ಹಾವೇರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೊಸದಾಗಿ ಆಡಳಿತಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಬಹುದಿನಗಳ ಬೇಡಿಕೆಗಳು ಹೊಸ ಸರ್ಕಾರದ ಅವಧಿಯಲ್ಲಾದರೂ ಈಡೇರಬಹುದೇ ಎಂಬ ಆಸೆ ಚಿಗುರೊಡೆದಿದೆ.
ಜಿಲ್ಲೆಯಲ್ಲಿ ಬಹುಮುಖ್ಯವಾಗಿ ಬಹುವರ್ಷಗಳಿಂದ ಮೆಡಿಕಲ್ ಕಾಲೇಜು ಸ್ಥಾಪನೆ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಇದರ ಜತೆಗೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ಹತ್ತು ಹಲವು ಬೇಡಿಕೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಾದರೂ ಈಡೇರಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜ್ 2013ರಲ್ಲಿ ಜಿಲ್ಲೆಗೆ ಮಂಜೂರಿ ಆಗಿಯೇ ಹೋಯಿತು ಎಂಬಷ್ಟರ ಮಟ್ಟಿಗೆ ಕಾಗದ ಪತ್ರಗಳ ವಹಿವಾಟು ನಡೆಯಿತು. ಆದರೆ, ಕೊನೆಯ ಘಳಿಗೆಯಲ್ಲಿ ಅದು ಕೈತಪ್ಪಿ ಬೇರೆ ಜಿಲ್ಲೆಗಳ ಪಾಲಾಯಿತು. 2017ರಲ್ಲಿ ಮತ್ತೆ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಯಿತು. ಆದರೆ, ಆರ್ಥಿಕ ಇಲಾಖೆ ಅನುಮೋದನೆ ಮಾತ್ರ ಸಿಕ್ಕಿಯೇ ಇಲ್ಲ. ಈ ಹೊಸ ಸರ್ಕಾರದ ಅವಧಿಯಲ್ಲಾದರೂ ಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ ಕನಸು ನನಸಾದೀತು ಎಂಬ ಆಶಾಭಾವ ಜನತೆ ಹೊಂದಿದೆ.
2016ರ ಬಜೆಟ್‌ನಲ್ಲಿ ಘೋಷಣೆಯಾದ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಅನುಷ್ಠಾನ ಈಗಲಾದರೂ ಸಾಕಾರಗೊಳ್ಳಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. 2017ರ ಬಜೆಟ್‌ನಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ರೂ. ನೀಡಲಾಗಿದ್ದು, ಈ ವರ್ಷವಾದರೂ ಪ್ರಾಧಿಕಾರದ ಚಟುವಟಿಕೆಗೆ ಹೊಸ ಸರ್ಕಾರದಿಂದ ಚಾಲನೆ ಸಿಗಬಹುದು. ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಚಾಲನೆ ಸಿಗಬಹುದು. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಗಳು ಅಧಿಕೃತವಾಗಿ ಕಾರ್ಯಾರಂಭಿಸುವಲ್ಲಿ ಹೊಸ ಸರ್ಕಾರ ನಿಗಾ ವಹಿಸಬಹುದು ಎಂದು ಆಶಿಸಲಾಗಿದೆ.
ನೀರು, ನೀರಾವರಿ: ಜಿಲ್ಲೆಯಲ್ಲಿ ತುಂಗಭದ್ರಾ, ಧರ್ಮಾ, ಕುಮದ್ವತಿ, ವರದಾ ಹೀಗೆ ನಾಲ್ಕು ನದಿಗಳು ಹರಿದಿವೆ. ಇವುಗಳನ್ನು ಬಳಸಿಕೊಂಡು ಹಾವೇರಿ ನೀರಾವರಿ ಜಿಲ್ಲೆಯಾಗಬೇಕೆಂಬ ಕನಸು ಇನ್ನೂ ಕನಸಾಗಿಯೇ ಇದೆ. ನಿರಂತರ ನೀರು ಯೋಜನೆ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಅನುಷ್ಠಾನಗೊಳ್ಳಬೇಕು. ಜಿಲ್ಲಾ ಕೇಂದ್ರ ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಸ್ವಚ್ಛತೆ, ರಸ್ತೆ ಸೇರಿದಂತೆ ಮೂಲಸೌಲಭ್ಯ ಕೊರತೆ ಸಮಸ್ಯೆ ಕಾಡುತ್ತಿದ್ದು, ಇವುಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬಹುದು ಎಂದು ಭಾವಿಸಲಾಗಿದೆ.
ಹಲವು ಬೇಡಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲಸೌಲಭ್ಯ ವಂಚಿತವಾಗಿದೆ. ಈ ಮಾರುಕಟ್ಟೆಗೆ ಉತ್ತೇಜನ ನೀಡುವ ಉದ್ದೇಶದಿಂದ ಏಳು ವರ್ಷಗಳ ಹಿಂದೆ ಘೋಷಣೆಯಾದ ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಈವರೆಗೂ ಚಾಲನೆ ಸಿಕ್ಕಿಲ್ಲ. ಈಗಲಾದರೂ ಸ್ಪೈಸ್‌ಪಾರ್ಕ್ ನಿರ್ಮಾಣವಾಗಬಹುದೇ ಎಂಬ ಮಹದಾಸೆ ಜನರದ್ದಾಗಿದೆ. ಒಟ್ಟಾರೆ ಹೊಸ ಸರ್ಕಾರದ ಅವಧಿಯಲ್ಲಾದರೂ ಜಿಲ್ಲೆಯ ಬಹುವರ್ಷಗಳ ಬೇಡಿಕೆ ಈಡೇರಬಹುದೇ ಎಂಬ ಕಾತರ ಜನತೆಯದ್ದಾಗಿದ್ದು ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
•ಎಚ್.ಕೆ. ನಟರಾಜ