನಾ ಇಲ್ಲವಾ ಅನ್ನೋದು ಕಥೆ’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು.
ಈಗಿನ ಯೂಥ್‌ಗೆ ಸಂಬಂಧಿಸಿದ ಚಿತ್ರಣ ಇಲ್ಲಿದೆ. ಪ್ರೀತಿ, ಸೆಂಟಿಮೆಂಟ್, ಗೆಳೆತನ, ಭಯ ಇತ್ಯಾದಿ ಅಂಶಗಳು ಚಿತ್ರದ ಹೈಲೆಟ್. ಒಂದು ಮುಗ್ಧ ಮನಸ್ಸಿನ ನಡುವಿನ ಅಪರೂಪದ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಚಿತ್ರತಂಡ ಮಾಡುತ್ತಿದೆ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಶುರುವಾಗಿದೆ. ಚಿಕ್ಕಮಗಳೂರು ಸಮೀಪ ಚಿತ್ರೀಕರಣ ಸಾಗಿದೆ. ಚಿತ್ರದಲ್ಲಿ ಹೊಸ ಪ್ರತಿಭೆಗಳೇ ಹೆಚ್ಚಾಗಿದ್ದು, ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ವಾಸನ್ ಛಾಯಾಗ್ರಹಣವಿದ್ದು, ಸಂಗೀತ ನಿರ್ದೇಶಕರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಕೆಂಪೇಗೌಡ ಅವರ ನಿರ್ಮಾಣ ಈ ಚಿತ್ರಕ್ಕಿದೆ.