ಕೊಚ್ಚಿಯಲ್ಲಿ ಪ್ರಧಾನಿ ಮೋದಿ ಅವರು ಶುಕ್ರವಾರ ದೇಶದ ಗೌರವವನ್ನು ಎತ್ತಿ ಹಿಡಿಯುವ ಭಾರತೀಯ ನೌಕಾ ಪಡೆಯ ನೂತನ ಧ್ವಜವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಬ್ರಿಟಿಷರು ಹಾಗೂ ಮೊಘಲರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ನೂತನ ಲಾಂಛನ ವಿನ್ಯಾಸ ಮಾಡಲಾಗಿದೆ.
ಹೇಗಿದೆ ಹೊಸ ಧ್ವಜ?
ಭಾರತೀಯ ನೌಕಾ ಪಡೆಯ ನೂತನ ಧ್ವಜದ ಎಡ ಮೇಲ್ಭಾಗದಲ್ಲಿ ಭಾರತದ ತ್ರಿವರ್ಣ ಧ್ವಜವಿದೆ. ಬಲಭಾಗದಲ್ಲಿ ಭಾರತೀಯ ರಾಷ್ಟ್ರೀಯ ಚಿಹ್ನೆಯಿದೆ. ಅದರಲ್ಲಿ ದೇವನಾಗರಿ ಲಿಪಿಯಲ್ಲಿ ರಾಷ್ಟ್ರೀಯ ಧ್ಯೇಯವಾಕ್ಯ “ಸತ್ಯ ಮೇವ ಜಯತೇ’ ಎಂದು ಬರೆಯಲಾಗಿದೆ. ಜತೆಗೆ ನೌಕಾ ಪಡೆಯ ಧ್ಯೇಯವಾಕ್ಯ “ಶಂ ನೋ ವರುಣಃ’ ಎಂದು ಬರೆಯಲಾಗಿದೆ.
ಅಷ್ಟಭುಜಾಕಾರವು ಅಷ್ಟ ದಿಕ್ಕುಗಳ ಸೂಚಕ: ಎರಡು ಚಿನ್ನದ ಬಣ್ಣದ ಬಾರ್ಡರ್ ಇರುವ ಅಷ್ಟಭುಜಾಕಾರವು ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ವಿನ್ಯಾಸಗೊಳಿಸಲಾಗಿದೆ. ಸಮುದ್ರದ ರಕ್ಷಣೆ ಬಗ್ಗೆ ಆ ಕಾಲದಲ್ಲೇ ದೂರದೃಷ್ಟಿ ಹೊಂದಿದ್ದ ಶಿವಾಜಿ ಮಹಾರಾಜರು ಪ್ರತ್ಯೇಕ ನೌಕಾಪಡೆಯನ್ನೇ ಹೊಂದಿದ್ದರು. ಅವರ ನೌಕಾಪಡೆಯಲ್ಲಿ 60 ಯುದ್ಧ ನೌಕೆಗಳು ಮತ್ತು ಸುಮಾರು ಐದು ಸಾವಿರ ಯೋಧರು ಇದ್ದರು.
ನೌಕಾ ಪಡೆಯ ಸಾಮರ್ಥಯದ ಸಂಕೇತ: ನೀಲಿ ಬಣ್ಣದ ಅಷ್ಟಭುಜಾಕೃತಿಯು ನೌಕಾ ಪಡೆಯ ಅಷ್ಟ ದಿಕ್ಕುಗಳನ್ನು ತಲುಪುವ ಶಕ್ತಿ ಮತ್ತು ಬಹು ಆಯಾಮದ ಕಾರ್ಯಾಚರಣೆ ಸಾಮರ್ಥಯವನ್ನು ಸಂಕೇತಿಸುತ್ತದೆ.
ಹಳೆಯ ಲಾಂಛನ ಬದಲು: ನೌಕಾಪಡೆಯ ಹಳೆಯ ಲಾಂಛನವು ಸೇಂಟ್ ಜಾರ್ಜ್ ಕ್ರಾಸ್ ಹೊಂದಿತ್ತು. ಇದು ಭಾರತದ ವಸಾಹತುಶಾಹಿ ಆಡಳಿತದ ಸಂಕೇತವಾಗಿತ್ತು.