ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಸಂಭ್ರಮ -2018 ರ ಅಂಗವಾಗಿ ಯಕ್ಷ ಬಳಗ ಹೊಸಂಗಡಿ ,ಮಂಜೇಶ್ವರ ಕಲಾವಿದರಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ್ ಕನ್ಯಾಡಿ ,ಚೆಂಡೆಯಲ್ಲಿ ಶಶಿಕಂಠ ಭಟ್ ಉಜಿರೆ ,ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕಾರ ನೀಡಿದರು . ಪಾತ್ರವರ್ಗದಲ್ಲಿ ಹನುಮಂತನಾಗಿ ಸದಾಶಿವ ಆಳ್ವ ತಲಪಾಡಿ ,ಅರ್ಜುನನಾಗಿ ಜಬ್ಟಾರ್ ಸಮೋ ಸಂಪಾಜೆ ,ವೃದ್ಧ ವಿಪ್ರನಾಗಿ ಸತೀಶ್ ಅಡಪ ಸಂಕಬೈಲ್ ಹಾಗೂ ಮದಂಗಲ್ಲು ಆನಂದ ಭಟ್ ಅರ್ಥಗಾರಿಕೆಯೊಂದಿಗೆ ರಂಜಿಸಿ ದರು . ಪುಣೆಯಲ್ಲಿ ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತಿದ್ದರೂ ತಾಳಮದ್ದಳೆ ಬಹುಕಾಲದಿಂದ ನಡೆದಿರಲಿಲ್ಲ . ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ತಮ್ಮ ಅಪ್ರತಿಮ ಅರ್ಥಗಾರಿಕೆಯಿಂದ ಹಿಡಿದಿಡುವಲ್ಲಿ ಈ ತಾಳಮದ್ದಳೆ ಯಶಸ್ವಿಯಾಯಿತು. ಮುಖ್ಯವಾಗಿ ಜಬ್ಟಾರ್ ಸಮೋ ಹಾಗೂ ಸದಾಶಿವ ಆಳ್ವ ತಲಪಾಡಿ ಇವರುಗಳ ಮಾತುಗಾರಿಕೆಗೆ ಕಲಾರಸಿಕರು ಮನಸೋತರು.
ಯಕ್ಷಸಂಭ್ರಮದಂಗವಾಗಿ ಸಂಜೆ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ನಾಟ್ಯಗುರು ಮದಂಗಲ್ಲು ಆನಂದ ಭಟ್ ನಿರ್ದೇಶನದಲ್ಲಿ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ಹೊಸ ಕಲಾವಿದರ ಅಭಿನಯ ವಿಶೇಷ ಅನುಭವ ನೀಡಿದ್ದಲ್ಲದೆ ಉತ್ತಮ ಮನರಂಜನೆಯನ್ನೂ ಒದಗಿಸಿತು . ಈ ಪ್ರದರ್ಶನದಲ್ಲಿ ಮೂವರು ಅನುಭವಿ ಕಲಾವಿದರನ್ನು ಬಿಟ್ಟರೆ ಉಳಿದಂತೆ ಪ್ರತಿಯೊಬ್ಬರೂ ಹೊಸದಾಗಿ ತರಬೇತಿಯನ್ನು ಪಡೆದು ಅಭಿನಯಸಿ ಸೈ ಎನಿಸಿಕೊಂಡರು.
ಅನುಭವಿ ಕಲಾವಿದ ವಾಸು ಕುಲಾಲ್ ವಿಟ್ಲ ವಿಷ್ಣುವಿನ ಪಾತ್ರಕ್ಕೆ ಜೀವ ತುಂಬಿದ್ದಾರೆ . ದೇವೇಂದ್ರನಾಗಿ ರಂಗಸ್ಥಳದಲ್ಲಿ ಚುರುಕಿನಿಂದ ಅಭಿನಯಿಸುವ ಸುಕೇಶ್ ಶೆಟ್ಟಿ ಎಣ್ಣೆಹೊಳೆ ,ಸುದರ್ಶನ ಪಾತ್ರದಲ್ಲಿ ನುರಿತ ಕಲಾವಿದ ವಿಕೇಶ್ ರೈ ಶೇಣಿ ಪಾತ್ರಕ್ಕೆ ನ್ಯಾಯವೊದಗಿಸಿದರೆ ಉದಯೋನ್ಮುಖ ಕಲಾವಿದ ಜಗದೀಪ್ ಶೆಟ್ಟಿ ಶತ್ರುಪ್ರಸೂದನನ ಪಾತ್ರದಲ್ಲಿ ಮಿಂಚಿ¨ªಾರೆ . ಉಳಿದಂತೆ ಮೂರು ಬಾಲ ಕಲಾವಿದರೂ ಸೇರಿದಂತೆ ಮಂಡಳಿಯು ತರಬೇತಿ ನೀಡಿ ತಯಾರುಗೊಳಿಸಿದ ಹೊಸ ಕಲಾವಿದರೆಲ್ಲರೂ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದ ಭರವಸೆಯ ಕಲಾವಿದರಾಗಿ ನಿರೀಕ್ಷೆ ಹುಟ್ಟಿಸಿ¨ªಾರೆ . ಲಕ್ಷ್ಮೀಯಾಗಿ ಗೀತಾ ದಿನೇಶ್ ಪೂಜಾರಿ ಉತ್ತಮ ಪ್ರದರ್ಶನ ನೀಡಿದರೆ ,ದೇವೇಂದ್ರ ಬಲಗಳಾಗಿ ಸಹನಾ ಚಂದ್ರಶೇಖರ್ ಕುಲಾಲ್ ,ಪ್ರತೀûಾ ದಿನೇಶ್ ಪೂಜಾರಿ ಬಾಲ ಕಲಾವಿದರಾದ ಪ್ರಾಪ್ತಿ ಕಿರಣ್ ರೈ ,ರಿಷ್ಮಾ ರಮೇಶ್ ಶೆಟ್ಟಿ ಹಾಗೂ ಸಾನ್ವಿ ತಾರಾನಾಥ ರೈ ಅಭಿನಯಿಸಿದರು. ರಾಕ್ಷಸ ಬಲಗಳಾಗಿ ಸುದರ್ಶನ ಪೂಜಾರಿ,ನಯನಾ ಚಂದ್ರಹಾಸ್ ಶೆಟ್ಟಿ ,ನವಿತಾ ಸಂಜೀವ ಪೂಜಾರಿ , ಸರಸ್ವತಿ ಚಂದ್ರಶೇಖರ್ ಕುಲಾಲ್ ,ದೂತನಾಗಿ ನಾಗೇಶ್ ಕುಲಾಲ್ ಕಡಂದಲೆ ಅಭಿನಯಿಸಿದರು .ಭಾಗವತರಾಗಿ ಮಹೇಶ್ ಕನ್ಯಾಡಿ ,ಚೆಂಡೆಯಲ್ಲಿ ಶಶಿಕಂಠ ಭಟ್ ಉಜಿರೆ ,ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಸಹಕಾರ ನೀಡಿದರು .
ಕಿರಣ್ ಬಿ. ರೈ ಕರ್ನೂರು