Advertisement
ಪಿಣರಾಯಿ ರಾಜೀನಾಮೆ: ಅಧಿಕಾರ ಉಳಿಸಿಕೊಂಡ ಎಲ್‌ಡಿಎಫ್ ಒಕ್ಕೂಟದ ಪರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸೋಮವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಔಪಚಾರಿಕವಾಗಿ ರಾಜ್ಯಪಾಲರು ಮುಂದಿನ ಸರಕಾರ ಅಸ್ತಿತ್ವಕ್ಕೆ ಬರುವವರೆಗೆ ಹಂಗಾಮಿ ಮುಖ್ಯಮಂತ್ರಿ ಯಾಗಿರುವಂತೆ ಪಿಣರಾಯಿ ಅವರಿಗೆ ಸೂಚಿಸಿದರು.
Related Articles
Advertisement
ಬಿಜೆಪಿ ವಿರೋಧಿ ರಂಗಕ್ಕೆ ದೀದಿ ನಾಯಕಿ?: ತಮ್ಮ ಬದುಕಿನಲ್ಲೇ ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ಚುನಾವಣೆಯಲ್ಲಿ ಗೆದ್ದು ಬೀಗಿರುವ ದೀದಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ರಂಗಕ್ಕೆ ನಾಯಕಿಯಾಗಲಿದ್ದಾರೆಯೇ? ಪ್ರಧಾನಿ ಮೋದಿಯವರ 15 ರ್ಯಾಲಿಗಳು, 28 ದಿನಗಳಲ್ಲಿ ಅಮಿತ್ ಶಾ ಅವರ 62 ರ್ಯಾಲಿಗಳು, ಕೇಂದ್ರ ಸಂಪುಟ ಸಚಿವರನ್ನು ಏಕಾಂಗಿಯಾಗಿ ಎದುರಿಸಿದ ದೀದಿ ಭರ್ಜರಿ ಜಯ ಗಳಿಸಿದ್ದಾರೆ. ಹೀಗಾಗಿ 2024ರ ಲೋಕಸಭೆ ಚುನಾವಣೆ ವೇಳೆ ಮಮತಾ ಅವರು ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡಿ, ಬಿಜೆಪಿಯನ್ನು ಎದುರಿಸಲು ಚಿಂತನೆ ನಡೆಸಿದ್ದಾರೆಯೇ ಎಂಬ ವಿಶ್ಲೇಷಣೆಯೂ ಶುರುವಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಗಾದಿ ಯಾರಿಗೆ? :
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಲ, ಪುದುಚೇರಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದಕ್ಕೆ ಈಗಾಗಲೇ ಸ್ಪಷ್ಟ ಉತ್ತರ ಸಿಕ್ಕಿದೆ. ಆದರೆ ಅಸ್ಸಾಂನಲ್ಲಿ ಈ ಬಗ್ಗೆ ಕೊಂಚ ಗೊಂದಲ ವೇರ್ಪಟ್ಟಿದೆ. ಈ ವರೆಗೆ ಅಲ್ಲಿ ಮುಖ್ಯಮಂತ್ರಿಯಾಗಿದ್ದ ಸರ್ಬಾನಂದ ಸೊನೊವಾಲ್ ಹಾಗೂ ಕಳೆದ ಚುನಾವಣೆಯಲ್ಲಿ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿರುವ ಪಕ್ಷದ ಹಿರಿಯ ನಾಯಕ ಹಿಮಂತ ಬಿಸ್ವ ಶರ್ಮಾ ಅವರ ನಡುವೆ ಸಿಎಂ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಏರ್ಪಟ್ಟಿದೆ. ಸೋಮವಾರ ಮಾತನಾಡಿದ ಪಕ್ಷದ ಹಿರಿಯ ನಾಯಕ ಜಿತೇಂದ್ರ ಸಿಂಗ್, ಅಸ್ಸಾಂನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಇನ್ನೂ ಬಿಜೆಪಿ ಹೈಕಮಾಂಡ್ ನಿರ್ಧರಿಸಿಲ್ಲ. ಆದರೆ ಯಾರನ್ನೇ ಆರಿಸಿದರೂ ಅದು ಪ್ರಜಾಪ್ರಭುತ್ವ ಮಾದರಿಯಲ್ಲೇ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ.
ವಿಧಾನಸಭೆಗೆ ಮೊದಲ ಬಾರಿ “ಮಾವ-ಅಳಿಯ’ :
ಕೇರಳದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾವ, ಅಳಿಯ ವಿಧಾನಸಭೆ ಪ್ರವೇಶಿಸಿದ ಹೆಗ್ಗಳಿಕೆಗೆ ಹಂಗಾಮಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಅಳಿಯ ಪಿ.ಎ. ಮೊಹಮ್ಮದ್ ರಿಯಾಜ್ ಭಾಜನರಾಗಿದ್ದಾರೆ. ಡೆಮಾಕ್ರಟಿಕ್ ಯೂತ್ ಫೆಡರೇಷನ್ ಪಕ್ಷದ ಅಧ್ಯಕ್ಷರೂ ಆಗಿರುವ ರಿಯಾಜ್, ಪಿಣರಾಯಿ ಪುತ್ರಿ ವೀಣಾ ಅವರ ಪತಿ. ವೀಣಾ ಅವರು ಬೆಂಗಳೂರಿನಲ್ಲಿ ಐಟಿ ಉದ್ಯಮಿಯಾಗಿದ್ದಾರೆ. ವಿಜಯನ್ ಕಣ್ಣೂರು ಜಿಲ್ಲೆಯ ಧರ್ಮದಂ ಕ್ಷೇತ್ರದಿಂದ ಆಯ್ಕೆಯಾಗಿದ್ದರೆ, ರಿಯಾಜ್ ಕಲ್ಲಿಕೋಟೆಯ ಬೆಯ್‌ಪುರೆ ಕ್ಷೇತ್ರದಿಂದ ಗೆದ್ದಿದ್ದಾರೆ.