ಧಾರವಾಡ: ಏಳು ದಶಕಗಳ ಇತಿಹಾಸವಿರುವ ನೆಹರೂ ಮಾರುಕಟ್ಟೆಯಲ್ಲಿರುವ ಹೋಲ್‌ಸೆಲ್ ಕಾಯಿಪಲ್ಲೆ ಮಾರುಕಟ್ಟೆ ಇನ್ನು ಹೊಸ ಎಪಿಎಂಸಿಗೆ ಸ್ಥಳಾಂತರ ಆಗಲಿದೆ.
ಸೆ. 29ರಂದು (ರವಿವಾರ) ಅಧಿಕೃತ ಉದ್ಘಾಟನೆಗೊಳ್ಳಲಿದ್ದು, ಸೋಮವಾರ ವ್ಯಾಪಾರಸ್ಥರು ಹೊಸ ಎಪಿಎಂಸಿಯಲ್ಲಿತಾವು ಕಟ್ಟಿಕೊಂಡಿರುವ ಹೊಸ ಕಟ್ಟಡದ ಮಳಿಗೆಗಳಿಗೆ ಸ್ಥಳಾಂತರ ಆಗುವ ತಯಾರಿಯಲ್ಲಿದ್ದಾರೆ. ಈ ಹೊಸ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸಗಳು ಇನ್ನೂ ಸಾಗಿದ್ದು, ಶೌಚಾಲಯ ಹಾಗೂ ನೀರಿನಂತಹಮೂಲಸೌಕರ್ಯ ನೀಡಲು ಎಪಿಎಂಸಿ ಆಡಳಿತ ಮಂಡಳಿ ಮುಂದಾಗಿರುವ ಕಾರಣ ವ್ಯಾಪಾರಸ್ಥರು ಸ್ಥಳಾಂತರಕ್ಕೆ ಮನಸ್ಸು ಮಾಡಿದ್ದಾರೆ.
ಏನಾಗಿತ್ತು: ಹೊಸ ಎಪಿಎಂಸಿಗೆ ಕಾಯಿಪಲ್ಲೆ ಮಾರುಕಟ್ಟೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ 91 ವ್ಯಾಪಾರಸ್ಥರಿಗೆ 2016ರಲ್ಲಿ ನಿವೇಶನ ಕೊಡಲಾಗಿತ್ತು. ಈ ಪೈಕಿ ಬಹುತೇಕ ವ್ಯಾಪಾರಸ್ಥರು ಕಟ್ಟಡ ಹಾಗೂ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು, ಇನ್ನೂ ಶೇ. 20 ವ್ಯಾಪಾರಸ್ಥರ ಕಟ್ಟಡ ನಿರ್ಮಾಣ ಬಾಕಿ ಉಳಿದಿದೆ. ಬಾಕಿ ಉಳಿದ ವ್ಯಾಪಾರಸ್ಥರಿಗೆ ನಿವೇಶನ ನೀಡುವಂತೆ ಹಾಗೂ ಮೂಲಸೌಕರ್ಯ ಕಲ್ಪಿಸದೇ ನಾವು ಸ್ಥಳಾಂತರ ಆಗಲ್ಲ ಎಂದು ಉಳಿದ ವ್ಯಾಪಾರಸ್ಥರು ಪಟ್ಟು ಹಿಡಿದ್ದರು.
