Advertisement

ಹೊಸ ಮೊಬೈಲ್‌ ಟವರ್‌ ನೀತಿ ಜಾರಿ: ಖಾದರ್‌

06:25 AM Jun 04, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಮೊಬೈಲ್ ಟವರ್‌ಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಹೊಸ ಮೊಬೈಲ್‌ ಟವರ್‌ ನೀತಿಯನ್ನು ಜಾರಿಗೆ ತಂದಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಟವರ್‌ ಅಳವಡಿಕೆ ನೀತಿ ಬಗ್ಗೆ ಅಧಿಸೂಚನೆ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆ, ಮೊಬೈಲ್‌ ಟವರ್‌ ಅಳವಡಿಕೆಗೆ ಹಲವು ಷರತ್ತುಗಳನ್ನು ಹೇರಿದೆ. ಅಧಿಸೂಚನೆಯಂತೆ ಮೊಬೈಲ್ ಟವರ್‌ ಅಳವಡಿಕೆಗೆ ಆಯಾ ಪ್ರದೇಶದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಪಾಲಿಕೆಗಳ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದರು.

ಹೊಸ ನೀತಿ ಪ್ರಕಾರ ವಸತಿ ಪ್ರದೇಶಗಳಲ್ಲಿ ಟವರ್‌ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ವಸತಿ ಪ್ರದೇಶದಲ್ಲಿ ಟವರ್‌ ಅಳವಡಿಕೆಯನ್ನು ತಪ್ಪಿಸಲು ಸಾಧ್ಯವಾಗದೆ ಹೋದರೆ, ಸಂಬಂಧಿತ ಮಂಜೂರಾತಿ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ. ವಾಣಿಜ್ಯ ಪ್ರದೇಶ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಟವರ್‌ ಅಳವಡಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.

ಟವರ್‌ ನೀತಿಯಲ್ಲಿ ಏನಿದೆ?: ಟವರ್‌ ಅಳವಡಿಕೆಗೆ ಅನುಮತಿ ಪಡೆಯಲು ಯೋಜನಾ ನಕ್ಷೆ ಹಾಗೂ ದಾಖಲಾತಿಗಳನ್ನು ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಬೇಕು.ದಾಖಲಾತಿಗಳು ಕ್ರಮಬದ್ಧವಾಗಿದ್ದರೆ 30 ದಿನಗಳಲ್ಲಿ ಟವರ್‌ ಅಳವಡಿಕೆಗೆ ಅನುಮತಿ ನೀಡಬೇಕು. ಈಗಾಗಲೇ ಅಳವಡಿಕೆಯಾಗಿರುವ ಟವರ್‌ಗಳು ಮೂರು ತಿಂಗಳಲ್ಲಿ ನೋಂದಣಿ ಮಾಡಬೇಕು. ಇಲ್ಲವಾದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನದಿಯ 6 ಮೀಟರ್‌, ಕೆರೆಯ 5 ಮೀಟರ್‌, ನಾಲೆ ಹಾಗೂ ಕಾಲುವೆಯ 5 ಮೀಟರ್‌ ವ್ಯಾಪ್ತಿಯೊಳಗೆ ಟವರ್‌ ಅಳವಡಿಕೆ ಮಾಡುವಂತಿಲ್ಲ ಎಂದು ಹೇಳಿದರು.

ಶಾಲೆ, ಆಸ್ಪತ್ರೆ, ದೇವಾಲಯಗಳ 50 ಮೀಟರ್‌ ವ್ಯಾಪ್ತಿಯೊಳಗೆ ಟವರ್‌ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ಪುರಾತತ್ವ, ಧಾರ್ಮಿಕ ಕಟ್ಟಡಗಳ 100 ಮೀಟರ್‌ ವ್ಯಾಪ್ತಿಯೊಳಗೆ ಟವರ್‌ ಅಳವಡಿಕೆ ಮಾಡುವಂತಿಲ್ಲ. ಸಾರ್ವಜನಿಕರ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲು ಜಿÇÉಾ, ರಾಜ್ಯ ಮಟ್ಟದ ಸಮಿತಿ ಹಾಗೂ ಕೇಂದ್ರ ಸರ್ಕಾರದ ನಾಮನಿರ್ದೇಶಿತರನ್ನು ನೇಮಿಸಲಾಗುವುದು ಎಂದು ತಿಳಿಸಿದರು.

Advertisement

ಟವರ್‌ ಅಳವಡಿಕೆಗೆ ಶುಲ್ಕ ನಿಗದಿ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷ ರೂ. ಇತರೆ ಪಾಲಿಕೆಗಳಲ್ಲಿ 50 ಸಾವಿರ ರೂ. ನಗರ ಸಭೆಗಳಲ್ಲಿ 35 ಸಾವಿರ ರೂ. ಪುರಸಭೆಗಳಲ್ಲಿ 25 ಸಾವಿರ ರೂ. ಪಟ್ಟಣ ಪಂಚಾಯ್ತಿಗಳಲ್ಲಿ 20 ಸಾವಿರ ರೂ. ಗ್ರಾಮ ಪಂಚಾಯತಿಗಳಲ್ಲಿ 15 ಸಾವಿರ ರೂ. ಪಾವತಿ ಮಾಡಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next