Advertisement

ಮುಂದಿನ ಅಧಿವೇಶನದಲ್ಲಿ ನೂತನ ಮೀನುಗಾರಿಕಾ ನೀತಿ: ಕೋಟ

08:05 AM Jul 28, 2020 | mahesh |

ಮಂಗಳೂರು: ರಾಜ್ಯದಲ್ಲಿ ನೂತನ ಮೀನುಗಾರಿಕಾ ನೀತಿಯ ಕರಡು ಈಗಾಗಲೇ ಸಿದ್ಧವಾಗಿದ್ದು, ಆಕ್ಷೇಪಗಳನ್ನು ಸ್ವೀಕರಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ವಿಧಾನ ಮಂಡಲದಲ್ಲಿ ಮಂಡಿಸಲಾಗುವುದು ಎಂದು ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮವನ್ನು ದ.ಕ. ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ವೀಕ್ಷಿಸಿ, ಒಂದು ವರ್ಷದ ಸಾಧನೆಗಳ ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

ಕೊರೊನಾ ನಿರ್ವಹಣೆಯಲ್ಲಿ ಜಿಲ್ಲೆ ಯಶಸ್ವಿಯಾಗಿದೆ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಕಾರ್ಯವನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಮಾಡಲಾಗಿದೆ. ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ವ್ಯವಸ್ಥೆ, ಮೀನುಗಾರಿಕೆ ಹಾಗೂ ಬಂದರು ಅಭಿವೃದ್ಧಿ ನಡೆದಿದೆ. ಕೃಷಿ ಸಮ್ಮಾನ್‌ ಯೋಜನೆಯಲ್ಲಿ ರೈತರು ಸಹಾಯ ಪಡೆದಿದ್ದಾರೆ ಎಂದರು.

ವಿಶ್ವ ಮೀನುಗಾರಿಕಾ ದಿನ
ಜು. 30ರಂದು ವಿಧಾನಸೌಧದಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಈ ಸಂದರ್ಭ ಇಲಾಖೆಯ ಸಾಧನೆ ಕುರಿತ ಪುಸ್ತಕ ಬಿಡುಗಡೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ಆತ್ಮ ನಿರ್ಭರ್‌ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಸಿಗಬಹುದಾದ ಅನುದಾನದ ಹಂಚಿಕೆ ಸೇರಿದಂತೆ ಇಲಾಖೆಯ ಮುಂದಿನ ಕಾರ್ಯ-ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಪ್ರತಾಪ್‌ಸಿಂಹ ನಾಯಕ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್‌ ದಿವಾಕರ ಪಾಂಡೇಶ್ವರ, ಡಿಸಿ ಸಿಂಧೂ ಬಿ. ರೂಪೇಶ್‌, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಎಡಿಸಿ ಎಂ.ಜೆ. ರೂಪಾ, ಎಸಿ ಮದನ್‌ ಮೋಹನ್‌ ಉಪಸ್ಥಿತರಿದ್ದರು.

Advertisement

ಕರಾವಳಿಯಲ್ಲಿ “ಮೀನಿನ ಚಿಪ್ಸ್‌’ ಘಟಕ
ಈಗಾಗಲೇ ಬಿಡುಗಡೆ ಮಾಡಿರುವ ಮೀನಿನ ಚಿಪ್ಸ್‌ಗೆ ರಾಜ್ಯಾದ್ಯಂತ ಉತ್ತಮ ಬೇಡಿಕೆ ಬರುತ್ತಿದೆ. ಪೂರೈಸಲು ಸಾಧ್ಯವಾಗದಷ್ಟು ಬೇಡಿಕೆಯಿದೆ. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೀನಿನ ಚಿಪ್ಸ್‌ ತಯಾರಿಸುವ ಪ್ರತ್ಯೇಕ ಘಟಕ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಪೂಜಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next