ಕೆ.ಆರ್.ಪುರ: ಮದುವೆಯಾಗಿ ಮೂರೇ ತಿಂಗಳಿಗೆ ನವ ವಿವಾಹಿತೆಯೊಬ್ಬರು ನೇಣಿಗೆ ಶರಣಾದ ಅನುಮಾನಾಸ್ಪದ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸಂದ್ರದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ.
ಮುಳಬಾಗಲು ತಾಲೂಕಿನ ತೊಂಡಹಳ್ಳಿ ನಿವಾಸಿ ರಂಜಿತಾ (24) ಮೃತರು. ಅಳಿಯ ಅಶೋಕ್ ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ರಂಜಿತಾ ಅವರ ಪೋಷಕರು ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಮುಳಬಾಗಲಿನ ಯಡಹಳ್ಳಿಯ ಅಶೋಕ್ ಎಂಬಾತನ ಜತೆ ರಂಜಿತಾ ವಿವಾಹವಾಗಿತ್ತು. ವಿವಾಹಕ್ಕೆ ಮುನ್ನ ತಾನು ಎಲೆಕ್ಟ್ರಿಲ್ ಕಂಟ್ರಾಕ್ಟರ್ ಎಂದು ಅಶೋಕ್ ಹೇಳಿಕೊಂಡಿದ್ದ. ಆದರೆ ಆತ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಈ ನಡುವೆ ಒಂದೂವರೆ ತಿಂಗಳ ಹಿಂದಷ್ಟೇ ದಂಪತಿ ಕೆ.ಆರ್.ಪುರಕ್ಕೆ ಬಂದು ವಾಸವಾಗಿದ್ದು, ರಂಜಿತಾ ಸೈಬರ್ ಸೆಂಟರ್ ಒಂದರಲ್ಲಿ ಟಿಕೆಟ್ ಬುಕಿಂಗ್ ಕೆಲಸ ಮಾಡುತ್ತಿದ್ದರು. ಅಶೋಕ್ ದುಡಿಯದೆ ಮನೆಯಲ್ಲೇ ಇರುತ್ತಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ಪತಿ ತನಗೆ ನಿತ್ಯ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾನೆ ಎಂದು ರಂಜಿತಾ ಪೋಷಕರ ಬಳಿ ಹೇಳಿಕೊಂಡಿದ್ದರು.
ಪತ್ನಿಗೆ ಬರುತ್ತಿದ್ದ ವೇತನವನ್ನೆಲ್ಲಾ ಕಿತ್ತುಕೊಳ್ಳುತ್ತಿದ್ದ ಅಶೋಕ್, ತವರುಮನೆಯಿಂದ ಹಣ ತರುವಂತೆ ಪ್ರತಿ ದಿನ ಹಿಂಸೆ ನೀಡುತ್ತಿದ್ದ. ಮನೆ ಭೋಗ್ಯಕ್ಕೆ ಪಡೆಯಲು ರಂಜಿತಾ ಪೋಷಕರು ನೀಡಿದ್ದ 1.20 ಲಕ್ಷ ರೂ.ಗಳನ್ನೂ ಆತ ಖರ್ಚು ಮಾಡಿದ್ದ. ಈ ನಡುವೆ ಅಂಗಡಿ ಆರಂಭಿಸಲು ತವರಿನಿಂದ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಟಕಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ದೊರೆತಿದ್ದು, ಅಶೋಕನೇ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿ, ಅನುಮಾನ ಬಾರದಂತೆ ನೇಣು ಹಾಕಿದ್ದಾನೆ ಎಂದು ಮೃತಳ ಪೋಷಕರು ದೂರಿ ನಲ್ಲಿ ಆರೋಪಿಸಿದ್ದಾರೆ. ಮಂಗಳವಾರ ರಾತ್ರಿ ಸಂಬಂಧಿಕರ ಮದುವೆಗೆಂದು ಮುಳಬಾಗಲಿಗೆ ಹೋಗಿದ್ದ ಅಶೋಕ್, ಪತ್ನಿ ಸಾವಿನ ಸುದ್ದಿ ತಿಳಿದು ವಿಷ ಸೇವಿಸಿದ್ದು, ಕೋಲಾರದ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.