“ಕಾರ್ಮೋಡ ಸರಿದು ಬೆಳಕು ಸುರಿದ ಮೇಲೂ… ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ…’ “ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ ಚಿತ್ರದ ಹಾಡು ಇದು. ಅರೇ, ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ “ಕಾರ್ಮೋಡ ಸರಿದು’ ಹೆಸರಿನ ಚಿತ್ರ. ಹೌದು, ಹೊಸಬರು ಸೇರಿ ಮಾಡಿರುವ ಚಿತ್ರಕ್ಕೆ “ಕಾರ್ಮೋಡ ಸರಿದು’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಟ್ರೇಲರ್ ಹಾಗು ಹಾಡು ತೋರಿಸುವ ಮೂಲಕ ಚಿತ್ರದ ಮಾಹಿತಿ ಹಂಚಿಕೊಳ್ಳಲು ಮಾಧ್ಯಮ ಮುಂದೆ ಬಂದಿದ್ದರು ನಿರ್ದೇಶಕ ಉದಯ್‌ಕುಮಾರ್. ಅದಕ್ಕೂ ಮೊದಲು ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದರು. ನಂತರ ಮಾತು ಕತೆಗೆ ಕುಳಿತ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ಉದಯಕುಮಾರ್ ಹೇಳಿದ್ದಿಷ್ಟು. “ಇದು ನನ್ನ ಮೊದಲ ಚಿತ್ರ. ಹಾಗಂತ ಚಿತ್ರರಂಗ ಹೊಸದಲ್ಲ. ಆನ್‌ಲೈನ್ ಎಡಿಟರ್ ಆಗಿ ಕೆಲಸ ಮಾಡಿದ ಅನುಭವ ಇದೆ. ಹಲವು ಜಾಹೀರಾತು ಸಿನಿಮಾ ಮಾಡಿದ್ದೇನೆ. ನಿರ್ದೇಶನ ನನ್ನ ಕನಸಾಗಿತ್ತು. ಆದರೆ, ವಿಶ್ವಾಸ ಇರಲಿಲ್ಲ. ಮೂರು ವರ್ಷಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರ “ಇಷ್ಟಕಾಮ್ಯ’ ಚಿತ್ರದಲ್ಲಿ ಕೆಲಸ ಮಾಡುತ್ತಲೇ ಅವರ ಟೆಂಟ್ ಶಾಲೆಯಲ್ಲಿ ಪಾಠ ಹೇಳಿಕೊಡುತ್ತಲೇ ಅನುಭವ ಪಡೆದೆ.
“ಕಾರ್ಮೋಡ ಸರಿದು’ ಇದೊಂದು ಕೌಟುಂಬಿಕ ಚಿತ್ರ. ಇಲ್ಲಿ ನಗು, ಅಳು, ಹಾಸ್ಯ, ಎಮೋಷನ್ಸ್ ಎಲ್ಲವೂ ಇದೆ. ನೋಡಿದವರಿಗೆ ಹಂಡ್ರೆಡ್ ಪರ್ಸೆಂಟ್ ಹಾರ್ಟ್ ಟಚ್ ಆಗುತ್ತೆ. ಮಾನವೀಯತೆ ಅಂಶಗಳು ಚಿತ್ರದ ಹೈಲೈಟ್’ ಎನ್ನುತ್ತಾರೆ ಅವರು.
ನಾಯಕ ಮಂಜು ರಾಜಣ್ಣ ಅವರಿಗೂ ಇದು ಮೊದಲ ಚಿತ್ರವಂತೆ. “ಸಿನಿಮಾ ಮಾಡುವ ಆಸೆ ಇತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. “ಕಾರ್ಮೋಡ ಸರಿದು’ ಚಿತ್ರ ಈಗಿನ ಯೂಥ್‌ಗೆ ಹತ್ತಿರವಾದಂತಹ ವಿಷಯ ಹೊಂದಿದೆ. ಹೊಸಬರ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹವಿರಲಿ’ ಎಂದರು ಮಂಜು ರಾಜಣ್ಣ.
