Advertisement

ಆದಾಯ ವೃದ್ಧಿಗೆ ಹೊಸ ಮಾರುಕಟ್ಟೆ ನೀತಿ

11:22 AM Jul 14, 2017 | Team Udayavani |

ಬೆಂಗಳೂರು: ತನ್ನ ಆದಾಯ ಮೂಲ ಸುಧಾರಣೆಗೆ ಚಿಂತನೆ ನಡೆಸಿರುವ ಬಿಬಿಎಂಪಿ, ಮಾರುಕಟ್ಟೆ ವಿಭಾಗದ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಹೊಸ “ಮಾರುಕಟ್ಟೆ ನೀತಿ’ ಜಾರಿಗೊಳಿಸಲು ಮುಂದಾಗಿದೆ. ಪಾಲಿಕೆಯಲ್ಲಿ ಸದ್ಯ ಇರುವ ಮಾರುಕಟ್ಟೆ ನೀತಿಯಲ್ಲಿನ ಕೆಲವೊಂದು ಲೋಪಗಳಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದ್ದು ಜತೆಗೆ ಇದರೊಂದಿಗೆ ಮಾರುಕಟ್ಟೆಗಳಲ್ಲಿನ ಮಳಿಗೆಗಳನ್ನು ಅತಿಕ್ರಮಿಸಿ ಬಿಬಿಎಂಪಿಗೆ ಆದಾಯ ಖೋತಾ  ಆಗುತ್ತಿದೆ. 

Advertisement

ಬಜೆಟ್‌ನಲ್ಲಿ ಮಾರುಕಟ್ಟೆ ವಿಭಾಗದಿಂದ 50 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದರೂ, ಈವರೆಗೆ ಕೇವಲ 6 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಎರಡಂಕಿ ಕೂಡ ತಲುಪುತ್ತಿಲ್ಲ. ಗೋವಾ, ಚೆನ್ನೈ ಹಾಗೂ ಕೊಲ್ಕತ್ತಾ ಪಾಲಿಕೆಗಳಲ್ಲಿ ಮಾರುಕಟ್ಟೆ ವಿಭಾಗದಿಂದ ಹೆಚ್ಚು ಆದಾಯ ಸಂಗ್ರಹವಾಗುತ್ತಿದ್ದು, ಅದೇ ಮಾದರಿಯ ಮಾರುಕಟ್ಟೆ ನೀತಿಯನ್ನು ಪಾಲಿಕೆಯಲ್ಲೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪಾಲಿಕೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮಾರುಕಟ್ಟೆ ನೀತಿ 1949ರಲ್ಲಿ ರೂಪಿಸಿದ್ದಾಗಿದೆ.

ಆಗಿನ ಸಂದರ್ಭಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದ್ದು, ಸುಧಾರಣೆ ಅಗತ್ಯವಿರುವ ಕಾರಣ ಹೊಸ ನೀತಿಯ ಕರಡು ಸಿದ್ಧವಾಗುತ್ತಿದೆ. ಪಾಲಿಕೆ ಒಡೆತನದಲ್ಲಿ 123 ಮಾರುಕಟ್ಟೆಗಳು ಹಾಗೂ 5957 ಮಳಿಗೆಗಳಿವೆ. ಈ ಮಳಿಗೆಗಳನ್ನು ಅತ್ಯಂತ ಕಡಿಮೆ ಬಾಡಿಗೆಗೆ ನೀಡಲಾಗಿದ್ದು, ಹಲವಾರು ಮಳಿಗೆದಾರರು ವರ್ಷಗಳಿಂದ ಬಾಡಿಗೆಯನ್ನೇ ಪಾವತಿಸಿಲ್ಲ. ಜತೆಗೆ ಕೆಲವರು ಮಳಿಗೆಗಳನ್ನು ಅತಿಕ್ರಮಿಸಿದ್ದಾರೆ. ಇವೆಲ್ಲದರಿಂದ ಪಾಲಿಕೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ.

