Advertisement

ಕಾಯಿಲೆ ಪೀಡಿತರಲ್ಲಿ ಹೊಸ ಆಶಾಕಿರಣ

03:06 PM Jan 02, 2018 | |

ಸಾಗರ: ತಾಲೂಕಿನ ಹಂದಿಗೋಡಿನಲ್ಲಿ ತಮ್ಮ ಹೊಸ ವರ್ಷ ಆಚರಣೆಯನ್ನು ಜಿಲ್ಲಾಧಿಕಾರಿ ಡಾ| ಲೋಕೇಶ್‌ ಹಂದಿಗೋಡು ಕಾಯಿಲೆ ಪೀಡಿತರ ನಡುವೆ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

Advertisement

ಸೋಮವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಹಂದಿಗೋಡು ಕಾಯಿಲೆ ಪೀಡಿತರಿಗೆ 2018ರ ಹೊಸ ವರ್ಷ ವಿಶೇಷ ರೀತಿಯಲ್ಲಿ ಅನುಭವವಾಗುವಂತೆ ಖುದ್ದು ಜಿಲ್ಲಾಧಿಕಾರಿ ಡಾ| ಲೋಕೇಶ್‌ ಅಲ್ಲಿಗೆ ಭೇಟಿ ನೀಡಿ, ಹೊಸ ವರ್ಷದ ಆಚರಣೆಯ ಪ್ರತೀಕವಾಗಿ ಕೇಕ್‌ ಕತ್ತರಿಸಿ ಕಾಯಿಲೆ ಪೀಡಿತರಿಗೆ ತಿನ್ನಿಸಿ ಶುಭಾಷಯಗಳನ್ನು ಹಂಚಿಕೊಂಡರು. ತಮ್ಮ ಸ್ವಂತ ಹಣದಿಂದ ಅವರಲ್ಲಿ ಪುರುಷರಿಗೆ ಪಂಚೆ, ಶರ್ಟ್‌ ಹಾಗೂ ಮಹಿಳೆಯರಿಗೆ ಸೀರೆ ರವಿಕೆ ಕಣಗಳನ್ನು ವಿತರಿಸಿದರು. ಇದರ ಜೊತೆಗೆ ಅವರಿಗಾಗಿ ಪ್ಲೇಟ್‌, ಲೋಟ, ಸೋಪು, ಟೂತ್‌ಪೇಸ್ಟ್‌ ಮೊದಲಾದ ಜೀವನಾವಶ್ಯಕ ವಸ್ತುಗಳಿದ್ದ ವಿಶೇಷ ಕಿಟ್‌ ಒಂದನ್ನು 28ರಿಂದ 30 ಜನರಿಗೆ ವಿತರಿಸಿದರು.

ಜಿಲ್ಲೆಯಲ್ಲಿರುವ ಸುಮಾರು 212 ಹಂದಿಗೋಡು ಕಾಯಿಲೆ ಪೀಡಿತರ ಕುರಿತು ವಿಶೇಷ ಕಾಳಜಿ ಹೊಂದಿರುವ ಜಿಲ್ಲಾ ಧಿಕಾರಿಗಳು ಕಳೆದ ತಿಂಗಳು ಕೂಡ ಹಂದಿಗೋಡಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಜನರ ನೆರವಿಗೆ ತಾವು ಇರುವುದಾಗಿ ಭರವಸೆ ನೀಡಿದ್ದರಾದರೂ, ಹೊಸ ವರ್ಷಕ್ಕೆ ಈ ರೀತಿಯ ಅಚ್ಚರಿಯ ಭೇಟಿ, ಉಡುಗೊರೆಗಳನ್ನು ಕೊಡುವುದರ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಈ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಯಿಲೆ ಪೀಡಿತರಿಗೆ ಸ್ಥಳದಲ್ಲೇ ಬಂದು ಬಯೋಮೆಟ್ರಿಕ್‌ ಪಡೆದು ಪಡಿತರ ವಿತರಿಸುವುದು ಹಾಗೂ ಗುಡಿ ಕೈಗಾರಿಕೆ ತರಬೇತಿ ಕುರಿತು ತಾವು ನೀಡಿದ ಸೂಚನೆಗಳನ್ನು
ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ಹಾಗೂ ತಾಪಂ ಇಒ ಡಾ| ಕಲ್ಲಪ್ಪ ಜಾರಿಗೆ ತರದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗುಡಿ ಕೈಗಾರಿಕೆಗಳನ್ನು ನಡೆಸುವುದರಿಂದ ಸಂಕಷ್ಟದಲ್ಲಿರುವವರ ಆರ್ಥಿಕ ಶಕ್ತಿ ಸುಧಾರಿಸುತ್ತದೆ. ಈ ಹಿಂದೆ ಇಲ್ಲಿನ ನೇಯ್ಗೆ ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದ ರಗ್ಗು, ಹೊದಿಕೆ ಮಾರುಕಟ್ಟೆ ಸಮಸ್ಯೆಯಾದಂತೆ ಈ ಬಾರಿ ಆಗದಂತೆ ಮಾರುಕಟ್ಟೆ
ಕುರಿತಾಗಿಯೂ ಆಡಳಿತ ಚಿಂತಿಸುತ್ತದೆ ಎಂದು ಭರವಸೆ ನೀಡಿದರು. ಹೆಚ್ಚು ಪ್ರಚಾರ ನೀಡದೆ, ಪತ್ರಕರ್ತರಿಗೆ ಸುಳಿವನ್ನೂ ನೀಡದೆ ಆಗಮಿಸಿದ ಜಿಲ್ಲಾಧಿಕಾರಿಗಳಿಗೆ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ನಾಗರಾಜ್‌ ಆರ್‌.ಸಿಂಗ್ರೇರ್‌, ತಾಲೂಕು ವೈದ್ಯಾಧಿಕಾರಿ ಡಾ| ಕೆ.ಪಿ.ಅಚ್ಚುತ್‌, ಹಂದಿಗೋಡು ಸಂಚಾರಿ ಘಟಕದ ವೈದ್ಯಾಧಿ ಕಾರಿ ಡಾ| ವಾಸುದೇವ್‌, ಹಿರಿಯ ಆರೋಗ್ಯ ಸಹಾಯಕಿ ಶಾಲಿನಿ, ಆಶಾ ಕಾರ್ಯಕರ್ತೆ ತ್ರಿವೇಣಿ, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್‌ ಹಂದಿಗೋಡು ಸಾಥ್‌ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next