ನಿರ್ಮಾಪಕ ರಾಜಶೇಖರ್ ಅವರಿಗೆ ಇದು ಮೊದಲ ಸಿನಿಮಾ. “ನಾಯಕ ನನ್ನ ಸ್ನೇಹಿತ. ಅವರೊಂದು ಕಥೆ ಹಿಡಿದು ಬಂದಿದ್ದರು. ಕಥೆ ಕೇಳಿದಾಗ, ಹೊಸತನ ಇದೆ ಅನಿಸಿತು. ಕೂಡಲೇ ಸಿನಿಮಾಗೆ ಗ್ರೀನ್‌ಸಿಗ್ನಲ್ ಕೊಟ್ಟೆ. ಇಲ್ಲಿ ಎಲ್ಲರೂ ಕಷ್ಟ ಪಟ್ಟು, ಇಷ್ಟಪಟ್ಟು ಚಿತ್ರ ಮಾಡಿದ್ದಾರೆ. ಚಿತ್ರೀಕರಣ ವೇಳೆ ಸಾಕಷ್ಟು ಸಮಸ್ಯೆ ಎದುರಾದರೂ, ಅವುಗಳನ್ನೆಲ್ಲಾ ಪಕ್ಕಕ್ಕೆ ಸರಿಸಿ ಸಿನಿಮಾ ಚೆನ್ನಾಗಿ ಬರಲು ಕಾರಣರಾಗಿದ್ದಾರೆ. ಇಲ್ಲಿಯವರೆಗೆ ನಾವು ಕೆಲಸ ಮಾಡಿದ್ದೇವೆ. ಇನ್ನು ಮುಂದೆ ಮಾಧ್ಯಮದ ಗೆಳೆಯರು ಸಿನಿಮಾವನ್ನು ಪ್ರೋತ್ಸಾಹಿಸಬೇಕು’ ಎಂದರು.
ನಟ ಶ್ರೀಧರ್ ಅವರಿಲ್ಲಿ ಹುಡುಗರ ಜೊತೆ ಜಾಲಿಯಾಗಿರುವ ಪಾತ್ರ ನಿರ್ವಹಿಸಿದ್ದಾರಂತೆ. ಇದುವರೆಗೆ ಗಂಭೀರ ಪಾತ್ರಗಳಲ್ಲೇ ಕಾಣಿಸಿ ಕೊಂಡಿದ್ದ ನನಗೆ, ಇಲ್ಲಿ ತಮಾಷೆ ಮಾಡಿಕೊಂಡಿರುವ ಪಾತ್ರ ಸಿಕ್ಕಿದೆ’ ಎಂದರು. ಕಿರುತೆರೆಯಲ್ಲಿದ್ದ ಅದ್ವಿತಿ ಶೆಟ್ಟಿ ಅವರಿಗೆ ಇಲ್ಲಿ ನಾಯಕಿ ಪಾತ್ರ ಸಿಕ್ಕಿದೆ. ಅವರಿಲ್ಲಿ ಡಾಕ್ಟರ್ ಪಾತ್ರ ಮಾಡಿದ್ದಾರಂತೆ. “ಎರಡು ಕನಸು’ ಧಾರಾವಾಹಿಯಲ್ಲೂ ಡಾಕ್ಟರ್ ಪಾತ್ರ ನಿರ್ವಹಿಸಿದ್ದ ಅವರಿಗೆ, ಇಲ್ಲೂ ಅದೇ ಪಾತ್ರ ಸಿಕ್ಕಿದೆಯಂತೆ.
ಇಲ್ಲಿ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆ. ಕ್ಲೈಮ್ಯಾಕ್ಸ್ ನಲ್ಲೊಂದು ಸಂದೇಶವಿದೆ. ಅದನ್ನು ತಿಳಿಯಲು ಎಲ್ಲರೂ ಸಿನಿಮಾ ನೋಡಬೇಕು’ ಎಂದರು ಅದ್ವಿತಿ ಶೆಟ್ಟಿ. ಸಂಗೀತ ನಿರ್ದೇಶಕ ಸತೀಶ್‌ಬಾಬು ಇಲ್ಲಿ ಮೂರು ಹಾಡುಗಳನ್ನು ನೀಡಿದ ಬಗ್ಗೆ ಹೇಳಿಕೊಂಡರು. ಮಾಸ್ಟರ್ ಹೇಮಂತ್ ತನ್ನ ಪಾತ್ರ ಕುರಿತು ಮಾತನಾಡುವ ಹೊತ್ತಿಗೆ ಮಾತುಕತೆಗೆ ಬ್ರೇಕ್ ಬಿತ್ತು. ಒಳಗೆ “ಕಾರ್ಮೋಡ ಸರಿದು’ ಚಿತ್ರದ ಮಾತುಕತೆ ಮುಗಿಯುವ ಹೊತ್ತಿಗೆ, ಹೊರಗೆ ಕಾರ್ಮೋಡ ಕವಿದು ತುಂತುರು ಮಳೆ ಹನಿಗಳ ನರ್ತನವಾಗುತ್ತಿತ್ತು.