Advertisement

ನೂತನ ಸರ್ಕಾರದೆದುರು ನೂರಾರು ನಿರೀಕ್ಷೆ!

05:11 PM May 23, 2018 | Team Udayavani |

ಹುಬ್ಬಳ್ಳಿ: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ನೂತನ ಸರಕಾರದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಹಲವು ಅಭಿವೃದ್ಧಿ ಕಾರ್ಯಗಳ ಬಹು ದೊಡ್ಡ ನಿರೀಕ್ಷೆ ಹೊಂದಿದೆ.

Advertisement

ಬೆಂಗಳೂರು ನಂತರದಲ್ಲಿ ರಾಜ್ಯದ ಎರಡನೇ ದೊಡ್ಡ ಮಹಾನಗರ ಎಂಬ ಖ್ಯಾತಿ ಇದೆಯಾದರೂ, ಕನಿಷ್ಠ ಮೂಲಭೂತ ಸೌಕರ್ಯಗಳಿಗೂ ಪರದಾಡುವ ಸ್ಥಿತಿ ಇದೆ. ರಸ್ತೆ, ನೀರು, ತ್ಯಾಜ್ಯ ವಿಲೇವಾರಿ, ಮಾರುಕಟ್ಟೆ ಅಭಿವೃದ್ಧಿ, ಒಳಚರಂಡಿ, ಫ್ಲೈಓವರ್‌, ಕೊಳಗೇರಿಗಳ ಅಭಿವೃದ್ಧಿ ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಬೇಕಿದೆ.

ನೀರಿಗಾಗಿ ಪರದಾಟ: ದೇಶಕ್ಕೆ ಮೊದಲೆನ್ನುವ ರೀತಿಯಲ್ಲಿ 24/7 ನೀರು ಪೂರೈಕೆ ಹೊಂದಿದ ಮಹಾನಗರ ಎಂಬ ಹೆಗ್ಗಳಿಕೆ ಜತೆಗೆ 10-15 ದಿನಕ್ಕೊಮ್ಮೆ ನೀರು ಪೂರೈಕೆಯ ದುಃಸ್ಥಿತಿಯೂ ಇಲ್ಲಿಯದ್ದಾಗಿದೆ. ಮಲಪ್ರಭಾ ನದಿಯ ರೇಣುಕಾ ಸಾಗರ ಹಾಗೂ ಧುಮ್ಮವಾಡದ ನೀರಸಾಗರ ಮಹಾನಗರಕ್ಕೆ ನೀರು ಪೂರೈಕೆ ಮೂಲಗಳಾಗಿವೆ. ಸತತ ಬರದಿಂದಾಗಿ ನೀರಸಾಗರ ಒಣಗಿ ಎರಡು ವರ್ಷಗಳಾಗುತ್ತಿದ್ದು, ಸುಮಾರು 40 ಎಂಎಲ್‌ಡಿ ನೀರಿನ ಕೊರತೆ ಅನುಭವಿಸುವಂತಾಗಿದೆ.

24/7 ನೀರು ಪೂರೈಕೆ ಯೋಜನೆ ಎಲ್ಲ 67 ವಾರ್ಡ್‌ ಗಳಿಗೆ ವಿಸ್ತರಣೆ ಪ್ರಸ್ತಾಪ ಹಲವು ವರ್ಷಗಳಿಂದ ಮೊಳಗುತ್ತಲೇ ಇದೆ. ಮತ್ತೊಂದು  ಕಡೆ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಲಪ್ರಭಾದಿಂದ ಸಗಟು ನೀರು ತರುವ ಯೋಜನೆ ರೂಪುಗೊಂಡು ಐದು ವರ್ಷ ಕಳೆದರೂ ಅದಕ್ಕೆ ಮುಕ್ತಿ ಇಲ್ಲದಂತಾಗಿದೆ. ಮಹಾನಗರಕ್ಕೆ ನೀರಿನ ಸಮರ್ಪಕ ಪೂರೈಕೆ ನಿಟ್ಟಿನಲ್ಲಿ ಮಲಪ್ರಭಾದಿಂದ ಸಗಟು ನೀರು ತರಲು ಅಂದಾಜು 24 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಮಹಾನಗರ ಪಾಲಿಕೆಯಲ್ಲಿ ಹಣ ಇದ್ದರೂ ಸರಕಾರದಿಂದ ಅನುಮೋದನೆ ದೊರೆಯುತ್ತಿಲ್ಲವಾಗಿದೆ.

