ಕೋಲ್ಕತ್ತಾ: ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್ ಅವರು ಐಪಿಎಲ್ ನಲ್ಲಿ ನೂತನ ಮೈಲಿಗಲ್ಲು ಸಾಧಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಬೌಲರ್ ಗಳ ಸಾಲಿನಲ್ಲಿ ಚಾಹಲ್ ಅಗ್ರಸ್ಥಾನಕ್ಕೇರಿದ್ದಾರೆ.
ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಯುಜಿ ಚಾಹಲ್ ಈ ಎತ್ತರ ಏರಿದ್ದಾರೆ. ಈ ಹಿಂದೆ 183 ವಿಕೆಟ್ ಕಿತ್ತು ಮೊದಲ ಸ್ಥಾನದಲ್ಲಿದ್ದ ಡ್ವೇನ್ ಬ್ರಾವೋ ಅವರನ್ನು ಚಾಹಲ್ ಹಿಂದಿಕ್ಕಿ, ಅಗ್ರ ಸ್ಥಾನಿಯಾದರು.
ಕೆಕೆಆರ್ ನಾಯಕ ನಿತೀಶ್ ರಾಣಾ ಅವರ ವಿಕೆಟ್ ಕಿತ್ತ ಚಾಹಲ್ ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಒಟ್ಟು ನಾಲ್ಕು ವಿಕೆಟ್ ಕಿತ್ತ ಚಾಹಲ್ ತನ್ನ ವಿಕೆಟ್ ಸಂಖ್ಯೆಯನ್ನು 187ಕ್ಕೆ ಏರಿಸಿದರು.
ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಎಂಟು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು 13.1 ಓವರ್ ಗಳಲ್ಲಿ 151 ರನ್ ಮಾಡಿ ಜಯ ಗಳಿಸಿತು.