ಮೈಸೂರು: ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆಗೆ ಕೊಂಚ ರಿಲ್ಯಾಕ್ಸ್ ದೊರೆತಿದೆ. ಮೈಸೂರಿನಲ್ಲಿ ಲಾಕ್ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ನೂತನ ನಿಯಮಗಳು ನಾಳೆಯಿಂದಲೇ ಜಾರಿಗೆ ಬರಲಿದೆ.
ಈ ಸಂಬಂಧ ಇಂದು ( ಜೂನ್ 25) ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಮೈಸೂರು ಜಿಲ್ಲೆಯನ್ನು ಸರ್ಕಾರ ಕೆಟಗಿರಿ 3ರಿಂದ ಮೇಲ್ಸರ್ಜೆಗೇರಿಸಿ 2ಕ್ಕೆ ಸೇರಿಸಿದೆ. ಇದರ ಪರಿಣಾಮ ಅನ್ ಲಾಕ್ 1 ರಂತೆ ಕೆಟಗಿರಿ 2ಕ್ಕೆ ಅನ್ವಯಿಸಿರುವ ನೀತಿ ನಿಯಮಗಳು ಜಾರಿಯಾಗಲಿದೆ. ಶೇ 10ಕ್ಕಿಂತ ಜಾಸ್ತಿ ಇದ್ದ ಪಾಸಿಟಿವಿಟಿ ದರ ಶೇ5-10ರೊಳಗೆ ಬಂದಿದೆ. ಕೈಗಾರಿಕೆ, ಉದ್ದಿಮೆಗಳು ಶೇ 50ರಷ್ಟು ಕಾರ್ಮಿಕರು ಕೆಲಸ ಮಾಡಲು ಅವಕಾಶ ನೀಡಲಾಗಿದೆ, ಗಾರ್ಮೆಂಟ್ಸ್ ಗಳಿಗೆ ಶೇ 30ರಷ್ಟು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಫಾಸ್ಟ್ ಫುಡ್, ಮದ್ಯದಂಗಡಿಗಳು ಸಹ ಮಧ್ಯಾಹ್ನ 2 ಗಂಟೆವರೆಗೆ ಅನುಮತಿ ನೀಡಲಾಗಿದೆ. ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಗಳಲ್ಲಿ ಪ್ರಯಾಣಿಸಲು ಕೇವಲ ಮೂವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮದುವೆ ಕಾರ್ಯಗಳಿಗೆ 40 ಮಂದಿಗೆ ಅವಕಾಶ ನೀಡಲಾಗಿದೆ. ಮದುವೆಗೆ ತಹಶಿಲ್ದಾರರಿಂದ ಅನುಮತಿ ಪಡೆಯಬೇಕು. ತಹಶೀಲ್ದಾರರೇ ಪಾಸ್ ನೀಡಲಿದ್ದಾರೆ. ಎಲ್ಲಾ ವಸ್ತುಗಳ ಹೋಂ ಡಿಲಿವೆರಿಗೆ 24/7 ಅನುಮತಿ ನೀಡಲಾಗಿದ್ದು, ನಿರ್ಮಾಣ ಕಾಮಗಾರಿ ವಸ್ತುಗಳ ಮಾರಾಟಕ್ಕೂ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 5 ರಿಂದ 10 ರವರೆಗೆ ವಾಕಿಂಗ್ ಜಾಗಿಂಗ್ ಮಾಡಬಹುದು. ಸರ್ಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಬಹುದು. ಕೌಶಲ್ಯ ತರಭೇತಿಯನ್ನ ಕೋವಿಡ್ ನಿಯಮದೊಂದಿಗೆ ನಡೆಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇನ್ನು ಸಂಜೆ 7 ಘಂಟೆಯಿಂದ ಬೆಳಿಗ್ಗೆ 6 ರವೆರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ ವೀಕೆಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದರು.