Advertisement

ಪುಷ್ಕರ್‌ ಬ್ಯಾನರ್‌ನಲ್ಲಿ ಶರಣ್‌ ಚಿತ್ರ

03:54 PM Dec 27, 2018 | Team Udayavani |

ನಟ ಶರಣ್‌ ಎಂದರೆ ಮೊದಲು ನೆನಪಾಗೋದು ವಿಭಿನ್ನ ಮ್ಯಾನರಿಸಂನ ಕಾಮಿಡಿ ಚಿತ್ರಗಳು. ಇತ್ತೀಚೆಗಷ್ಟೆ “ವಿಕ್ಟರಿ -2′ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದು ಕಮಾಲ್‌ ಮಾಡಿದ್ದ ಶರಣ್‌, ಈಗ ಸದ್ದಿಲ್ಲದೆ ಮತ್ತೂಂದು ಅವತಾರದಲ್ಲಿ ಪ್ರೇಕ್ಷಕರನ್ನು ನಗಿಸಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ನಟ ಶರಣ್‌ ಅಭಿನಯದ ಹೊಸ ಕಾಮಿಡಿ ಚಿತ್ರಕ್ಕೆ ತೆರೆಮರೆಯ ಕೆಲಸಗಳು ಶುರುವಾಗಿದೆ.

Advertisement

ಅಂದಹಾಗೆ, ಈ ಚಿತ್ರವನ್ನು “ಪುಷ್ಕರ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಿಸುತ್ತಿದ್ದು, ಸಿಂಪಲ್‌ ಸುನಿ ನಿರ್ದೇಶನದ ಸಾರಥ್ಯ ವಹಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಮತ್ತಿತರ ಕೆಲಸಗಳು ಪೂರ್ಣಗೊಂಡಿದ್ದು, ಮುಂಬರುವ ಜ. 16ರಂದು ಚಿತ್ರದ
ಮುಹೂರ್ತ ನಡೆಯಲಿದ್ದು, ಜ. 22ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ತಮ್ಮ ಹೊಸಚಿತ್ರದ ಬಗ್ಗೆ ಮಾತನಾಡುವ ನಟ ಶರಣ್‌, “ಇಲ್ಲಿಯವರೆಗೆ ನೀವು ನೋಡಿರದ ಹೊಸ ಶರಣ್‌ನನ್ನು ಈ ಚಿತ್ರದಲ್ಲಿ ನೋಡುತ್ತೀರಿ. ನನ್ನ ಹಿಂದಿನ ಚಿತ್ರಗಳಂತೆ ಇದು ಕೂಡ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಪುಷ್ಕರ್‌ ಸ್ಟೈಲ್‌, ಶರಣ್‌ ಮ್ಯಾನರಿಸಂ, ಸುನಿ
ಫ್ಲೇವರ್‌ ಕಾಣಬಹುದು. ಚಿತ್ರದಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅದೇನು ಅಂತ ಈಗಲೇ ಹೇಳಿದ್ರೆ ಅದರ ಸ್ವಾರಸ್ಯ ಕಡಿಮೆಯಾಗಬಹುದು. ಹಾಗಾಗಿ ಆ ಗುಟ್ಟು ಮಾತ್ರ ಬಿಟ್ಟು ಕೊಡಲಾರೆ. ಒಟ್ಟಾರೆ ಇದರಲ್ಲಿ ಕಾಮಿಡಿ, ರೊಮ್ಯಾನ್ಸ್‌ ಸೇರಿದಂತೆ ಮನರಂಜಿಸಲು ಬೇಕಾದ
ಅಂಶಗಳಿಗಂತೂ ಕೊರತೆ ಇಲ್ಲ’ ಎನ್ನುತ್ತಾರೆ.

“ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಇದು ಭಿನ್ನವಾದ ಚಿತ್ರ. ನೋಡುಗರಿಗೂ ಈ ಕಾನ್ಸೆಪ್ಟ್ ಇಷ್ಟವಾಗುವುದೆಂಬ ನಂಬಿಕೆ ನನಗಿದೆ. ಇತ್ತೀಚೆಗೆ ಬರುತ್ತಿರುವ ಚಿತ್ರಗಳಿಗೆ ಹೋಲಿಸಿದರೆ, ಸಂಪೂರ್ಣ ಹೊಸಥರದ ಚಿತ್ರ. ಈಗಾಗಲೇ ನಿರ್ಮಾಪಕ ಪುಷ್ಕರ್‌ ಮತ್ತು ನಿರ್ದೇಶಕ ಸುನಿ ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಸಿದ್ಧವಾಗಿದ್ದಾರೆ. ಇಬ್ಬರಿಗೂ ತಮ್ಮ ಚಿತ್ರದ ಬಗ್ಗೆ ಶಿಸ್ತು ಮತ್ತು ಸ್ಪಷ್ಟತೆ ಇದೆ. ಇನ್ನು ನನ್ನ ಪಾತ್ರಕ್ಕೆ ಒಂದಷ್ಟು ಹೋಮ್‌ವರ್ಕ್‌ ಬೇಕಾಗಿರುವುದರಿಂದ ನಾನು ರೆಡಿಯಾಗಬೇಕು’ ಎನ್ನುತ್ತಾರೆ ನಟ ಶರಣ್‌.

