Advertisement

ಬತ್ತಿಯಿಂದ ನೀರುಣಿಸುವ ತಂತ್ರಜ್ಞಾನ : ಕೃಷಿ ದಿಕ್ಕು ಬದಲಿಸಲಿದೆಯೇ ಹೊಸ ಪದ್ಧತಿ?

07:44 AM Feb 09, 2021 | Team Udayavani |

ಬೆಂಗಳೂರು: ನೀರಿನ ಸದ್ಬಳಕೆಗಾಗಿ ದಶಕಗಳ ಹಿಂದೆ ಹನಿ ನೀರಾವರಿ ಪದ್ಧತಿ ಬಂತು. ಈಗ ಆ ಹನಿಯಲ್ಲಿ ಹತ್ತನೇ ಒಂದು ಭಾಗದಷ್ಟು ಉಪಯೋಗಿಸಿ, ಬೆಳೆ ಬೆಳೆಯಬಹುದಾದ ನೂತನ ತಂತ್ರಜ್ಞಾನವನ್ನು ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ (ಐಐಎಚ್‌ಆರ್‌) ಅಭಿವೃದ್ಧಿಪಡಿಸಿದೆ.

Advertisement

ಚಿಮಿಣಿಯ ಬತ್ತಿ ಎಣ್ಣೆ ಹೀರುವಂತೆ ಇಲ್ಲಿ ನೀರುಣಿಸುವ ಹೈಬ್ರಿಡ್‌ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ. ಪ್ರಾಯೋಗಿಕವಾಗಿ ಈ ಪ್ರಯತ್ನ ಫ‌ಲ ನೀಡಿದೆ. ಜಮೀನಿನಲ್ಲಿ ಇದರ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ಈ ತಂತ್ರಜ್ಞಾನ ಬೆಂಗಳೂರಿನಲ್ಲಿ ಸೋಮವಾರ ಆರಂಭಗೊಂಡ ಐದು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶನಕ್ಕಿದೆ.

ಕೆಲಸ ಮಾಡುವುದು ಹೇಗೆ?
ಹೊಸ ತಂತ್ರಜ್ಞಾನದಲ್ಲಿ ನೀರಿನ ಪೈಪ್‌ ಗಳಿಗೆ ಸೆಣಬಿನ ಬತ್ತಿಯನ್ನು ಜೋಡಿಸಿ, ಬೇರುಗಳ ಹತ್ತಿರಕ್ಕೆ ಬಿಡಲಾಗುತ್ತದೆ. ನೀರು ಹರಿಸಿದಾಗ, ಸೆಣಬು ತೇವಗೊಂಡು ಗಿಡಗಳಿಗೆ ನೀರು ಪೂರೈಕೆ ಆಗುತ್ತದೆ. ಇದರಲ್ಲಿ ಅಗತ್ಯವಿದ್ದಷ್ಟು ಮಾತ್ರ ನೀರು ಹರಿಯುತ್ತದೆ. ಉಳಿದದ್ದು ಟ್ಯಾಂಕ್‌ಗೆ ವಾಪಸ್‌ ಆಗುತ್ತದೆ. ಇದರಡಿ ಸಾವಿರ ಚ.ಮೀ. ಪಾಲಿಹೌಸ್‌ಗೆ ಕೇವಲ 1 ಸಾವಿರ ಲೀ. ನೀರು ಸಾಕು ಎಂದು ಐಐಎಚ್‌ಆರ್‌ನ ಪುಷ್ಪ ಮತ್ತು ಔಷಧ ಸಸ್ಯಗಳ ವಿಭಾಗದ ಮುಖ್ಯಸ್ಥ ಡಾ| ಸಿ. ಅಶ್ವತ್ಥ್ “ಉದಯವಾಣಿ’ಗೆ ತಿಳಿಸಿದ್ದಾರೆ.

ಉಪ್ಪು ನೀರಿರುವೆಡೆ ಅನುಕೂಲ?
ಕೊಳಚೆನೀರು ಮತ್ತು ಉಪ್ಪುನೀರಿನಲ್ಲೂ ವಿಕ್‌ ಸಿಸ್ಟಮ್‌ ಪ್ರಯೋಗ ಮತ್ತು ಸಂಶೋಧನೆಗೆ ಚಿಂತನೆ ನಡೆದಿದೆ. ಎಷ್ಟೋ ಕಡೆ ಕೊಳಚೆನೀರು ಇರುತ್ತದೆ. ಬತ್ತಿಯಿಂದ ನೀರಿನಲ್ಲಿರುವ ಕಲುಷಿತ ಅಂಶಗಳನ್ನು ಹಿಡಿದಿಟ್ಟು, ಶುದ್ಧೀಕರಿಸಿ ನೀರುಣಿಸಲು ಸಾಧ್ಯವೇ ಎಂಬ ಸಂಶೋಧನೆ ನಡೆಯುತ್ತಿದೆ. ಉತ್ತರ ಕರ್ನಾಟಕ, ಕರಾವಳಿಯ ಕೆಲವು ಭಾಗಗಳಲ್ಲಿ ಉಪ್ಪುನೀರು ಇದೆ. ಈ ತಂತ್ರಜ್ಞಾನದಿಂದ ಉಪ್ಪಿನ ಅಂಶ ಹಿಡಿದಿಟ್ಟು, ಸಿಹಿ ನೀರನ್ನು ಮಾತ್ರ ಗಿಡಗಳಿಗೆ ಪೂರೈಸಲು ಸಾಧ್ಯವೇ ಎಂಬ ಸಂಶೋಧನೆ ನಡೆಯುತ್ತಿದೆ ಎಂದು ಡಾ| ಅಶ್ವತ್ಥ್ ಮಾಹಿತಿ ನೀಡಿದ್ದಾರೆ.

ಯಾವ ಬೆಳೆಗಳಿಗೆ?
– ತರಕಾರಿ, ಹೂವು ಮತ್ತು ಹಣ್ಣು ಸಹಿತ ಬಹುತೇಕ ಎಲ್ಲ ಪ್ರಕಾರದ ತರಕಾರಿಗಳಿಗೆ.
– ಪಾಲಿಹೌಸ್‌ ಮಾತ್ರವಲ್ಲ; ಮುಕ್ತ ವಾತಾವರಣದಲ್ಲೂ ಅನುಸರಿಸಬಹುದು.
– ತಾರಸಿ ಗಾರ್ಡನಿಂಗ್‌ನಲ್ಲಿಯೂ ಸಾಧ್ಯ.
– ನೀರಿನ ಸಮಸ್ಯೆ ಸಾಕಷ್ಟಿರುವಲ್ಲಿಯೂ ಪ್ರಯೋಜನಕಾರಿ

Advertisement

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next