ಬೆಂಗಳೂರು: ನಗರದಲ್ಲಿ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಕೆಲವು ಮಾರ್ಗಸೂಚಿಗಳಲ್ಲೂ ಪಾಲಿಕೆ ಬದಲಾವಣೆ ಮಾಡಿಕೊಂಡಿದೆ. ಕಂಟೈನ್ಮೆಂಟ್ ಝೋನ್ ಪ್ರದೇಶದ ಕಾರ್ಯಾಚರಣೆ, ಬಫರ್ ಝೋನ್ ವ್ಯಾಪ್ತಿ ಮಿತಿ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಆದೇಶದ ಅನುಸಾರ ಬಫರ್‌ಝೋನ್ ವ್ಯಾಪ್ತಿ, ಆರೋಗ್ಯ ತಪಾಸಣೆ ಕಾರ್ಯಾಚರಣೆ ಹಾಗೂ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದ್ದಾರೆ.
ನಿಯಂತ್ರಿತ ವಲಯ: ಸೋಂಕು ದೃಢಪಟ್ಟ ಪ್ರದೇಶ (ಕಂಟೈನ್ಮೆಂಟ್ ಝೋನ್)ಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಲ್ಲದೆ, ನಿಯಂತ್ರಿತ ವಲಯದಲ್ಲಿ ಯಾವುದೇ ಹೊಸ ಪ್ರಕರಣ ದೃಢಪಟ್ಟರೂ, ಆ ಪ್ರಕರಣ ದೃಢಪಟ್ಟ ದಿನದಿಂದ 28 ದಿನಗಳ ಕಾಲ ಸೋಂಕು ದೃಢಪಟ್ಟ ನಿರ್ದಿಷ್ಟ ವಾರ್ಡ್ ಕಂಟೈನ್ಮೆಂಟ್ ಆಗಿರಲಿದೆ. ಹತ್ತು ಜನ ಅಥವಾ ಅದಕ್ಕಿಂತ ಕಡಿಮೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಕ್ವಾರಂಟೈನ್ ನಲ್ಲಿದ್ದರೆ, ಆ ವಾರ್ಡ್ ಕಂಟೈನ್ಮೆಂಟ್ ಆಗಲಿದೆ. ಹೊಸ ಮಾರ್ಗಸೂಚಿಯ ಅನುಸಾರ ಬಫರ್‌ಝೋನ್ ವ್ಯಾಪ್ತಿಯನ್ನು 1 ಕಿ.ಮೀ ನಿಂದ 200 ಮೀ.ಗೆ ಸೀಮಿತ ಮಾಡಲಾಗಿದೆ.
ವಸತಿ ಸಮುತ್ಛಯ: ಈ ಹಿಂದೆಯ ಮಾರ್ಗಸೂಚಿಯ ಅನುಸಾರ ಇಡೀ ಅರ್ಪಾಟ್‌ಮೆಂಟ್ ಅನ್ನು ಸೀಲ್‌ಡೌನ್ ಮಾಡಲಾಗುತ್ತಿತ್ತು. ಸದ್ಯ ಇದರಲ್ಲಿ ಸಡಿಲಿಕೆ ತರಲಾಗಿದ್ದು, ಸೋಂಕು ದೃಢಪಟ್ಟ ವ್ಯಕ್ತಿಯ ವಸತಿ ಸಮುತ್ಛಯದ ಅಂತಸ್ತಿನ ಮೇಲ್ಭಾಗದಲ್ಲಿರುವವರು ಹಾಗೂ ಕೆಳಭಾಗದಲ್ಲಿ (ಮನೆಗಳಲ್ಲಿ) ಇರುವವರನ್ನು ಮಾತ್ರ ಕ್ವಾರಂಟೈನ್ ಮಾಡಲಾಗುತ್ತದೆ.
ಪ್ರತ್ಯೇಕ ಮನೆ ಅಥವಾ ವಿಲ್ಲಾ: ಸೋಂಕು ದೃಢಪಟ್ಟ ವ್ಯಕ್ತಿಯ ಮನೆ ಇರುವ ಬೀದಿ ನಿಯಂತ್ರಿತ ಪ್ರದೇಶವಾಗಿರಲಿದೆ. ವಾಣಿಜ್ಯ ಪ್ರದೇಶದಲ್ಲಿ ಇದ್ದಲ್ಲಿ ನಿರ್ದಿಷ್ಟ ಭಾಗ ಮಾತ್ರ ನಿಯಂತ್ರಿತ ವಲಯವಾಗಲಿದೆ. ಈ ಬಗ್ಗೆ ಮತ್ತಷ್ಟು ಸ್ಪಷ್ಟ ನಿರ್ದೇಶನ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಳೆಗೇರಿ ಪ್ರದೇಶಗಳಲ್ಲಿ ಸೋಂಕು ದೃಢಪಟ್ಟ ವ್ಯಕ್ತಿ ವಾಸವಿರುವ ಮನೆಯ ಮುಂಭಾಗದ ರಸ್ತೆ ಹಾಗೂ ಹಿಂಭಾಗದ ರಸ್ತೆಗಳು ಸಂಪೂರ್ಣ ನಿಯಂತ್ರಿತ ವಲಯ ವ್ಯಾಪ್ತಿಗೆ ಸೇರಲಿದ್ದು, ಈ ಪ್ರದೇಶಕ್ಕೆ ಯಾರು ಪ್ರವೇಶಿಸಲು ಅವಕಾಶ ಇರುವುದಿಲ್ಲ.
ಮ್ಯಾಜಿಸ್ಟ್ರೇಟ್ ನೇಮಕ: ಸೋಂಕು ದೃಢಪಟ್ಟ ಪ್ರದೇಶ ಕಂಟೈನ್ಮೆಂಟ್ ಆದ ಮೇಲೆ ಅದಕ್ಕೆ ಒಬ್ಬರು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ನೇಮಕವಾಗಲಿದ್ದಾರೆ. ಇವರು ಈ ಭಾಗದಲ್ಲಿ ನಿಯಂತ್ರಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪಾಲಿಕೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಈ ಕಮಾಂಡರ್ ಕಾರ್ಯರೂಪಕ್ಕೆ ತರಲಿದ್ದಾರೆ. ಅಲ್ಲದೆ, ಕಂಟೈನ್ಮೆಂಟ್ ಝೋನ್‌ನ ಕೂಗಳತೆಯ ದೂರಲ್ಲಿ ಕೇಂದ್ರ ಸ್ಥಾಪಿಸಿ ಇಲ್ಲಿನ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು ಎಂದು ನಿರ್ದೇಶನಗಳನ್ನು ನೀಡಲಾಗಿದೆ.