ಈ ಬಗ್ಗೆ ಮಾತನಾಡುವ ನಿರ್ಮಾಪಕ ಪುಷ್ಕರ್‌, “ಪಕ್ಕಾ ಮನರಂಜನೆ ನೀಡುವ ನಟ ಅಂದ್ರೆ ಅದು ಶರಣ್‌, ನಿರ್ದೇಶಕ ಅಂದ್ರೆ ಸುನಿ. ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಇವರ ಚಿತ್ರಗಳಲ್ಲಿ ಇರುತ್ತದೆ. ಇವರಿಬ್ಬರ ಕಾಂಬಿನೇಷನ್‌ ನಲ್ಲಿ ಈ ಥರದ ಚಿತ್ರವನ್ನು ಯಾವತ್ತೋ, ಮಾಡಬೇಕಿತ್ತು.
ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿದೆ. ಇದೊಂದು ಹೊಸಥರದ ಸಬ್ಜೆಕ್ಟ್ ಚಿತ್ರ. ನೋಡುಗರಿಗಂತೂ ಮನರಂಜನೆಗೆ ಮೋಸವಿಲ್ಲ’ ಎನ್ನುತ್ತಾರೆ.

Advertisement

ಇನ್ನು ಈ ಹೊಸಚಿತ್ರದ ನಿರ್ದೇಶನ ಮಾಡುತ್ತಿರುವ ಸಿಂಪಲ್‌ ಸುನಿ, “ರಾಮಾಯಣದಲ್ಲಿ ಬರುವ ತ್ರಿಶಂಕು ಸ್ವರ್ಗ ಮತ್ತು ಮಹಾಭಾರತದ ಒಂದು ಎಳೆಯನ್ನು ಇಟ್ಟುಕೊಂಡು, ಅದನ್ನು ಇಂದಿನ ಕಾಲಮಾನಕ್ಕೆ ಅನ್ವಯಿಸಿದರೆ ಹೇಗಿರುತ್ತದೆ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರವನ್ನು ಮಾಡುತ್ತಿದ್ದೇವೆ. ಚಿತ್ರದಲ್ಲಿ ಶರಣ್‌ ಅವರದ್ದೂ ಕೂಡ ಒಂಥರಾ ತ್ರಿಶಂಕು ಸ್ಥಿತಿ. ಅದನ್ನು ತೆರೆಮೇಲೆ ನೋಡಿಯೇ ಎಂಜಾಯ್‌ ಮಾಡಬೇಕು. ಚಿತ್ರದ ನಾಯಕಿಯ ಪಾತ್ರಕ್ಕೆ ಅಪ್ಪಟ ಕನ್ನಡದ ಹುಡುಗಿಯ ಹುಡುಕಾಟದಲ್ಲಿದ್ದೇವೆ. ಇನ್ನು ಚಿತ್ರದ ಇತರೆ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. 

ಶೀಘ್ರದಲ್ಲಿಯೇ ಚಿತ್ರದ ಟೈಟಲ್‌ ಮತ್ತಿತರ ಮಾಹಿತಿಯನ್ನು ನೀಡುತ್ತೇವೆ’ ಎನ್ನುತ್ತಾರೆ. ಚಿತ್ರತಂಡದ ಮೂಲಗಳ ಪ್ರಕಾರ, ಸದ್ಯ ಸುನಿ ನಿರ್ದೇಶನದ “ಬಜಾರ್‌’ ಚಿತ್ರ ಸೆನ್ಸಾರ್‌ ಮುಂದಿದ್ದು, ಮುಂದಿನ ಜ. 11 ರಂದು ಚಿತ್ರವನ್ನು ತೆರೆಗೆ ಬರುವ ಸಾಧ್ಯತೆ ಇದೆ. ಅದಾದ ಬಳಿಕ ಈ ಹೊಸಚಿತ್ರ ಸೆಟ್ಟೇರಲಿದ್ದು, ಜ. 22ರಿಂದ ಸುಮಾರು 60 ದಿನಗಳ ಕಾಲ ಒಂದೇ ಹಂತದಲ್ಲಿ ಬಾಳೆಹೊನ್ನೂರು ಸುತ್ತಮುತ್ತ ಚಿತ್ರದ ಶೂಟಿಂಗ್‌ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ ಎನ್ನಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next