Advertisement

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

04:45 PM Oct 04, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಇಲ್ಲಿನ ಕಲಬುರಗಿ-ಬೀದರ್‌ -ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಾಲು ಗುಣಮಟ್ಟದಲ್ಲಿ ಹೆಚ್ಚಳದ ಸಾಧನೆ ಮಾಡಿದ್ದು, ಒಕ್ಕೂಟದ ಹಾಲಿಗೆ ನೆರೆಯ ಮಹಾರಾಷ್ಟ್ರದಲ್ಲೂ ಬೇಡಿಕೆ ಬಂದಿದೆ. ಕಳೆದ ಒಂದೂವರೆ ದಶಕದಿಂದ ಕಲಬುರಗಿಗೆ ಮಹಾರಾಷ್ಟ್ರದ ಹಾಲು ಎಗ್ಗಿಲ್ಲದೆ ಪೂರೈಕೆ ಯಾಗುತ್ತಿತ್ತು. ಹತ್ತಾರು ಖಾಸಗಿ ಕಂಪನಿಗಳು
ತಮ್ಮ ಉತ್ಪನ್ನಗಳಿಗೆ ಕಲಬುರಗಿಯನ್ನೇ ಪ್ರಮುಖ ಮಾರುಕಟ್ಟೆಯಾಗಿಸಿಕೊಂಡಿದ್ದವು. ಈಗಲೂ ಹಾಲು ಬರುತ್ತದೆಯಾದರೂ ಮೊದಲಿನಷ್ಟಿಲ್ಲ.

Advertisement

ಈಗ ಗ್ರಾಹಕರು “ನಂದಿನಿ’ ಹಾಲಿಗೆ ಹೆಚ್ಚಾಗಿ ಮೊರೆ ಹೋಗುತ್ತಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ಕಲಬುರಗಿ-ಬೀದರ್‌-ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಗುಣಮ ಟ್ಟದಲ್ಲಿ ಶ್ರೇಷ್ಠತೆ ಹೆಚ್ಚಿಸಿಕೊಂಡ ಪರಿಣಾಮ ಇದೇ ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಸರಬರಾಜು ಆಗುತ್ತಿದೆ. ಒಕ್ಕೂಟದ ಎಮ್ಮೆಯ ಹಾಲು ದಿನಾಲು 15 ಸಾವಿರ ಲೀಟರ್‌ನಷ್ಟು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಸರಬರಾಜು ಆಗುತ್ತಿದೆ.

ಕೊಲ್ಹಾಪುರದ ಶರದ್‌ ಮಲ್ಟಿ ಕೋ-ಆಪರೇಟಿವ್‌ ಸೊಸೈಟಿಗೆ ಕಲಬುರಗಿ ಯಿಂದ ದಿನಾಲೂ ಹಾಲು ಪೂರೈಕೆಯಾಗುತ್ತಿದೆ. ಇದು ಒಕ್ಕೂಟಕ್ಕೆ ಲಾಭ ತರುವಂತಾಗಿದೆ.  ಮಾರುಕಟ್ಟೆಯಲ್ಲಿ ಹಾಲಿನ ಪೌಡರ್‌ ಹಾಗೂ ತುಪ್ಪದ ದರ ಕಡಿಮೆಯಾಗಿರುವಾಗ ಈ ಹಾಲು ಪೂರೈಕೆ ಒಕ್ಕೂಟಕ್ಕೆ ಬಲ ತುಂಬಿದಂತಾಗಿದೆ.

ಹಾಲಿನ ಗುಣಮಟ್ಟತೆ ಹೆಚ್ಚಿಸಲು ಹಾಗೂ ನಿಖರವಾಗಿ ಅಳೆಯಲು ಒಕ್ಕೂಟದಲ್ಲಿ 1.50 ಕೋಟಿ ರೂ. ಮೊತ್ತದ ಯಂತ್ರವನ್ನು
ಅಳವಡಿಸಲಾಗಿದೆ. ಅಲ್ಲದೇ ಹಾಲಿನ ಉತ್ಪಾದನೆ ಹೆಚ್ಚಿಸಲು ಹೊಸದಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ರಚನೆ, ಸಂಘಗಳ ಸದಸ್ಯರಿಗೆ ಪರಿಣಾಮಕಾರಿ ತರಬೇತಿ, ಕೃತಕ ಗರ್ಭದಾರಣೆ ಕೇಂದ್ರಗಳ ಹೆಚ್ಚಳ ಸೇರಿ ಹತ್ತಾರು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 85 ಸಾವಿರ ಲೀಟರ್‌ ಹಾಲಿಗೆ ಬೇಡಿಕೆಯಿದ್ದು, ಈಗ 70 ಸಾವಿರ ಲೀಟರ್‌ ಹಾಲು ಪೂರೈಕೆಯಾಗುತ್ತಿದೆ. ಇನ್ನುಳಿದ
15 ಸಾವಿರ ಲೀಟರ್‌ ಹಾಲನ್ನು ಶಿವಮೊಗ್ಗದಿಂದ ತರಿಸಲಾಗುತ್ತಿದೆ.

ಈಚೆಗೆ ನಡೆದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಕಾರ್ಯ ನಿರೂಪಣಾ ಸಮಿತಿ ಸಭೆಯಲ್ಲಿ ಪ್ರಥಮ ಬಾರಿಗೆ  ಶೇ.96ರಷ್ಟು ಗುಣಮಟ್ಟ ಸಾಧನೆಗೆ ಸಂಬಂಧಿಸಿದಂತೆ ಶ್ರೇಷ್ಠತೆ ಪ್ರಮಾಣ ದೊರೆತಿದೆ. 1985ರಲ್ಲಿ ಆರಂಭವಾದ ಈ ಒಕ್ಕೂಟ ನಾಲ್ಕು ದಶಕಗಳ ಅವಧಿದಲ್ಲಿ ಇಂತಹ ಪ್ರಶಂಸೆ ಪಡೆದಿರುವುದು ಇದೇ ಮೊದಲು. ಈ ಹಿಂದೆ ಅಗತ್ಯಕ್ಕೆ ತಕ್ಕ ಹಾಲು ಉತ್ಪಾದನೆ ಹಾಗೂ ಶೇಖರಣೆ ಒತ್ತಟ್ಟಿಗಿರಲಿ, ಬೇಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಬೇರೆ ಕಡೆಯಿಂದ ತರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

Advertisement

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next