ಇಂದಿಗೂ ಅದೆಷ್ಟೋ ಜನರ ದೈನಂದಿನ ಕೆಲಸಗಳು ಆರಂಭವಾಗುವುದೇ ಬೆಳ್ಳಂ ಬೆಳಿಗ್ಗೆ ಟಿ.ವಿಯಲ್ಲಿ ಪ್ರಸಾರವಾಗುವ ಜ್ಯೋತಿಷ್ಯ, ದಿನಭವಿಷ್ಯ ಕೇಳಿದ ನಂತರ. ಟಿ.ವಿಯಲ್ಲಿ ಪ್ರಸಾರವಾಗುವ ಜ್ಯೋತಿಷ್ಯ ಕಾರ್ಯಕ್ರಮಗಳು, ಜ್ಯೋತಿಷಿಗಳು ಅಷ್ಟರ ಮಟ್ಟಿಗೆ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ನಿರ್ಮಾವಾಗುತ್ತದೆ. ಅಂದಹಾಗೆ, ಆ ಚಿತ್ರದ ಹೆಸರು “ಪುನರ್ವಸು ನಕ್ಷತ್ರ ಮಿಥುನ ರಾಶಿ’
ಗಾಂಧಿನಗರದ ಸಂಪರ್ಕವೇ ಇಲ್ಲದ ಮೈಸೂರು ಮೂಲದ ವಿಜಯ್ ಕಾರ್ತಿಕ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ರಚಿಸಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ಈ ಬಗ್ಗೆ ಮಾತನಾಡುವ ನಟ ಕಂ ನಿರ್ದೇಶಕ ವಿಜಯ್ ಕಾರ್ತಿಕ್, “ಜ್ಯೋತಿಷ್ಯ ಅನ್ನೋದು ಇಂದಿನ ದಿನಗಳಲ್ಲಿ ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನೋದನ್ನ ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ.
ಚಿತ್ರದಲ್ಲಿ ಸಂಪೂರ್ಣ ಮನರಂಜನೆ ಜೊತೆಗೆ ಒಂದು ಸಂದೇಶ ಕೂಡ ಇದೆ. ಜ್ಯೋತಿಷ್ಯವನ್ನು ಅನುಸರಿಸುವ ಮಂಜುನಾಥ ಎಂಬ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಏನೇನು ನಡೆಯುತ್ತದೆ ಅನ್ನೋದೆ ಚಿತ್ರದ ಕಥೆಯ ಒಂದು ಎಳೆ. ಕೆಲ ವರ್ಷಗಳ ಹಿಂದೆ ನಾವು ಕಣ್ಣಾರೆ ಕಂಡಂತಹ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಮೊದಲೆಲ್ಲ ವೈಜ್ಞಾನಿಕ ತಳಹದಿಯ ಮೇಲೆ ಜ್ಯೋತಿಷ್ಯವನ್ನು ಹೇಳುತ್ತಿದ್ದರು. ಇಂದು ಜ್ಯೋತಿಷ್ಯದ ವ್ಯಾಖ್ಯಾನ, ಅದನ್ನು ಹೇಳುವವರು ಎಲ್ಲರೂ ಬದಲಾಗಿದ್ದಾರೆ. ಅದರಲ್ಲೂ ಟಿ.ವಿಯಲ್ಲಿ ಬಂದು ಪ್ರಚಾರ ಪಡೆಯುವ ಜ್ಯೋತಿಷಿಗಳನ್ನು ನಂಬಿದರೆ ಏನಾಗುತ್ತದೆ ಎನ್ನುವುದನ್ನ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ.
ಇನ್ನು “ಪುನರ್ವಸು ನಕ್ಷತ್ರ ಮಿಥುನ ರಾಶಿ’ ಚಿತ್ರದಲ್ಲಿ ತೆರೆಯ ಮುಂದೆ ಮತ್ತು ತೆರೆಯ ಹಿಂದೆ ಬಹುತೇಕ ಹೊಸಬರ ತಂಡವೇ ಕೆಲಸ ಮಾಡಿದೆ. ಚಿತ್ರದಲ್ಲಿ ನಾಯಕ ವಿಜಯ್ ಕಾರ್ತಿಕ್ ಅವರಿಗೆ ಜೋಡಿಯಾಗಿ ಅನೂಷಾ ಪಕಾಲಿ ಅಭಿನಯಿಸಿದ್ದಾರೆ. ಉಳಿದಂತೆ ಅಶ್ವಿಧಿ, ನಾರಾಯಣ ರಾವ್, ಮಾನಸ ಶ್ರೀಧರ್, ನವೀನ್ ಕುಮಾರ್, ಸವಿತಾ, ರಮೇಶ್ ಕುಮಾರ್, ಪ್ರಶಾಂತ್, ಡಾ. ಅಭಿಜಿತ್, ಸುಜೀಂದ್ರನ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸುಮಾರು 68ಕ್ಕೂ ಹೆಚ್ಚು ಪಾತ್ರಗಳು ಬರಲಿದ್ದು, ಆಟೋ ಡ್ರೈವರ್ ಇಂದ ಡಾಕ್ಟರ್ ವರೆಗೆ ವಿವಿಧ ವೃತ್ತಿಯಲ್ಲಿರುವ ನಟನೆಯಲ್ಲಿ ಆಸಕ್ತರಾಗಿರುವ ಅನೇಕ ಹೊಸ ಕಲಾವಿದರು ಚಿತ್ರದ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
“ಪುನರ್ವಸು ನಕ್ಷತ್ರ ಮಿಥುನ ರಾಶಿ’ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅತಿಶಯ್ ಜೈನ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮಧು ಬಾಲಕೃಷ್ಣ, ಶುಭಾ ರಾಘವೇಂದ್ರ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ವಿಘ್ನೇಶ್ ಛಾಯಾಗ್ರಹಣ, ಭುವನ್ ಸತ್ಯ ಸಂಕಲನ ಕಾರ್ಯವಿದೆ. ಶ್ರೀ ಪ್ರಸನ್ನ ಮಹಾಗಣಪತಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಮೈಸೂರು, ಚಾಮರಾಜನಗರ, ಪಾಂಡವಪುರ, ಧರ್ಮಸ್ಥಳ, ಮುರುಡೇಶ್ವರ, ಕೊಲ್ಲೂರು, ಮಂಗಳೂರು, ಶೃಂಗೇರಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಚಿತ್ರರಂಗದಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿರಿಯ ನಿರ್ದೇಶಕ ನಾಗಾಭರಣ ಕೂಡ ಚಿತ್ರತಂಡದ ಪರಿಶ್ರಮಕ್ಕೆ ಬೆನ್ನು ತಟ್ಟಿದ್ದಾರೆ. ಇತ್ತೀಚೆಗೆ “ಪುನರ್ವಸು ನಕ್ಷತ್ರ ಮಿಥುನ ರಾಶಿ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್ ಇಲ್ಲದೆ, ಯು ಸರ್ಟಿಫಿಕೆಟ್ ನೀಡಿದೆ. ಒಟ್ಟಾರೆ “ಪುನರ್ವಸು ನಕ್ಷತ್ರ ಮಿಥುನ ರಾಶಿ’ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದೇ 19ರಂದು ತೆರೆಗೆ ತರುವ ಯೋಜನೆಯಲ್ಲಿದೆ.
— ಜಿ.ಎಸ್ ಕಾರ್ತಿಕ ಸುಧನ್