ಹಗ್ಗ-ಜಗ್ಗಾಟ ಅಂತ್ಯ: ಈ ಮಧ್ಯೆ ಮಾರ್ಚ್ ತಿಂಗಳ ಅಂತ್ಯದೊಳಗೆ ಸ್ಥಳಾಂತರ ಆಗುವಂತೆ ವ್ಯಾಪಾರಸ್ಥರಿಗೆ ಎಪಿಎಂಸಿಯಿಂದ ಗಡುವು ನೀಡಲಾಗಿತ್ತು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಮ್ಮುಖದಲ್ಲಿ ಚರ್ಚೆ ಕೈಗೊಂಡು ವ್ಯಾಪಾರಸ್ಥರ ಬೇಡಿಕೆ ಅನುಸಾರ ಅವಧಿ ವಿಸ್ತರಿಸಲಾಗಿತ್ತು. ನಂತರ ಜೂನ್ ತಿಂಗಳ ಅಂತ್ಯದೊಳಗೆ ಸ್ಥಳಾಂತರ ಆಗುವಂತೆ ಅಂತಿಮ ಗಡುವು ವಿಧಿಸಿ, ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಇಷ್ಟರೊಳಗೆ ಕಾಯಿಪಲ್ಲೆ ವ್ಯಾಪಾರಸ್ಥರು ನ್ಯಾಯಾಲಯದ ಮೆಟ್ಟಿಲು ಏರಿ ತಡೆಯಾಜ್ಞೆ ತಂದು ಮೂಲಸೌಕರ್ಯವಿಲ್ಲದೇ ನಾವು ಸ್ಥಳಾಂತರ ಆಗಲ್ಲ ಎಂದು ಹೇಳಿದ್ದರು. ಈಗ ಮೂಲಸೌಕರ್ಯ ಕಲ್ಪಿಸುವ ಕೆಲಸ ಅಂತಿಮ ಹಂತದಲ್ಲಿ ಇದ್ದು, ಇದಲ್ಲದೇ ಬಾಕಿ ಉಳಿದ ವ್ಯಾಪಾರಸ್ಥರಿಗೂ ನಿವೇಶನ ನೀಡುವ ಭರವಸೆ ನೀಡಿರುವ ಕಾರಣ ಹೊಂದಾಣಿಕೆ ಮಾಡಿಕೊಂಡಿರುವ ವ್ಯಾಪಾರಸ್ಥರು ಸ್ಥಳಾಂತರಕ್ಕೆ ಒಪ್ಪಿದ್ದಾರೆ.
ಹುಸಿಯಾಗದಿರಲಿ: ವ್ಯಾಪಾರಸ್ಥರ ಕಟ್ಟಡ ಬಹುತೇಕ ನಿರ್ಮಾಣ ಆಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ 2-3 ತಿಂಗಳಿಂದ ಆರಂಭ ಆಗಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಮೀಟರ್ ಅಳವಡಿಸುವ ಕಾರ್ಯವಾದರೆ ವ್ಯಾಪಾರಸ್ಥರ ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲ ಆಗಲಿದೆ. ಇದಲ್ಲದೇ ಕಟ್ಟಡ ಮುಂದಿರುವ ರಸ್ತೆಗಳ ಸುಧಾರಣೆ ಜೊತೆಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಮಾಡಬೇಕು. ಇದಲ್ಲದೇ ಹೊಸ ಎಪಿಎಂಸಿಯ ಮಹಾದ್ವಾರವರೆಗೆ ಸಾರಿಗೆ ಬಸ್‌ಗಳು ಸೇವೆ ನೀಡಿದರೆ ರೈತರಿಗೂ ಅನುಕೂಲ ಆಗಲಿದೆ ಎಂಬುದು ವ್ಯಾಪಾರಸ್ಥರ ಒತ್ತಾಸೆ. ಇದಲ್ಲದೇ ಹೊಸ ಮಾರುಕಟ್ಟೆಯ ಪ್ರಾಂಗಣದಲ್ಲಿ ರಾತ್ರಿ ಹೊತ್ತು ನಡೆಯುತ್ತಿರುವ ಪುಡಾರಿಗಳ ಪಾರ್ಟಿ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ.
ತರಕಾರಿ ವ್ಯಾಪಾರಸ್ಥರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲು ಸಿದ್ಧರಿದ್ದು, ಬಾಕಿ ಉಳಿದವರಿಗೂ ನಿವೇಶನ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದಲ್ಲದೇ ಹಳೇ ಎಪಿಎಂಸಿಯಲ್ಲಿ ಹೂವು ಹಾಗೂ ಹಣ್ಣಿನ ಮಾರುಕಟ್ಟೆ ರೂಪಿಸಲೂ ಉದ್ದೇಶಿಸಲಾಗಿದೆ.
-ಮಹಾವೀರ ಅಳೆಬಸಪ್ಪನವರ, ಅಧ್ಯಕ್ಷ, ಎಪಿಎಂಸಿ, ಧಾರವಾಡ
ಶಶಿಧರ್ ಬುದ್ನಿ