ಸಂಗೀತ ನಿರ್ದೇಶಕ ವಿ.ಮನೋಹರ್, ಕನ್ನಡ ಚಿತ್ರರಂಗದಲ್ಲಿ ಕಳೆದ ಎರಡುವರೆ ದಶಕಗಳಿಂದಲೂ ಸಂಗೀತ ನಿರ್ದೇಶನ ಮತ್ತು ನಟನೆಯಲ್ಲಿ ತೊಡಗಿದವರು. ಈವರೆಗೆ 140 ಚಿತ್ರಗಳಿಗೆ ಸಂಗೀತ ನೀಡಿರುವ ಹೆಗ್ಗಳಿಕೆ ಅವರದು. ಅಷ್ಟೇ ಅಲ್ಲ, ನಟರಾಗಿಯೂ ಗುರುತಿಸಿಕೊಂಡವರು. ಸಂಗೀತ ನಿರ್ದೇಶನದ ಜೊತೆಗೆ “ಓ ಮಲ್ಲಿಗೆ’ ಮತ್ತು “ಇಂದ್ರಧನುಷ್’ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡವರು.
ಸದಾ ಒಂದಿಲ್ಲೊಂದು ಚಿತ್ರಗಳಲ್ಲಿ ಸಂಗೀತ ನೀಡುವ ಮೂಲಕ ತಮ್ಮ ಪಾಡಿಗೆ ತಾವು ಸದ್ದಿಲ್ಲದೆಯೇ ಕೆಲಸ ಮಾಡುತ್ತಿರುವ ವಿ.ಮನೋಹರ್, ಹದಿನೆಂಟು ವರ್ಷಗಳ ಬಳಿಕ ಹೊಸ ಚಿತ್ರವೊಂದಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹೌದು, “ಇಂದ್ರಧನುಷ್’ ಚಿತ್ರದ ಬಳಿಕ ವಿ. ಮನೋಹರ್ ಯಾವುದೇ ಚಿತ್ರವನ್ನೂ ನಿರ್ದೇಶಿಸಿಲ್ಲ. ಮಧ್ಯೆ ಮಧ್ಯೆ ನಿರ್ದೇಶಿಸುವ ಪ್ರಯತ್ನಗಳು ನಡೆದರೂ, ಹಲವು ಕಾರಣಗಳಿಂದ ಅವರು ನಿರ್ದೇಶಿಸಬೇಕಿದ್ದ ಚಿತ್ರಗಳು ಕೈ ತಪ್ಪಿದ್ದುಂಟು.
ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮನೋಹರ್, ಪಾಲಿಗೆ ಬಂದ ಚಿತ್ರಗಳಿಗೆ ಸಂಗೀತ ಕೊಡುವ ಮೂಲಕ ಬಿಝಿ ಸಂಗೀತ ನಿರ್ದೇಶಕರಾಗಿದ್ದಾರೆ. ಈಗ ಹೊಸದೊಂದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಅವರೇ ನಿರ್ದೇಶನಕ್ಕೂ ಅಣಿಯಾಗಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಆದರೆ, ಅದಾಗಲೇ ಸಕಲೇಶಪುರದಲ್ಲಿ ಚಿತ್ರಕ್ಕೆ ಸರಳವಾಗಿ ಮುಹೂರ್ತವೂ ನಡೆದಿದೆ.
ಈ ಬಾರಿ, ಸಾಕಷ್ಟು ತಯಾರಿಯೊಂದಿಗೇ ನಿರ್ದೇಶನಕ್ಕಿಳಿದಿರುವ ಮನೋಹರ್ ಅವರು, ತಮ್ಮ ಮೂರನೇ ನಿರ್ದೇಶನದ ಚಿತ್ರವನ್ನು ಹೊಸ ಬಗೆಯ ಚಿತ್ರವನ್ನಾಗಿಸಲು ಪಣತೊಟ್ಟಿದ್ದಾರೆ. ಈ ಬಾರಿ ಮರ್ಡರ್ ಮಿಸ್ಟ್ರಿ ಇರುವ ಹಾರರ್ ಕಥೆ ಬರೆದಿರುವ ಮನೋಹರ್, ಬಹುತೇಕ ಹೊಸ ಪ್ರತಿಭೆಗಳನ್ನೇ ಇಟ್ಟುಕೊಂಡು ಕೆಲಸ ಮಾಡುವ ಉತ್ಸಾಹದಲ್ಲಿದ್ದಾರೆ.
ಹದಿನೆಂಟು ವರ್ಷಗಳ ಬಳಿಕ ಒಂದು ಚಿತ್ರ ನಿರ್ದೇಶನಕ್ಕೆ ಸಜ್ಜಾಗಿರುವ ವಿ.ಮನೋಹರ್ ಅವರಿಗೆ ಒಳ್ಳೆಯ ತಂಡವೇ ಸಿಕ್ಕಿದೆ. ಇಡೀ ಚಿತ್ರದ ಕಥೆ ನಾಯಕನ ಮೇಲೆಯೇ ಸಾಗಲಿದೆ. ಸದ್ಯಕ್ಕೆ ಮುಹೂರ್ತ ನಡೆದಿದ್ದು, ಚುನಾವಣೆ ಬಳಿಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚು ಜಾಗವಿಲ್ಲ. ಎರಡು ಹಾಡುಗಳು ಚಿತ್ರದಲ್ಲಿರಲಿವೆ. ಇನ್ನು, ಈ ಚಿತ್ರಕ್ಕೆ ಉತ್ತರ ಕನ್ನಡ ಭಾಗದ ಗೆಳೆಯರು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯಕ್ಕೆ ಹೊಸ ಚಿತ್ರದ ನಿರ್ದೇಶನದ ಜಪದಲ್ಲಿರುವ ಮನೋಹರ್, ಸಂಗೀತ ನಿರ್ದೇಶನದಲ್ಲೂ ಬಿಜಿಯಾಗಿದ್ದಾರೆ. ಅವರ ಕೈಯಲ್ಲೀಗ ಐದು ಚಿತ್ರಗಳಿವೆ. “ವೇಷಧಾರಿ’, “ಸಿಗ್ನೇಚರ್’ ಮತ್ತು ಮಂಡ್ಯದ ಹಳ್ಳಿ ಕಥೆ ಹೊಂದಿರುವ “ಕೊಂಟೆ’ ಎಂಬ ಹೊಸ ಚಿತ್ರ ಸೇರಿದಂತೆ ಇನ್ನೂ ಹೊಸಬರ ಎರಡು ಚಿತ್ರಗಳಿವೆ. ಇದರ ನಡುವೆ ರಾಮ್‌ಶೆಟ್ಟಿ ನಿರ್ದೇಶನದ ತುಳು ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ ಮನೋಹರ್.