ಮಹಾನಗರಕ್ಕೆ ಪೂರೈಕೆಯಾಗುವ ನೀರಿನಲ್ಲೇ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಕುಂದಗೋಳ ತಾಲೂಕಿನ ಹಲವು ಗ್ರಾಮಗಳು ಅವಲಂಬನೆಯಾಗಿದ್ದು, ಅಲ್ಲಿಗೂ ನೀರು ನೀಡಬೇಕಿದೆ. ನೀರು ಪೂರೈಕೆಗೆ ಪ್ರತ್ಯೇಕ ವಿದ್ಯುತ್‌ ಎಕ್ಸ್ಪ್ರೆಸ್‌ ಲೈನ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ವಿದ್ಯುತ್‌ ಸಮಸ್ಯೆಯಿಂದ ನೀರು ಪೂರೈಕೆಯ ಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡತೊಡಗಿದೆ.

Advertisement

ಒಳಚರಂಡಿ ಎಂಬ ಮೆಗಾ ಧಾರಾವಾಹಿ ಹಲವು ಆವಾಂತರಗಳೊಂದಿಗೆ ಒಂದು ಅಂಕ ಮುಗಿಸಿದ್ದು, ಇನ್ನಷ್ಟು ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆ ವಿಸ್ತರಣೆಗೊಳ್ಳಬೇಕಿದೆ. ಒಳಚರಂಡಿ, ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಪೈಪ್‌ಲೈನ್‌, ವಿವಿಧ ಕಂಪೆನಿಗಳ ಕೇಬಲ್‌ ಇನ್ನಿತರ ಕಾರಣಕ್ಕೆ ರಸ್ತೆಗಳ ಅಗೆತ ಅನೇಕ ಕಡೆ ರಸ್ತೆಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕಾರ್ಯ ಮಾಡಿವೆ. ರಸ್ತೆಗಳನ್ನು ಸುಧಾರಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ತ್ಯಾಜ್ಯ ವಿಲೇವಾರಿ ಘಟಕ ಮರೀಚಿಕೆ: ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕಳೆದ ಏಳೆಂಟು ವರ್ಷಗಳಿಂದ ಇಂದು, ನಾಳೆ ಎಂದು ಸುಳಿದಾಡುತ್ತಲೇ ಇದೆಯಾದರೂ ಇಂದಿಗೂ ಅದು ಸಾಧ್ಯವಾಗಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತಂತೆ ಪಾಲಿಕೆಯಿಂದ ಪ್ರಸ್ತಾವನೆ ಸಿದ್ಧ ಪಡಿಸುವುದು, ಸರಕಾರದಿಂದ ಅದಕ್ಕೆ ಕೊಕ್ಕೆ ಹಾಕುವುದು ನಡೆಯುತ್ತಲೇ ಬಂದಿದೆ. ಯೋಜನೆ ಬಹುತೇಕ ಸಿದ್ಧಗೊಂಡಿದ್ದು, ಟೆಂಡರ್‌ ಕರೆಯಬೇಕಿದೆ ಎಂಬ ಕಥೆಯನ್ನು ಇಂದಿಗೂ ಹೇಳಲಾಗುತ್ತಿದೆ. ಪಾಲಿಕೆಗೆ ಬರಬೇಕಾದ ಸುಮಾರು 130ಕೋಟಿ ರೂ. ಪಿಂಚಣಿ ಬಾಕಿ ಹಣದ ಕುರಿತಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಹಗ್ಗ ಜಗ್ಗಾಟ, ಆರೋಪ-ಪ್ರತ್ಯಾರೋಪ ಅರ್ಭಟಿಸುತ್ತಿದೆಯಾದರೂ, ನಿರೀಕ್ಷಿತ ಹಣ ಇಂದಿಗೂ ಬಂದಿಲ್ಲ.

ಅವಳಿನಗರದ ಮಾರುಕಟ್ಟೆಗಳ ಅಭಿವೃದ್ಧಿ ಭಾಷಣ-ಹೇಳಿಕೆಗಳಿಗೆ ಸೀಮಿತವಾದಂತಾಗಿದ್ದು, ಯಾವುದೇ ಮಾರುಕಟ್ಟೆಯ ಅಭಿವೃದ್ಧಿ ಭಾಗ್ಯವನ್ನು ಇಂದಿಗೂ ಕಂಡಿಲ್ಲ. ಹುಬ್ಬಳ್ಳಿಯಲ್ಲಿ ಜನತಾ ಬಜಾರ್‌, ಎಂ.ಜಿ. ಮಾರುಕಟ್ಟೆ, ಧಾರವಾಡದ ಸೂಪರ್‌ ಮಾರ್ಕೆಟ್‌ಗಳ ಅಭಿವೃದ್ಧಿಗೆ ಗಮನ ನೀಡಬೇಕಾಗಿದೆ.

ಅವಳಿನಗರದಲ್ಲಿ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡತೊಡಗಿದೆ. ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಂಚಾರ ಮಾರ್ಗ ಇದ್ದಷ್ಟೇ ಇದೆ ಎನ್ನುವುದಕ್ಕಿಂತ ಇದ್ದ ರಸ್ತೆ ಅನ್ಯ ಬಳಕೆಗೆ ಮೀಸಲಾಗುತ್ತಿದೆ. ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಇಲ್ಲವಾಗುತ್ತಿವೆ. ಇದೇ ಸ್ಥಿತಿ ಮುಂದುವರಿದರೆ ಸಂಚಾರ ದೃಷ್ಟಿಯಿಂದ ಬೆಂಗಳೂರಿನಲ್ಲಿನ ದುಃಸ್ಥಿತಿ ಇಲ್ಲಿಯೂ ಗೋಚರಿಸುವುದು ದೂರವಿಲ್ಲ ಎಂದೆನಿಸುತ್ತಿದೆ.

ಸುಗಮ ಸಂಚಾರ ನಿಟ್ಟಿನಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಫ್ಲೈಓವರ್‌ ನಿರ್ಮಾಣ ಪ್ರಸ್ತಾವನೆ ಇದ್ದು, ಕೇಂದ್ರ ಸರಕಾರ ಅಗತ್ಯ ಹಣ ನೀಡಿಕೆಗೆ ಸಿದ್ಧವಿದೆ. ರಾಜ್ಯ ಸರಕಾರ ಕೂಡಲೇ ಡಿಪಿಆರ್‌ ಸಿದ್ಧ ಮಾಡಿ ಪ್ರಸ್ತಾವನೆ ಸಲ್ಲಿಸಲು ಮೀನ-ಮೇಷ ಎಣಿಸುತ್ತಿದೆ ಎಂಬ ಆರೋಪ ಬಿಜೆಪಿಯದ್ದಾಗಿದೆ. ಫ್ಲೈಓವರ್‌ ಸಾಧ್ಯತೆ ಬಗ್ಗೆ ನೂತನ ಸರಕಾರ ತುರ್ತು ಗಮನ ನೀಡಬೇಕಿದೆ. ಕೊಳಗೇರಿಗಳ ಅಭಿವೃದ್ಧಿಗೆ ಮುತುವರ್ಜಿ ವಹಿಸಬೇಕಿದೆ. 

ಆಮೆ ನಡಿಗೆಗೂ ಸವಾಲಾಗುವ ರೀತಿಯಲ್ಲಿ ಹೆಜ್ಜೆ ಇರಿಸುತ್ತಿರುವ ಬಿಆರ್‌ಟಿಎಸ್‌ ಜನರ ತಾಳ್ಮೆಯನ್ನು ಎಷ್ಟು ಸಾಧ್ಯವೋ ಎಲ್ಲವನ್ನೂ ಪರೀಕ್ಷಿಸಿದ್ದು, ಇನ್ನಾದರೂ ಯೋಜನೆ ವೇಗ ಪಡೆಯುವ ನಿಟ್ಟಿನಲ್ಲಿ ನೂತನ ಸರಕಾರ ಮಹತ್ವದ ಹೆಜ್ಜೆ ಇರಿಸಬೇಕಿದೆ. ನೂತನ ಸರಕಾರ ಅವಳಿನಗರಕ್ಕೆ ಹೆಚ್ಚು ಆದ್ಯತೆ ಹಾಗೂ ವಿಶೇಷ ಪ್ಯಾಕೇಜ್‌ ನೀಡಲು ಮುಂದಾದೀತೇ
ಎಂಬ ನಿರೀಕ್ಷೆ ಮಹಾನಗರದ ಜನತೆಯದ್ದಾಗಿದೆ.

ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next