ಶ್ರಾವಣ ಶುರುವಾಗಿದೆ. ಅಂತೆಯೇ ಗಾಂಧಿನಗರದಲ್ಲಿ ಸಿನಿಮಾ ಚಟುವಟಿಕೆಗಳೂ ಜೋರಾಗಿವೆ. ಅದರಲ್ಲೂ ಹೊಸಬರು ಸದ್ದಿಲ್ಲದೆಯೇ ಒಂದಷ್ಟು ಸಿನಿಮಾಗಳಿಗೆ ಚಾಲನೆ ಕೊಡುತ್ತಿದ್ದಾರೆ. ಆ ಸಾಲಿಗೆ “ಕೃಷ್ಣ ಗಾರ್ಮೆಂಟ್ಸ್’ ಎಂಬ ಸಿನಿಮಾವೂ ಒಂದು. ಹೌದು, ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿರುವ ಚಿತ್ರವಿದು.
ಹಾಗಂತ, ಅವರಿಗೆಲ್ಲ ಅನುಭವ ಇಲ್ಲ ಅಂತೇನಿಲ್ಲ. ಕಿರುತೆರೆಯಲ್ಲಿ ಈಗಾಗಲೇ ಒಂದಷ್ಟು ಅನುಭವ ಪಡೆದು, ಸಿನಿಮಾ ಮಾಡೋಕೆ ಬಂದಿದ್ದಾರೆ. ಸಿದ್ದು ಪೂರ್ಣಚಂದ್ರ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಕೆಲ ವಾಹಿನಿಗಳಲ್ಲಿ, “ಮನೆ ಮಗಳು’,”ಅಗ್ನಿಶಿಕೆ’,”ಯಶೋಧರ ನೆಕ್ಸ್ಟ್ ಸಿಎಂ’,” ಪ್ರೀತಿ ಪ್ರೇಮ’,”ಲವ್‌ಸ್ಟೋರಿ’, “ಬೆಳ್ಳಿ ಕಾಲುಂಗುರ’ ಸೇರಿದಂತೆ ಈವರೆಗೆ ಸುಮಾರು ಹನ್ನೆರೆಡು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅನುಭವ ಸಿದ್ದು ಪೂರ್ಣಚಂದ್ರ ಅವರಿಗಿದೆ.
ಅದೇ ಅನುಭವದ ಮೇಲೆ, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅಂದಹಾಗೆ, ಇತ್ತೀಚೆಗೆ ಪೀಣ್ಯ ಬಳಿ ಇರುವ ಗಾರ್ಮೆಂಟ್ಸ್‌ನಲ್ಲೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ಮನಸ್ಥಿತಿ ಕುರಿತಾದ ಚಿತ್ರ.
ಹಾಗಂತ ಕಮರ್ಷಿಯಲ್ ಅಂಶಗಳಿಗೇನೂ ಬರವಿಲ್ಲ ಎಂಬುದು ನಿರ್ದೇಶಕರ ಮಾತು. ಈ ಚಿತ್ರಕ್ಕೆ ಆಕರ್ಷ್ ಆದಿತ್ಯ ಹೀರೋ ಆಗಿದ್ದಾರೆ. ಇವರಿಗೂ ಇದು ಮೊದಲ ಚಿತ್ರ. ಇವರಿಗೆ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಸ್ಯಾನ್ ಎಂಟರ್‌ಟೈನ್‌ಮೆಂಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಘು ಮೂರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಹಂಸಲೇಖ ಜತೆ ಕೆಲಸ ಮಾಡಿದ್ದ ರಘು ಅವರಿಗೂ ಇದು ಮೊದಲ ಚಿತ್ರ.
ಸಂದೀಪ್ ಹೊನ್ನಳ್ಳಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಚಿತ್ರದಲ್ಲಿ ಕಿರುತೆರೆಯಲ್ಲಿ ನಟಿಸಿ ಅನುಭವ ಇರುವ ರಾಮ್‌ರಾವ್, ಪ್ರಮೀಳಾ ಸುಬ್ರಹ್ಮಣ್ಯ, ನಾಗರಾಜ್ ರಾವ್ ಸೇರಿದಂತೆ ಹೊಸಬರೇ ನಟಿಸಿದ್ದಾರೆ. ಶ್ರವಣ ಬೆಳಗೊಳ, ಮಹದೇಶ್ವರ ಬೆಟ್ಟಿ, ಬೆಂಗಳೂರು, ಶಿವಮೊಗ್ಗ, ಉಡುಪಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಲಿದೆ.