“ಹನುಮದ್ರಾಮಾಯಣ’ವನ್ನು ಆಧರಿಸಿ ಲತಾ ಅವರು ತೆಲುಗಿನಲ್ಲಿ ರಚಿಸಿದ ಕಾದಂಬರಿಯನ್ನು ವಂಶಿಯವರು ಕನ್ನಡಕ್ಕೆ ಅನುವಾದಿಸಿದ್ದು, ಅದನ್ನಾಧರಿಸಿ ಹಿರಿಯ ನಾಟಕಕಾರ ಮತ್ತು ನಟರಾದ ಎಸ್.ವಿ. ಕೃಷ್ಣ ಶರ್ಮ ನಾಟಕ ಹೆಣೆದಿ¨ªಾರೆ. ರಾವಣನ ಪಾತ್ರವೇ ಇಲ್ಲಿ ಕೇಂದ್ರಬಿಂದು. ಅವನ ಸುತ್ತ ರಾಮಾಯಣದ ಕಥೆ ಘಟಿಸುತ್ತದೆ. ವಾಲ್ಮೀಕಿಗಳಿಂದ ಈ ಕಾವ್ಯವನ್ನು ಬರೆಸಲು ಪರೋಕ್ಷ ಕಾರಣನಾದ ರಾವಣ, ನಾವು ಹಿಂದಿನಿಂದ ನಂಬಿಕೊಂಡು ಬಂದಿರುವ ಜನಜನಿತ ದುಷ್ಟ ವ್ಯಕ್ತಿಯಲ್ಲ. ಇಡೀ ಅವನ ವ್ಯಕ್ತಿತ್ವಕ್ಕೊಂದು ಹೊಸ ಮೆರುಗಿನ ಪ್ರಭಾವಳಿ ನೀಡುವ, ಮನುಷ್ಯಸಹಜ ಗುಣಗಳಿಂದ ಕಂಗೊಳಿಸುವ ಇಲ್ಲಿನ ರಾವಣ ನಮ್ಮನ್ನಾವರಿಸಿಕೊಳ್ಳುತ್ತಾನೆ.
Advertisement
ವಾತ್ಸಲ್ಯಮಯಿ, ಉನ್ನತಗುಣಗಳ ಪ್ರತೀಕನಾದ ಇಲ್ಲಿಯ “ಪೌಲಸ್ಥ್ಯ’ ಮಹಾ ಸಂಗೀತಜ್ಞ, ವೈಣಿಕ, ಕವಿ, ವಾಗ್ಮಿ, ರಸಿಕ, ಒಳ್ಳೆಯ ಪತಿ, ಪ್ರೇಮಿ, ಅಣ್ಣ , ಉತ್ತಮ ರಾಜ ಹಾಗೆಯೇ ದೌರ್ಬಲ್ಯಗಳ ದಾಸನೂ ಹೌದು. ವಾಲಿಯಿಂದ ಎರಡು ಬಾರಿ ಬಲಾತ್ಕರಿಸಲ್ಪಟ್ಟ ಮಂಡೋದರಿಯನ್ನು ಧರ್ಮಪತ್ನಿಯಾಗಿ ಸ್ವೀಕರಿಸಿ ಪಟ್ಟದರಾಣಿಯನ್ನಾಗಿ ಮಾಡಿಕೊಳ್ಳುವಂಥ ಹೃದಯವೈಶಾಲ್ಯ ತೋರಿದವ, ಸೀತೆ ತನ್ನ ಹೆಂಡತಿಯ ಮಗಳೆಂದು ತಿಳಿದು ಅವಳ ಯೋಗಕ್ಷೇಮಕ್ಕಾಗಿ ತೌರಿಗೆ ಕರೆತರುವ ಸದುದ್ದೇಶದಿಂದ ಸೀತಾಪಹರಣದ ಅಪವಾದವನ್ನೂ ಲೆಕ್ಕಿಸದೆ ಮಗಳನ್ನು ತೌರಿಗೆ ಕರೆತರುವ ಉದಾರಿ. ಇವೆಲ್ಲಕ್ಕಿಂತ ಮಹತ್ತರವಾಗಿ ನಿಲ್ಲುವುದು ಅವನು ವಾಲ್ಮೀಕಿಯ ಕಾವ್ಯಪ್ರೇರಕನಾಗಿ ರಾಮಾಯಣದ ಕಥೆ ಬರೆಯಲು ಸೂತ್ರಧಾರನಾಗಿ ಮುಖ್ಯಪಾತ್ರ ವಹಿಸುವುದು ಇಲ್ಲಿನ ವೈಶಿಷ್ಟ್ಯ.
Related Articles
Advertisement
ರಂಗತಂತ್ರಗಳ ಜಾಣ್ಮೆ, ಕೌಶಲ್ಯಪೂರ್ಣ ನಿರ್ದೇಶನದ ಜೊತೆಗೆ, ಪರಿಣತ ಅಭಿನಯದಿಂದ ಕೃಷ್ಣ ಶರ್ಮ ಪ್ರೇಕ್ಷಕನ ಮನ ಗೆಲ್ಲುತ್ತಾರೆ. ಉತ್ತಮ ಪ್ರಸಾಧನ (ರಾಮಕೃಷ್ಣ ಮೂಚಿ) ದ ಕುಸುರಿ ಕೆಲಸದಿಂದ ವಾಲ್ಮೀಕಿ- ರಂಗನಾಥರಾವ್, ಮಾರೀಚ- ಪ್ರದೀಪ್ ಅಂಚೆ ಅವರ ಸುಂದರ ಅಭಿನಯ ಸಹಜತೆಯಿಂದ ಮಿಂಚಿತ್ತು. ಉಳಿದಂತೆ ರಾಧಿಕಾ ಭಾರಧ್ವಾಜ, ಪಲ್ಗುಣಿ ,ಅನನ್ಯ ಕಶ್ಯಪ್ ,ಅಶೋಕ್, ಸುಜಿತ್, ಕುಲದೀಪ್ ಮುಂತಾದವರ ಅಭಿನಯ ಇಷ್ಟವಾಗುತ್ತದೆ. ನಾಟಕದ ಜೀವಾಳವಾದ ಸಂಗೀತ ಸೌಂದರ್ಯಕ್ಕೆ ಪಾಲುದಾರರು ಖ್ಯಾತ ಸಂಗೀತ ಸಂಯೋಜಕ ಪದ್ಮಚರಣ್ ಹಾಗೂ ಗಾಯಕ, ಎಸ್. ಶಂಕರ್. ರಂಗಸಜ್ಜಿಕೆ, ಬೆಳಕು ಸಂಯೋಜನೆ ಎಲ್ಲವೂ ಸೂಕ್ತವಾಗಿದ್ದವು.
ಹೆಚ್.ಎನ್. ರಂಗನಾಥ ರಾವ್