Advertisement

ಹೊಸ ಜಾಗ ಹೊಸ ಜನ

06:00 AM Aug 31, 2018 | |

ಹೊಸ ಜಾಗ, ಹೊಸ ಜನ, ಹೊಸ ವಾತಾವರಣ ಹೇಗೋ ಏನೋ- ಇದು ಮನೆ ಬದಲಾಯಿಸಿದಾಗ, ಹೊಸ ಶಾಲೆಗೆ ಸೇರಿದಾಗ, ಶಾಲೆಯಿಂದ ಕಾಲೇಜಿಗೆ ಹೋದಾಗ ಮೂಡುವ ಸಾಮಾನ್ಯ ಭಾವನೆಗಳು. ಹೊಸ ಜಾಗಕ್ಕೆ ಹೋಗುವ ಮೊದಲೇ ಅಲ್ಲಿಯ ಜನರು ಇಲ್ಲಿಯ ಜನರ ಹಾಗೆ ಇಲ್ಲದಿದ್ದರೆ, ಅಲ್ಲಿಯ ವಾತಾವರಣ ಹಿಡಿಸದಿದ್ದರೆ ಎಂದು ಯೋಚಿಸಲು ಆರಂಭಿಸುತ್ತೇವೆ. ಶಾಲೆ ಮುಗಿಸಿ, ಕಾಲೇಜಿಗೆ ಸೇರಬೇಕಾದಾಗ ಬೇಜಾರಾಗುತ್ತದೆ. ಅಷ್ಟು ವರ್ಷ ಶಾಲೆಯಲ್ಲಿ ಕಲಿತು, ತಮ್ಮ ಹಳೆಯ ಮಿತ್ರರನ್ನೆಲ್ಲ ಬಿಟ್ಟು, ಕಾಲೇಜಿಗೆ ಸೇರಬೇಕಾದಾಗ ಬೇಸರವಾಗುವುದು ಸರ್ವೇಸಾಮಾನ್ಯ. ಕಾಲೇಜಿಗೆ ಸೇರಿದಾಗ ಹೊಸ ಸಹಪಾಠಿಗಳನ್ನು ಕಾಣುತ್ತೇವೆ. ಮೊದಲು ಬರೀ ಮುಗುಳು ನಗೆಯಿಂದ ಶುರುವಾದ ಪರಿಚಯ ನಂತರ ಗೊತ್ತಿಲ್ಲದೆಯೇ ಎಲ್ಲರೂ ಮಿತ್ರರಾಗಿ ಬಿಡುತ್ತೇವೆ. ಒಬ್ಬೊಬ್ಬರ ಆಸಕ್ತಿ, ಗುರಿ ಇವನ್ನೆಲ್ಲ ಕೇಳು ಕೇಳುತ್ತಾ ಹತ್ತಿರವಾಗುತ್ತೇವೆ. 

Advertisement

ಅದೇ ರೀತಿ ಹಳೆಯ ಮನೆಯನ್ನು ತೊರೆದು ಹೊಸ ಮನೆಗೆ ಬಂದಾಗಲೂ ಅದೇ ರೀತಿ ಬೇಜಾರಾಗುತ್ತದೆ. ಹೊಸ ನೆರೆಮನೆಯವರ ಜೊತೆ ಮೆಲ್ಲನೆ ಮಾತು ಆರಂಭವಾಗುತ್ತದೆ. ನಂತರ ಅವರು, “ನಿಮಗೆ ಏನಾದರೂ ಬೇಕಿದ್ದರೆ ನಮ್ಮಲ್ಲಿ ಹೇಳಿ’ ಎಂದು ಧೈರ್ಯ ತುಂಬುತ್ತಾರೆ. ಹೊಸ ವಠಾರಕ್ಕೆ ಒಂದೆರಡು ತಿಂಗಳಲ್ಲಿ ಹೊಂದಿಕೊಳ್ಳುತ್ತೇವೆ. ಒಂದೆರಡು ತಿಂಗಳು ಕಳೆದ ನಂತರ “ಇಲ್ಲಿಗೆ ಬಂದು ಎರಡೇ ತಿಂಗಳಾದದ್ದು. ಆದರೆ ತುಂಬಾ ದಿನವಾದ ಹಾಗೆ ಅನಿಸುತ್ತೆ’- ಎಂದು ಹೇಳುವಷ್ಟರ ಮಟ್ಟಿಗೆ ಹತ್ತಿರವಾಗುತ್ತೇವೆ.

ಆದರೆ, ನಾವು ಹೊಸ ಜಾಗಕ್ಕೆ ಹೋದಾಗ, ಹೊಸಬರನ್ನು ಕಂಡಾಗ ಅವರನ್ನು ಅರಿಯುವ ಮೊದಲೇ ಅವರ ಬಗ್ಗೆ ಒಂದು ಪರಿಕಲ್ಪನೆಯನ್ನು ಮನಸ್ಸಿನಲ್ಲಿ ನಿರ್ಮಿಸುತ್ತೇವೆ. ಆದರೆ, ಯಾರನ್ನೇ  ಆಗಲಿ ಅವರನ್ನು  ನಾವು ಮಾತನಾಡಿಸದೇ ಅರಿಯಲು ಸಾಧ್ಯವಿಲ್ಲ. ಒಬ್ಬರನ್ನು ಅರಿಯುವ ಮೊದಲೇ ಅವರು ಇಂಥವರಿರಬಹುದು ಎಂದು ತಿಳಿಯುವುದಕ್ಕಿಂತ ಅವರ ಬಳಿ ಮಾತನಾಡಿಸಿ ಅವರನ್ನು ಅರಿಯುವುದು ಒಳ್ಳೆಯದು ಅಲ್ಲವೆ? 

ಖುಷಿ
ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next