ನೂತನ ನೀತಿ ಕುರಿತು ಚರ್ಚೆ
ನೂತನ ಮಾರುಕಟ್ಟೆ ನೀತಿ ಸಿದ್ಧಪಡಿಸುವ ಕುರಿತಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನೆರೆ ರಾಜ್ಯಗಳ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಉತ್ತಮ ಮಾರುಕಟ್ಟೆ ನಿತಿ ಕುರಿತಂತೆ ಚರ್ಚೆ ನಡೆಸಲಾಗಿದೆ. ಆ ಹಿನ್ನೆಲೆಯಲ್ಲಿ ಗೋವಾ, ಚೆನ್ನೈ ಹಾಗೂ ಕೋಲ್ಕತ್ತಾ ನಗರಗಳಲ್ಲಿನ ಮಾರುಕಟ್ಟೆ ನಿಯಮಗಳನ್ನು ಒಳಗೊಂಡ ನೂತನ ನೀತಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನೂತನ ಮಾರುಕಟ್ಟೆ ನೀತಿಯಲ್ಲಿ ಪಾಲಿಕೆಗೆ ಮಾರುಕಟ್ಟೆಗಳಿಂದ ಬರುವ ಆದಾಯ ಹೆಚ್ಚಿಸುವುದು, ಪಾಲಿಕೆಯ ಆಸ್ತಿಗಳ ಸಂರಕ್ಷಣೆ, ಮಳಿಗೆ ಅತಿಕ್ರಮಿಸುವವರ ವಿರುದ್ಧ ಕ್ರಮಗಳು, ನೂತನ ದರಗಳ ನಿಗದಿ, ಮಾರುಕಟ್ಟೆಗಳ ನಿರ್ವಹಣೆ ಸೇರಿದಂತೆ ಹಲವಾರು ಅಂಶಗಳನ್ನು ಅಳವಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಕೆಎಂಸಿ ಕಾಯ್ದೆ ತಿದ್ದುಪಡಿ?
ನೀತಿಯಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಕರ್ನಾಟಕ ಮುನ್ಸಿಪಲ್‌ ಕಾಯ್ದೆ ಪ್ರಕಾರ ಮಾರುಕಟ್ಟೆ ನೀತಿ ರೂಪಿಸಲು ಇರುವ ಸವಾಲುಗಳು? ಅದಕ್ಕೆ ಪರಿಹಾರಗಳೇನು? ಎಂಬ ಕುರಿತು ಚರ್ಚಿಸಲಾಗಿದೆ. ಈ ವೇಳೆ ನೂತನ ನೀತಿ ಜಾರಿಗೊಳಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದ್ದರೆ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ. 

ಪಾಲಿಕೆ ಆದಾಯ ವೃದ್ಧಿಸುವ ಉದ್ದೇಶದಿಂದ ಹೊಸ ಮಾರುಕಟ್ಟೆ ಹಾಗೂ ಜಾಹೀರಾತು ನೀತಿ ಜಾರಿಗೊಳಿಸಲು ಮುಂದಾಗಿದ್ದೇವೆ. ಈ ಸಂಬಂಧ ವಿವಿಧ ನಗರಗಳ ಮಾರುಕಟ್ಟೆ ನೀತಿ ಪರಿಶೀಲಿಸಲಾಗಿದೆ. ಹೊಸ ನೀತಿ ಜಾರಿ ಮೂಲಕ ಆದಾಯ ಹೆಚ್ಚಿಸುವ ಜತೆಗೆ, ಆಸ್ತಿಗಳ ಸಂರಕ್ಷಣೆ ಹಾಗೂ ಕಾನೂನು ಉಲ್ಲಂ ಸಿದವರ ವಿರುದ್ಧ ಕಠಿಣ ಕ್ರಮಕ್ಕೂ ಚಿಂತಿಸಲಾಗಿದೆ.
-ಎಂ.ಕೆ.ಗುಣಶೇಖರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next